ADVERTISEMENT

ಸೋಮಣ್ಣ ವರ್ತನೆಗೆ ಆಕ್ರೋಶ: ವಜಾಗೆ ಆಗ್ರಹ

ಮಹಿಳೆ ಕೆನ್ನೆಗೆ ಬಾರಿಸಿದ ಪ್ರಕರಣ, ರೈತ ಸಂಘದಿಂದ ಪ್ರತಿಭಟನೆ, ಬಿಎಸ್‌ಪಿ ಖಂಡನೆ, ಜಾಲತಾಣಗಳಲ್ಲೂ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 7:02 IST
Last Updated 24 ಅಕ್ಟೋಬರ್ 2022, 7:02 IST
ಮಹಿಳೆಯ ಕೆನ್ನೆಗೆ ಹೊಡೆದಿರುವ ಸಚಿವ ಸೋಮಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಭಾನುವಾರ ರಸ್ತೆ ತಡೆ ನಡೆಸಿದರು
ಮಹಿಳೆಯ ಕೆನ್ನೆಗೆ ಹೊಡೆದಿರುವ ಸಚಿವ ಸೋಮಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಚಾಮರಾಜನಗರದಲ್ಲಿ ಭಾನುವಾರ ರಸ್ತೆ ತಡೆ ನಡೆಸಿದರು   

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದಲ್ಲಿ ಶನಿವಾರ ಸಂಜೆ ನಡೆದ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕೆಂಪಮ್ಮ ಎಂಬ ಮಹಿಳೆಯ ಕೆನ್ನೆಗೆ ಹೊಡೆದಿರುವುದಕ್ಕೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಜನರು ಸೋಮಣ್ಣ ವರ್ತನೆಯನ್ನು ಖಂಡಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿ, ವಿಡಿಯೊಗಳನ್ನು ಶೇರ್‌ ಮಾಡಿದ್ದಾರೆ. ವರದಿಗಳಿಗೆ ಕಾಮೆಂಟ್‌ಗಳನ್ನೂ ಹಾಕಿದ್ದಾರೆ.

ರೈತ ಸಂಘ, ಬಿಎಸ್‌ಪಿ ಸೇರಿದಂತೆ ಸಂಘಟನೆಗಳು, ರಾಜಕೀಯ ಪಕ್ಷಗಳು ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿವೆ.

ADVERTISEMENT

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ: ಘಟನೆಯನ್ನು ಖಂಡಿಸಿ ರೈತಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಸೋಮಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ‘ಪ್ರಭಾವಿ ಸಚಿವರಾದ ಸೋಮಣ್ಣ, ಮಹಿಳೆಗೆ ಹೊಡೆದಿದ್ದಾರೆ. ಪೊಲೀಸರು ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ ಸೋಮಣ್ಣ ಅವರಿಂದ ರಾಜೀನಾಮೆ ತೆಗೆದುಕೊಳ್ಳಬೇಕು ಇಲ್ಲವೇ ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಸೋಮಣ್ಣ ಅವರು ಸುಳ್ಳಿನ ಸರದಾರ. ಮಹಿಳೆ ಕೇಳುವುದಕ್ಕೆ ಹೋದರೆ ಕಪಾಳಕ್ಕೆ ಹೊಡೆಯುತ್ತಾರೆ ಎಂದರೆ ಅರ್ಥವೇನು? ಇದು ‌ಗೂಂಡಾ ಸರ್ಕಾರ ಆಗುತ್ತದೆ. ಸೋಮಣ್ಣ ಅವರನ್ನು ತೆಗೆದು ಜಿಲ್ಲೆಗೆ ವಾರದ ಒಳಗೆ ಹೊಸ ಉಸ್ತುವಾರಿ ಸಚಿವರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

‘ಸೋಮಣ್ಣ ರೈತ ವಿರೋಧಿ ಧೋರಣೆ ಅನುಭವಿಸುತ್ತಿದ್ದಾರೆ. ಸಭೆಗೆ ವಿಳಂಬವಾಗಿ ಬರುವುದರ ಮೂಲಕ ರೈತರನ್ನು ಅವಮಾನಿಸಿದ್ದಾರೆ. ತಕ್ಷಣವೇ ಅವರು ರೈತರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. ಪ್ರತಿಭಟನಕಾರರು ಸೋಮಣ್ಣ ವಿರುದ್ಧ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರಿಗೆ ಲಿಖಿತ ದೂರು ನೀಡಿದರು.

ರೈತ ಸಂಘದ ಇನ್ನೊಂದು ಬಣದ ಜಿಲ್ಲಾ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌, ಹೊನ್ನೂರು ಬಸವಣ್ಣ ಸೇರಿದಂತೆ ಹಲವರು ಇದ್ದರು.

