ADVERTISEMENT

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಆದ್ಯತೆಯಾಗಲಿ: ಡಿ.ಸಿ.ಶೃತಿ

ಮರಿಯಾಲ ಮುರುಘರಾಜೇಂದ್ರ ಸ್ವಾಮಿ ಸಿಬಿಎಸ್‌ಇ ಶಾಲೆಯ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:07 IST
Last Updated 12 ಜನವರಿ 2026, 6:07 IST
ಚಾಮರಾಜನಗರದ ತಾಲ್ಲೂಕಿನ ಮುರುಘ ರಾಜೇಂದ್ರಸ್ವಾಮಿ ಸಿಬಿಎಸ್‌ಇ ಶಾಲೆಯ 8ನೇ ವಾರ್ಷಿಕೋತ್ಸವ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ ಉದ್ಘಾಟಿಸಿದರು
ಚಾಮರಾಜನಗರದ ತಾಲ್ಲೂಕಿನ ಮುರುಘ ರಾಜೇಂದ್ರಸ್ವಾಮಿ ಸಿಬಿಎಸ್‌ಇ ಶಾಲೆಯ 8ನೇ ವಾರ್ಷಿಕೋತ್ಸವ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ ಉದ್ಘಾಟಿಸಿದರು   

ಚಾಮರಾಜನಗರ: ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ.ಸಿ.ಶೃತಿ ಸಲಹೆ ನೀಡಿದರು.

ನಗರದ ಹೊರ ವಲಯದಲ್ಲಿರುವ ಮುರುಘ ರಾಜೇಂದ್ರಸ್ವಾಮಿ ಸಿಬಿಎಸ್‌ಇ ಶಾಲೆಯ 8ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಮಗುವಿನ ಸರ್ವತೋಮುಖ ಅಭಿವೃದ್ದಿ ಸಾಧ್ಯವಿದ್ದು ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಈಚೆಗೆ ಸಾರ್ವಜನಿಕರಲ್ಲಿ ಶಿಕ್ಷಣದ ಮಹತ್ವ ಅರಿವಿಗೆ ಬರುತ್ತಿದ್ದು ಉತ್ತಮ ಶಿಕ್ಷಣ ಕೊಡಿಸಲು ಗ್ರಾಮೀಣ ಭಾಗಗಳನ್ನು ತೊರೆದು ನಗರ ಪ್ರದೇಶಗಳತ್ತ ಹೋಗುತ್ತಿದ್ದಾರೆ. ಮರಿಯಾಲದ ಮುರುಘ ರಾಜೇಂದ್ರಸ್ವಾಮಿ ಶಾಲೆ ಕೂಡ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಅನ್ನ ಹಾಗೂ ಜ್ಞಾನ ದಾಸೋಹಕ್ಕೆ ಕೊಡುಗೆ ನೀಡಿದೆ ಎಂದರು.

ADVERTISEMENT

ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರವಂತರಾಗಬೇಕು, ಗುರುಗಳ ಮಾರ್ಗದರ್ಶನದೊಂದಿಗೆ ಗುರಿಯೆಡೆಗೆ ಸಾಗಬೇಕು. ಸಾಧಿಸುವ ಛಲದೊಂದಿಗೆ ಮುನ್ನುಗಿದರೆ ಯಶಸ್ಸು ಖಚಿತವಾಗಿ ಸಿಗುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗಿರುವ ಶಾಲೆಯು ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಮೌಲ್ಯಧಾರಿತ ಶಿಕ್ಷಣಕ್ಕೆ ಶಾಲೆ ಆದ್ಯತೆ ನೀಡಿದೆ ಎಂದರು.

ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ, ಪ್ರಯೋಗಾತ್ಮಕ ಚುಟವಟಿಕೆಗಳಲ್ಲಿ  ಭಾಗವಹಿಸುವಂತೆ ಪೂರಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಎಚ್.ಎಂ.ಗಿರೀಶ್, ಸಂಸ್ಥೆಯ ಉಪಾಧ್ಯಕ್ಷ ಕುಮಾರಸ್ವಾಮಿ, ಬ್ರಹ್ಮದೇವ ಬುಕ್‌ ಡಿಪೋನ ಬ್ರಹ್ಮೇಶ್‌ ಕುಮಾರ್, ನಿವೃತ ಮುಖ್ಯ ಶಿಕ್ಷಕ ಕೆ.ಎಸ್.ಮಹದೇವಸ್ವಾಮಿ, ಶಿಕ್ಷಕರಾದ ನಿರ್ಮಲಾ ನಾಗೇಂದ್ರ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.