ADVERTISEMENT

ಪ್ರಶ್ನೆಗಳ ಹುಟ್ಟುಹಾಕಿದ ವೈರಲ್ ಆಡಿಯೊ

ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ, ಜಿಲ್ಲಾಧಿಕಾರಿ ವರ್ಗಾವಣೆ ವಿಚಾರವೂ ಪ್ರಸ್ತಾಪ

ಸೂರ್ಯನಾರಾಯಣ ವಿ
Published 9 ಜೂನ್ 2021, 5:03 IST
Last Updated 9 ಜೂನ್ 2021, 5:03 IST
ಅಬ್ರಾರ್‌ ಅಹಮದ್
ಅಬ್ರಾರ್‌ ಅಹಮದ್   

ಚಾಮರಾಜನಗರ: ಜಿಲ್ಲೆಗೆ ವೈದ್ಯಕೀಯ ಆಮ್ಲಜನಕ ಪೂರೈಸುವ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವೈರಲ್ ಆಗಿರುವ ಐದು ಆಡಿಯೊ ತುಣುಕುಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ತುಣುಕುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ನಡೆಯುತ್ತಿದೆ.

ಅದರಲ್ಲೂ ವಿಶೇಷವಾಗಿ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಉಪ ಔಷಧ ನಿಯಂತ್ರಕ ಅರುಣ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಗ್ಗೆ‌ ಹೆಚ್ಚು ಚರ್ಚೆ ನಡೆಯುತ್ತಿದೆ. ಹಲವರು ಸಿಂಧೂರಿ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಆಮ್ಲಜನಕ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂಬುದು ಗೊತ್ತಿದ್ದರೂ ಚಾಮರಾಜನಗರ ಜಿಲ್ಲಾಡಳಿತ ಸುಮ್ಮನೆ ಇದ್ದುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದೇ ಇರುವ ಸರ್ಕಾರದ ನಿಲುವು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಲು ಜನಪ್ರತಿನಿಧಿಗಳು ಯಾರೂ ಪ್ರಯತ್ನಿಸಿಲ್ಲ ಎಂದು ಅಸಮಾಧಾನವನ್ನೂ ಹೊರ ಹಾಕಿದ್ದಾರೆ.

ADVERTISEMENT

ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಪ್ರಸ್ತಾಪಿಸಿರುವ ಜನರು, 24 ಜನರು ಮೃತಪಟ್ಟಿದ್ದರೂ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಯಾಕಿನ್ನೂ ವರ್ಗವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಚಾಮರಾಜನಗರ ಡಿಸಿ ವರ್ಗಾವಣೆ ರದ್ದುಪಡಿಸುವಲ್ಲಿ, ಮೈಸೂರು ಡಿಸಿ ವರ್ಗಾವಣೆ ಮಾಡಿಸುವಲ್ಲಿ ಆ ಜಿಲ್ಲೆಯ ರಾಜಕಾರಣಿಗಳ ಪಾತ್ರ ಬಹುಮುಖ್ಯವಾಗಿದೆ’ ಎಂದು ವಸಂತ್‌ ಹೆಗ್ಗೊಠಾರ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಚಾಮರಾಜನಗರದ ಡಿಸಿ ವರ್ಗಾವಣೆ ಆದರೆ ಕೋವಿಡ್‌ ನಿಯಂತ್ರಣಕ್ಕೆ ತೊಂದರೆಯಾಗುತ್ತದೆ. ಅದೇ ಮೈಸೂರಿನ ಡಿಸಿ ವರ್ಗಾವಣೆಯಾಗಿದೆ. ಆದರೆ ತೊಂದರೆಯಾಗುವುದಿಲ್ಲವೇ...! ಏನ್ರೋ ನಿಮ್ಮ ಲಾಜಿಕ್‌’ ಎಂದು ‘ನವ ಭಾರತ’ ಎಂದು ಪ್ರೊಫೈಲ್‌ ಹೆಸರು ಇಟ್ಟುಕೊಂಡವರು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