ಬಂಧನಕ್ಕೆ ಆಗ್ರಹ: ಘಟನೆಗೆ ಸಂಬಂಧಿಸಿದಂತೆ ಸೋಮಣ್ಣ ವಿರುದ್ಧ ಹರಿ ಹಾಯ್ದಿರುವ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ‘ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸ ಬೇಕು’ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು, ದುರ್ಬಲರು ಮತ್ತು ಮಹಿಳೆ ಯರ ಮೇಲೆ ದಬ್ಬಾಳಿಕೆ ದೌರ್ಜನ್ಯ ಹೆಚ್ಚಾಗಿದೆ.ಮಂತ್ರಿಗಳು ಮತ್ತು ಶಾಸಕರ ಮಿತಿಮೀರಿದ ಅಧಿಕಾರದ ಮದ ಹಾಗೂ ಫ್ಯೂಡಲ್ ಮನಸ್ಥಿತಿ ಇದಕ್ಕೆ ಕಾರಣ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಮಾರ್ಗದರ್ಶಕ ಸಂಘಟನೆ ಆರ್‌ಎಸ್‌ಎಸ್‌ಗೆ ನೈತಿಕತೆ ಹಾಗೂ ಮಾನವೀಯತೆ ಇದ್ದರೆ ಮೊದಲು ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಮಹಿಳೆಯ ಮೇಲೆ ಒತ್ತಡ ತಂದು, ಸಚಿವರು, ‘ನನಗೆ ಹೊಡೆದಿಲ್ಲ’ ಎಂದು ಹೇಳಿಕೆ ನೀಡುಸುತ್ತಿರುವುದು ನಾಚಿಕೆಗೇಡಿನ ಪರಮಾವಧಿ.ಕೇಂದ್ರ ಮತ್ತು ರಾಜ್ಯ ಮಹಿಳಾ ಆಯೋಗಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಒತ್ತಡ ಹಾಕಿ ಮಹಿಳೆಯಿಂದಹೇಳಿಕೆ: ಕಾಂಗ್ರೆಸ್‌ ಮುಖಂಡ
ಗುಂಡ್ಲುಪೇಟೆ:
ಸಚಿವ ಸೋಮಣ್ಣ ಮಹಿಳೆಯ ಕೆನ್ನೆಗೆ ಹೊಡೆದಿರುವುದನ್ನು ಖಂಡಿಸಿರುವ ಕಾಂಗ್ರೆಸ್‌ ಮುಖಂಡ ಎಚ್.ಎಂ.ಗಣೇಶಪ್ರಸಾದ್, ‘ಮಹಿಳೆ ಕಪಾಳಕ್ಕೆ ಹೊಡೆದಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆದರೂ ಘಟನೆಯನ್ನು ಮರೆಮಾಚಲು ಸೋಮಣ್ಣ ಹಿಂಬಾಲಕರು ಹಾಗೂ ಬಿಜೆಪಿ ಮುಖಂಡರು ಮಹಿಳೆ ಮೇಲೆ ಒತ್ತಡ ಹಾಕಿ ‘ಸಚಿವರು ಹೊಡೆದಿಲ್ಲ’ ಎಂದು ಹೇಳಿಕೆ ಕೊಡಿಸಿದ್ದಾರೆ’ ಎಂದು ದೂರಿದರು.

‘ನಿವೇಶನ ಹಂಚಿಕೆ ವಿಚಾರದಲ್ಲಿ ನ್ಯಾಯ ಕೊಡಿಸುವಂತೆ ಸಚಿವರ ಮುಂದೆ ಮಹಿಳೆ ಮನವಿ ಮಾಡಿದರೂ ನ್ಯಾಯ ದೊರಕಿಸುವ ಬದಲು ಹಿಂದುಳಿದ ವರ್ಗದ ಮಹಿಳೆ ಮೇಲೆಯೇ ಹಲ್ಲೆ ಮಾಡುವ ಮೂಲಕ ಸೋಮಣ್ಣ ದುರ್ವರ್ತನೆ ತೋರಿದ್ದಾರೆ. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಪೊಲೀಸರ ವೈಫಲ್ಯ: ‘ವೇದಿಕೆ ಮೇಲೆ ಮಹಿಳೆಯನ್ನು ಬಿಡುವ ಮೂಲಕ ಪೊಲೀಸರು ವೈಫಲ್ಯ ತೋರಿದ್ದಾರೆ. ಆಕೆ ವೇದಿಕೆ ಏರುವ ಮುನ್ನವೇ ತಡೆಯಬಹುದಿತ್ತು. ಘಟನೆ ಪೊಲೀಸರ ಮುಂದೆ ನಡೆದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಗಣೇಶ್‌ ಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.