ADVERTISEMENT

ಬಗರ್‌ಹುಕುಂ ಸಾಗುವಳಿ ಚೀಟಿ ಹಂಚಿಕೆಯಲ್ಲಿ ಅಕ್ರಮ: ಆರೋಪ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕದಂಬ ಸೇನೆ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 15:22 IST
Last Updated 3 ಫೆಬ್ರುವರಿ 2021, 15:22 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕದಂಬ ಸೇನೆಯ ಪದಾಧಿಕಾರಿಗಳು ಬುಧವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕದಂಬ ಸೇನೆಯ ಪದಾಧಿಕಾರಿಗಳು ಬುಧವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಬಗರ್‌ಹುಕುಂ ಸಾಗುವಳಿ ಚೀಟಿ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕದಂಬ ಕನ್ನಡ ಸೇನೆಯ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟಿನ ಬಳಿ ಸೇರಿದ ಪ್ರತಿಭಟನನಿರತರು, ಅಲ್ಲಿಂದ ತಹಶೀಲ್ದಾರ್‌ ವಿರುದ್ಧಘೋಷಣೆಗಳನ್ನು ಕೂಗುತ್ತಾ ಜಿಲ್ಲಾಡಳಿತ ಭವನದವರೆಗೆ ತೆರಳಿ ಪ್ರತಿಭಟನೆ ನಡೆಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

‘ಬಗರ್‌ಹುಕುಂ ಸಾಗುವಳಿ ಚೀಟಿ ಹಂಚಿಕೆಯಲ್ಲಿ ಅಕ್ರಮಗಳು ನಡೆಯುತ್ತಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಾಲ್ಲೂಕು ಕಚೇರಿ ಸಿಬ್ಬಂದಿ ಜೊತೆ ಶಾಮೀಲಾಗಿ ಅಕ್ರಮ ನಡೆಸಲು ಮುಂದಾಗುತ್ತಿದ್ದಾರೆ.ಕೆಲವರು, ಜಮೀನು ತಮ್ಮ ಸ್ವಾಧೀನ ಮತ್ತು ಅನುಭೋಗದಲ್ಲಿ ಇಲ್ಲದಿದ್ದರೂ, ಭೂಸ್ವಾಧೀನ ಹೊಂದಿರುವುದಾಗಿ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಎಚ್.ಡಿ ಫಾರೆಸ್ಟ್‌ನ ಜಮೀನುಗಳ ದುರಸ್ತಿಯಾಗದೆ ರೈತರು ಕಷ್ಟಪಡುವಂತಾಗಿದೆ. ಇಂತಹ ಪರಿಸ್ಥಿತಿಯನ್ನು ಬಂಡವಾಳವಾಗಿಸಿಕೊಂಡು ಕೆಲವರು ಉಳುಮೆ ಮಾಡುತ್ತಿರುವವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

‘ಹೊಸದಾಗಿ ಸಾಗುವಳಿ ನೀಡಬೇಕಾದ ವ್ಯಕ್ತಿಗಳ ಅನುಭೋಗದಲ್ಲಿರುವ ಜಮೀನನ್ನು ಖುದ್ದು ಪರಿಶೀಲಿಸಲು ಒಂದು ತಂಡ ರಚನೆ ಮಾಡಿ ಸಾಗುವಳಿ ನೀಡಬೇಕು. ಈಗಾಗಲೇ ನೀಡಿರುವ ಸಾಗುವಳಿ ವ್ಯಕ್ತಿಗಳಿಗೆ ಹದ್ದು ಬಸ್ತು ಹಾಗೂ ದುರಸ್ತಿ ಮಾಡಿಕೊಡಬೇಕು ಮತ್ತು ಅವರ ಜಮೀನನ್ನು ಗುರುತಿಸಿಕೊಡಬೇಕು’ ಎಂದು ಅವರು ಆಗ್ರಹಿಸಿದರು.

‘ತಾಲ್ಲೂಕು ಕಚೇರಿಗೆ ಬರುವ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿಕೊಡಬೇಕು. ಸುಳ್ಳು ದೂರುಗಳನ್ನು ಆಧರಿಸಿ ರೈತರ ಜಮೀನಿನ ಮೇಲೆ ಪ್ರಕರಣ ದಾಖಲಿಸುವುದನ್ನು ಕೈ ಬಿಡಬೇಕು. ಗ್ರಾಮ ಲೆಕ್ಕಿಗರು ಹಾಗೂ ರಾಜಸ್ವ ನಿರೀಕ್ಷಕರು ತಮ್ಮ ಕೇಂದ್ರ ಸ್ಥಾನಗಳಲ್ಲಿದ್ದು ಕೆಲಸ ನಿರ್ವಹಿಸುವಂತೆ ಆದೇಶಿಸಬೇಕು. ಪ್ರತಿ ತಿಂಗಳು ಕುಂದುಕೊರತೆ ಸಭೆ ನಡೆಯಬೇಕು. ಭೂ ದಾಖಲೆಗಳ ಇಲಾಖೆಯು ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ಆಗ್ರಹಿಸಿದರು.

ಸೇನೆಯ ಅಧ್ಯಕ್ಷ ಅಂಬರೀಶ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ನಿಜಧ್ವನಿಗೋವಿಂದರಾಜು, ರಾಮಸಮುದ್ರ ಸುರೇಶ್, ಪ್ರಶಾಂತಕುಮಾರ್, ಶಂಭುನಾಯಕ್, ಸಂತೋಷ್, ಕುಮಾರ್, ರಾಜಶೇಖರ್, ವಿಶ್ವಾಸ್, ಗಣೇಶ್, ಮುರುಗನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.