ರಾಜಕೀಯ ಮುಖಂಡರು ಹಾಗೂ ಜನರ ನಡುವೆಯೂ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ದುರಂತ ನಡೆದು 40 ದಿನಗಳ ನಂತರ, ಅದರಲ್ಲೂ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದ ನಂತರ ಆಡಿಯೊ ವೈರಲ್ ಆಗಿರುವುದರ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆಡಿಯೊ ತುಣುಕುಗಳಲ್ಲಿ ಕೇಳಿ ಬರುವ ಮಾತುಕತೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಯಾರೊಬ್ಬರೂ ಭಾಗಿಯಾಗಿಲ್ಲ. ಮೈಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ಔಷಧ ನಿಯಂತ್ರಕ ಹಾಗೂ ಆಮ್ಲಜನಕ ‌ಪೂರೈಸುವ ಎರಡು ಸಂಸ್ಥೆಗಳ ಸಿಬ್ಬಂದಿ ಮಾತ್ರ ಇದ್ದಾರೆ. ಹಾಗಾಗಿ ಆಮ್ಲಜನಕ‌ ಪೂರೈಕೆ ವಿಚಾರದಲ್ಲಿ ಜಿಲ್ಲಾಡಳಿತ ಮೈಸೂರಿನ ಅಧಿಕಾರಿಗಳನ್ನೇ ಅವಲಂಬಿಸಿದ್ದರೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ತನಿಖೆಗೆ ಒತ್ತಾಯ: ಆಡಿಯೊ ತುಣುಕುಗಳ ಬಗ್ಗೆ ತನಿಖೆಯಾಗಬೇಕು ಜಿಲ್ಲಾ ಕಾಂಗ್ರೆಸ್‌ ಈಗಾಗಲೇ ಒತ್ತಾಯಿಸಿದೆ.ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ವೆಂಕಟರಣಸ್ವಾಮಿ (ಪಾಪು) ಹಾಗೂ ವೀರಭದ್ರಸ್ವಾಮಿ ಅವರು, ಆಡಿಯೊದಲ್ಲಿನ ಅಂಶಗಳ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣ ಮುಚ್ಚಿ ಹಾಕುವ ಯತ್ನ: ಆರೋಪ

‘ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಯ ನಡುವೆ ಏಪ್ರಿಲ್ 29ರಂದು ನಡೆದಿದೆ ಎನ್ನಲಾದ ಸಂಭಾಷಣೆಯನ್ನು ನಾನೂ ಕೇಳಿದ್ದೇನೆ. ಅದರಲ್ಲಿ ಅವರು, ಮೈಸೂರು ಜಿಲ್ಲೆಗೇ ಆಮ್ಲಜನಕ ಕೊರತೆ ಇರುವುದನ್ನು ಪ್ರಸ್ತಾಪಿಸಿದ್ದಾರೆ. ಜಿಲ್ಲೆಯ ಮುಖ್ಯಸ್ಥರಾಗಿ ಚಾಮರಾಜನಗರ ಸೇರಿದಂತೆ ಬೇರೆ ಕಡೆಗೆ ಎಷ್ಟು ಆಮ್ಲಜನಕ ಹೋಗುತ್ತಿದೆ ಎಂಬುದನ್ನು‌ ತಿಳಿದುಕೊಳ್ಳುವ ಹಕ್ಕು‌ ಅವರಿಗೆ ಇರುತ್ತದೆ. ಗಮನಕ್ಕೆ ತಂದು ಕಳುಹಿಸಬೇಕು ಎಂದು ಹೇಳಿದ್ದರಲ್ಲಿ ತಪ್ಪೇನಿದೆ’ ಎಂದು ಎಸ್‌ಡಿ‌ಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇ 2ರಂದು ದುರಂತ ಸಂಭವಿಸುವ ಮೊದಲೇ ಈ ಸಂಭಾ‌ಷಣೆಗಳು ನಡೆದಿವೆ. ಅಂದರೆ, ಅಂದು ನಡೆದಿರುವುದು ಏಕಾಏಕಿ ದುರಂತ ಅಲ್ಲ. ಅದಕ್ಕಿಂತ ಮೊದಲೇ ಆಮ್ಲಜನಕ ಪೂರೈಕೆಗೆ ತೊಂದರೆಯಾಗಿತ್ತು. ಇದು ಗೊತ್ತಿದ್ದರೂ, ಜಿಲ್ಲಾಡಳಿತ ಏನೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ, ವೈದ್ಯರು, ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದ್ದರು ಎಂಬುದು ಸ್ಪಷ್ಟ’ ಎಂದು ಅವರು ದೂರಿದರು.

‘ದುರ್ಘಟನೆ ನಡೆದು 40 ದಿನಗಳ ನಂತರ ಆಡಿಯೊ ತುಣುಕುಗಳು ಬಿಡುಗಡೆಯಾಗಿವೆ. ಅದೂ ರೋಹಿಣಿ ಸಿಂಧೂರಿ ಅವರು ವರ್ಗಾವಣೆಯಾದ ನಂತರ. ಇದುವರೆಗೂ ಈ ತುಣುಕುಗಳು ಯಾಕೆ ಹೊರಗಡೆ ಬಂದಿಲ್ಲ? ಈಗ ಬಿಡುಗಡೆ ಮಾಡಿರುವುದರ ಹಿಂದೆ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನವಿದೆ’ ಎಂದು ಅಬ್ರಾರ್‌ ಅಹಮದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.