ADVERTISEMENT

ಆರ್‌ಸಿಇಪಿ ವಿರೋಧಿಸಿ ರೈತರ ಬೃಹತ್‌ ಪ್ರತಿಭಟನೆ

ಹಸುಗಳು, ತಮಟೆ ಸದ್ದಿನೊಂದಿಗೆ ನಡೆದ ರ‍್ಯಾಲಿಯಲ್ಲಿ ಮಹಿಳೆಯರೂ ಭಾಗಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 11:18 IST
Last Updated 25 ಅಕ್ಟೋಬರ್ 2019, 11:18 IST
ಆರ್‌ಸಿಇಪಿ ಒಪ್ಪಂದವನ್ನು ವಿರೋಧಿಸಿ ರೈತ ಸಂಘ ಹಮ್ಮಿಕೊಂಡಿದ್ದ ರ‍್ಯಾಲಿಯ ನೋಟ
ಆರ್‌ಸಿಇಪಿ ಒಪ್ಪಂದವನ್ನು ವಿರೋಧಿಸಿ ರೈತ ಸಂಘ ಹಮ್ಮಿಕೊಂಡಿದ್ದ ರ‍್ಯಾಲಿಯ ನೋಟ   

ಚಾಮರಾಜನಗರ:ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಲು ಮುಂದಾಗಿರುವುದನ್ನುವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು, ರೈತ ಮಹಿಳೆಯರು ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಹಸುಗಳು, ತಮಟೆ ಸದ್ದಿನೊಂದಿಗೆಮೆರವಣಿಗೆ ಆರಂಭಿಸಿದ ರೈತರು ಗುಂಡ್ಲುಪೇಟೆ ವೃತ್ತ, ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ ಭುವನೆಶ್ವರಿ ವೃತ್ತ, ಬಿ. ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

‘ಈ ಮುಕ್ತ ವ್ಯಾಪಾರ ಒಪ್ಪಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಶ್ವತವಾಗಿ ಶೂನ್ಯಗೊಳಿಸುತ್ತದೆ.ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರ ಸಮಗ್ರ ಅಧ್ಯಯನ ನಡೆಸದೆ ಸಹಿ ಹಾಕಲು ಮುಂದಾಗಿರುವುದು ದೇಶಕ್ಕೆ ಮಾರಕವಾಗಲಿದೆ. ದೇಶದಲ್ಲಿ ಪ್ರಕೃತಿ ಕುಪಿತಗೊಂಡು ಜನರ ಬದುಕು ಮುಳುಗುತ್ತಿದೆ. ಕೆಲ ಕಡೆ ಮಳೆ ಇಲ್ಲದೆ ಬೆಳೆ ಒಣಗುತ್ತಿದೆ. ದೇಶದ ಆರ್ಥಿಕತೆ, ಉದ್ಯೋಗಗಳು ಕುಸಿಯುತ್ತಿವೆ. ಹೀಗೆ ಕುಸಿಯುತ್ತಿರುವ ಭಾರತದ ಮೇಲೆಕೇಂದ್ರ ಸರ್ಕಾರಬಂಡವಾಳಶಾಹಿಗಳ ಜತೆಗೂಡಿ ಕುಸಿತವನ್ನು ಪಾತಾಳ ಕಾಣುವಂತೆ ಮಾಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಈ ಒಪ್ಪಂದದಿಂದ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತದೆ. ರೈತರ ಆತ್ಮಹತ್ಯೆ ಹೆಚ್ಚಾಗುತ್ತದೆ. ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಹಾಲು ಬಂದು ದೇಶ ಸೇರಲಿದ್ದು, ಇಲ್ಲಿನ ಹೈನುಗಾರಿಕೆ ನೆಲ ಕಚ್ಚಲಿದೆ. ರೈತರು ಹೊರತಾಗಿ ಹಾಲು ಉತ್ಪಾದಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದರು.

‘ಇಂದು ಮಹಿಳೆಯರೆ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಈ ಒಪ್ಪಂದದಿಂದ ರೈತ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ಪೆಟ್ಟು ಬೀಳಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈ ಒಪ್ಪಂದದಿಂದಾಗಿ ಸೂಪರ್‌ ಮಾರ್ಕೆಟ್‌ಗಳು ಮತ್ತು ದೊಡ್ಡ ಕಂಪನಿಗಳು ಸ್ಥಳೀಯ ಮಾರುಕಟ್ಟೆಗಳನ್ನು ನಾಶ ಮಾಡಲಿವೆ. ಸಂಸತ್‌ನಲ್ಲಿ ಯಾವುದೇ ಚರ್ಚೆ ಮಾಡದೆ ಕೇಂದ್ರ ಸರ್ಕಾರ ಆರ್‌ಸಿಇಪಿಗೆಸಹಿ ಹಾಕಲು ಮುಂದಾಗಿರುವುದು ಸರಿಯಲ್ಲ.ನ. 4ರಂದು ಥಾಯ್ಲೆಂಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಇದೊಂದು ತರಾತುರಿಯ ನಿರ್ಧಾರ. ಈ ಒಪ್ಪಂದಕ್ಕೆ ದೇಶದ ವಾತಾವರಣ ಪೂರಕವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪ‍ಡಿಸಿದರು.

ರೈತ ಸಂಘದ ಮೈಸೂರು ಮತ್ತು ಚಾಮರಾಜನಗರ ವಿಭಾಗದ ಕಾರ್ಯದರ್ಶಿ ಮಹೇಶ್ ಪ್ರಭು, ಜಿಲ್ಲಾಧ್ಯಕ್ಷ ಶಿವರಾಮು, ಕಾರ್ಯದರ್ಶಿ ಸಿದ್ದರಾಜು, ಶಾಂತಮಲ್ಲಪ್ಪ, ಗುರುಸ್ವಾಮಿ, ಬಸವಣ್ಣ, ಮಹದೇವಮ್ಮ, ಶಿವಮ್ಮ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಸಣ್ಣ ರೈತರು, ರೈತ ಮಹಿಳೆಯರಿಗೆ ಸಂಕಷ್ಟ

‘ಆರ್‌ಸಿಇಪಿ ಒಪ್ಪಂದದಿಂದಗುಣಮಟ್ಟವಿಲ್ಲದ ವಿದೇಶಿ ಉತ್ಪನ್ನಗಳು ಅಗ್ಗದ ಬೆಲೆಗೆ ನಮ್ಮ ದೇಶಕ್ಕೆ ಲಗ್ಗೆ ಇಡಲಿದ್ದು, ಇದರೊಂದಿಗೆ ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತ ದೇಶದಲ್ಲಿ ಮಾರಾಟ ಮಾಡಲು ಮುಂದಾಗಲಿವೆ. ಸಣ್ಣ ರೈತರು, ರೈತ ಮಹಿಳೆಯರು ಜೀವನೋಪಾಯಕ್ಕೆ ಹೈನುಗಾರಿಕೆ ಅವಲಂಬಿಸಿದ್ದಾರೆ. ಕೇಂದ್ರ ಸರ್ಕಾರ ಸಹಿ ಹಾಕಿದರೆ ಹೈನುಗಾರಿಕೆ ಕ್ಷೇತ್ರ ನಾಶವಾಗಲಿದೆ. ರೈತ ಮಹಿಳೆಯರಿಗೆ ಸಂಕಷ್ಟ ಎದುರಾಗಲಿದೆ’ ಎಂದು ರೈತ ಮುಖಂಡರು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.