ADVERTISEMENT

ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 1:31 IST
Last Updated 17 ಆಗಸ್ಟ್ 2021, 1:31 IST
ವಿವಿಧ 23 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ವಿವಿಧ 23 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ವೇತನ ಹೆಚ್ಚಳ, ನೌಕರಿ ಕಾಯಂ ಸೇರಿದಂತೆ ವಿವಿಧ 23 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿ‌ಸಿದರು.

‘ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಫಾರಸು ಮಾಡಿರುವ ₹3.39 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಇಲಾಖೆಯಿಂದಲೇ ಮೊಟ್ಟೆ ಸರಬರಾಜು ಮಾಡಬೇಕು. ಕೋವಿಡ್‌ ಸಂದರ್ಭದಲ್ಲಿ ನಿಧನರಾದ ಕಾರ್ಯಕರ್ತೆಯರ ಕುಟುಂಬದವರಿಗೆ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆ ನೀಡಬೇಕು. ಕೋವಿಡ್‌ನಿಂದ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ ₹30 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಕೋವಿಡ್‌ ಸಂದರ್ಭದಲ್ಲಿ ನೌಕರರು ನಡೆಸುತ್ತಿರುವ ಕೆಲಸಕ್ಕೆ ₹10 ಸಾವಿರ ಅಪಾಯ ಭತ್ಯೆ ನೀಡಬೇಕು’ ಎಂದು ಪ್ರತಿಭನಕಾರರು ಆಗ್ರಹಿಸಿದರು.

ADVERTISEMENT

2021 ರಲ್ಲಿ ರದ್ದುಪಡಿಸಿರುವ 15 ದಿನಗಳ ಬೇಸಿಗೆ ರಜೆಯನ್ನು ಮಳೆಗಾಲದಲ್ಲಿ ಕೊಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು. ಐಸಿಡಿಎಸ್ ಕೆಲಸ ಹೊರತುಪಡಿಸಿ ಉಳಿದ ಕೆಲಸಗಳನ್ನು ನಿರ್ಬಂಧಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳನ್ನಾಗಿ ಉನ್ನತೀಕರಿಸುವ ಅವೈಜ್ಞಾನಿಕ ಕ್ರಮವನ್ನು ಕೈಬಿಡಬೇಕು ಎಂದರು.

2016ರಿಂದ ನಿವೃತ್ತಿಯಾದ 7,166 ಅಂಗನವಾಡಿ ನೌಕರರಿಗೆ ಬಾಕಿ ಇರುವ ಇಡುಗಂಟು ಕೊಡಬೇಕು. 2015ರಿಂದ ಹೊಸದಾಗಿ ನೇಮಕ ಆದವರಿಗೆ ಎಲ್‌ಐಸಿ ಆಧರಿತ ನಿವೃತ್ತಿ ಸೌಲಭ್ಯ ಕೊಡಬೇಕು. ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು. ಮಾಡುವ ತನಕ ₹21 ಸಾವಿರ ವೇತನ ಕೊಡಬೇಕು. ಖಾಲಿ ಇರುವ ಸಹಾಯಕಿಯರು ಹಾಗೂ ಕಾರ್ಯಕರ್ತೆಯರ ಹುದ್ದೆಗಳನ್ನು ಮತ್ತು ಇಲಾಖೆ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಜಾತ, ಕಾರ್ಯದರ್ಶಿ ಎ.ನಾಗಮಣಿ, ಉಪಾಧ್ಯಕ್ಷೆ ಕೆ.ಬಿ.ಮೀನಾ, ತಾಲ್ಲೂಕು ಘಟಕದ ಅಧ್ಯಕ್ಷೆ ರೇವಮ್ಮ ಆರ್‌.ಜಿ., ಪ್ರಧಾನ ಕಾರ್ಯದರ್ಶಿ ಶಾಹಿದಾ ಬಾನು,ಗುರುಲಿಂಗಮ್ಮ, ಸರೋಜಮ್ಮ, ಮೀನಾಕ್ಷಿ, ಭಾಗ್ಯ, ಪುಟ್ಟಬಸಮ್ಮ, ಕಾಂಚನಾ, ಶಾಂತಮ್ಮ, ಜಯಮಾಲ, ಪಾರ್ವತಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.