ADVERTISEMENT

ಬೆಳೆಗಳಿಗೆ ಜೀವಸೆಲೆ, ಭತ್ತಕ್ಕೆ ಕುತ್ತು

ಜಿಲ್ಲೆಯ ಹಲವೆಡೆ ಬಿರುಸು, ಕೆಲವೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 4:31 IST
Last Updated 23 ನವೆಂಬರ್ 2025, 4:31 IST
ಶುಕ್ರವಾರ ಸುರಿದ ಮಳೆಗೆ ಯಳಂದೂರು ತಾಲೂಕಿನ ಉಪ್ಪಿನ ಮೊಳೆ ಸಮೀಪದ ಭತ್ತದ ಫಸಲು ಭಾಗಿರುವುದು
ಶುಕ್ರವಾರ ಸುರಿದ ಮಳೆಗೆ ಯಳಂದೂರು ತಾಲೂಕಿನ ಉಪ್ಪಿನ ಮೊಳೆ ಸಮೀಪದ ಭತ್ತದ ಫಸಲು ಭಾಗಿರುವುದು   

ಯಳಂದೂರು/ಚಾಮರಾಜನಗರ: ಜಿಲ್ಲೆಯ ‌ಹಲವೆಡೆ ಶುಕ್ರವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು, ಬೆಳೆಗಳಿಗೆ ಜೀವಸೆಲೆ ಬಂದಂತಾಗಿದೆ. ಚಾಮರಾಜನಗರ, ಯಳಂದೂರು ಉತ್ತಮ ಮಳೆಯಾಗಿದ್ದರೆ ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ಜಿಲ್ಲೆಯಲ್ಲಿ ಈ ವರ್ಷ ಹಿಂಗಾರು ಮಳೆ ತೀವ್ರ ಕೊರತೆ ಎದುರಾಗಿ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದ್ದ ಸಮಯದಲ್ಲಿ ಸುರಿದ ಮಳೆ ಬೆಳೆಗಳು ಚೇತರಿಕೊಳ್ಳಲು ನೆರವಾಗಿದೆ.

ಚಾಮರಾಜನಗರದಲ್ಲಿ ಕೆಲಹೊತ್ತು ಬಿರುಸಾಗಿ ಮಳೆ ಸುರಿಯಿತು. ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತು. ಯಳಂದೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ನೀರಿಲ್ಲದೆ ಬಾಡುವ ಹಂತ ತಲುಪಿದ್ದ ಕಡಲೆ, ಹುರುಳಿ, ಅಲಸಂದೆ ಸೇರಿದಂತೆ ಹಲವು ಬೆಳೆಗಳು ಚೇತರಿಕೆ ಕಾಣಲಿವೆ. ಬಿಸಿಲಿನಲ್ಲಿ ಒಣಗುತ್ತಿದ್ದ ದ್ವಿದಳ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಿದೆ ಎನ್ನುತ್ತಾರೆ ಕಾಡಂಚಿನ ಕೃಷಿಕರು.

ADVERTISEMENT

ಒಂದೆಡೆ ಮಳೆ ವರವಾದರೆ, ಮತ್ತೊಂದೆಡೆ ಆತಂಕಕ್ಕೆ ಕಾರಣವಾಗಿದೆ. ಕೊಯ್ಲಿಗೆ ಬಂದಿರುವ ಭತ್ತದ ಫಸಲು ಮಳೆಯ ರಭಸಕ್ಕೆ ಜಮೀನಿನಲ್ಲಿ ಭಾಗಿದ್ದು ರೈತರಿಗೆ ಆತಂಕ ತಂದಿತ್ತಿದೆ.

ಹಸ್ತ ಮಳೆ ಹೊರತುಪಡಿಸಿ ಇಲ್ಲಿಯವರೆಗೂ ಜೋರು ಮಳೆ ಬಿದ್ದಿಲ್ಲ. ಭತ್ತ, ರಾಗಿ, ಬಾಳೆ ಸೇರಿದಂತೆ ತರಕಾರಿ ಬೆಳೆಗಳು ಇನ್ನೆರಡು ವಾರಗಳಲ್ಲಿ ಕಟಾವು ಹಂತಕ್ಕೆ ಬರಲಿದ್ದು, ಈ ಅವಧಿಯಲ್ಲಿ ಬಿರುಗಾಳಿ ಸಹಿತ ಬಿರುಸು ಮಳೆ ಬಿದ್ದರೆ ಬೆಳೆ ನಾಶವಾದೀತು ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತರು.

‘ತಾಲ್ಲೂಕಿನಾದ್ಯಂತ ಅವರೆಕಾಯಿ ಹಾಗೂ ತೊಗರಿಕಾಯಿ ಕೊಯ್ಲು ಭರದಿಂದ ಸಾಗಿದೆ. ಎರಡೂ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿದೆ. ಕೊಯ್ಲಿನ ಹಂತದಲ್ಲಿ ಮಳೆ ಸುರಿದರೆ ಕೀಟಬಾಧೆ ಹೆಚ್ಚಾಗಲಿದೆ’ ಎನ್ನುವರು ಗುಂಬಳ್ಳಿ ಕೃಷಿಕ ಮಹದೇವಸ್ವಾಮಿ.

‘ಈ ಬಾರಿ ಭತ್ತದ ಫಸಲು ಸಮೃದ್ಧವಾಗಿ ಬಂದಿದ್ದು, ಭತ್ತದ ಸಸಿಗಳು ಕಾಳು ಕಟ್ಟಿ ನಳನಳಿಸಿದೆ. ಬೆಳೆ ಹೊಂಬಣ್ಣಕ್ಕೆ ತಿರುಗುತ್ತಿದ್ದು ಕೆಲವೇ ದಿನಗಳಲ್ಲಿ ಕಟಾವು ಶುರುವಾಗಲಿದೆ. ಸಾಧಾರ ಮಳೆ ಬಿದ್ದರೆ ಸಮಸ್ಯೆ ಇಲ್ಲ, ಬಿರುಸಾಗಿ ಮಳೆಯಾದರೆ ಕಟಾವಿಗೆ ಕಷ್ಟವಾಗುತ್ತದೆ ಎನ್ನುವರು’ ಪಟ್ಟಣದ ಬೇಸಾಯಗಾರ ಸುರೇಶ್.

ಮಳೆ ಮುನ್ಸೂಚನೆ ಯಳಂದೂರು ತಾಲ್ಲೂಕಿನಲ್ಲಿ ನ.24ರವರೆಗೂ ಭಾಗಶಃ ಮೋಡ ಕವಿದ ವಾತಾವರಣವಿದ್ದು ತುಂತುರು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಸಾಮಾನ್ಯ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಗಲಿನ ತಾಪಮಾನದಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ರಾತ್ರಿ ಹೊತ್ತು ಚಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.