ADVERTISEMENT

ಜಿಟಿ ಜಿಟಿ ಮಳೆ; ಜನ ಜೀವನ ಅಸ್ತವ್ಯಸ್ತ

ಜಿಲ್ಲೆಯಾದ್ಯಂತ ಮಲೆನಾಡಿನ ವಾತಾವರಣ; ಚಾಮರಾಜನಗರದಲ್ಲಿ ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 14:30 IST
Last Updated 6 ಆಗಸ್ಟ್ 2019, 14:30 IST
ಚಾಮರಾಜನಗರದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದರಿಂದ ಜನ ಜೀವನಕ್ಕೆ ಸ್ವಲ್ಪ ತೊಂದರೆಯಾಯಿತು
ಚಾಮರಾಜನಗರದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದರಿಂದ ಜನ ಜೀವನಕ್ಕೆ ಸ್ವಲ್ಪ ತೊಂದರೆಯಾಯಿತು   

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೂ ಬಿಟ್ಟು ಬಿಟ್ಟು ಸುರಿದ ಬಿರುಸಿನ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.

ನಗರ ಬಿಟ್ಟು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಹೆಚ್ಚು ಮಳೆಯಾಗಲಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೂ ತುಂತುರು ಮಳೆಯಾಯಿತು. ಸಂಜೆ ಹೊತ್ತಿಗೆ ಬಿಳಿಗಿರಿರಂಗನಬೆಟ್ಟದಲ್ಲಿ ಉತ್ತಮ ಮಳೆಯಾಯಿತು.

ಚಾಮರಾಜನಗರದಲ್ಲಿ ಮಂಗಳವಾರ ಇಡೀ ದಿನ ಮಲೆನಾಡು, ಕರಾವಳಿಯ ವಾತಾವರಣ ಕಂಡು ಬಂತು. ಇಡೀ ದಿನ ಶೀತ ಹವೆ ಜನರನ್ನು ಕಾಡಿತು.ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೂರ್ಯನ ಬೆಳಕು ಸ್ವಲ್ಪ ಕಂಡಿದ್ದು ಬಿಟ್ಟರೆ ದಿನಪೂರ್ತಿ ಮೋಡಗಳು ನೇಸರನಿಗೆ ಅಡ್ಡವಾಗಿ ನಿಂತಿದ್ದವು.

ADVERTISEMENT

ಜನ ಜೀವನಕ್ಕೆ ಅಡಚಣೆ: ಮುಂಜಾನೆ 5.30ಗೆ ಆರಂಭವಾದ ಜಿಟಿ ಜಿಟಿ ಮಳೆ ರಾತ್ರಿವರೆಗೂ ಮುಂದುವರಿಯಿತು. ಸ್ವಲ್ಪ ಹೊತ್ತು ಜೋರಾಗಿ ಮಳೆ ಬಂದರೆ, ಬಿಡುವಿನ ಸಂದರ್ಭದಲ್ಲಿ ಸೋನೆ ಮಳೆಯ ರೀತಿಯಲ್ಲಿ ಹನಿಯುತ್ತಲೇ ಇತ್ತು.

ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ, ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ ಸರ್ಕಾರಿ ನೌಕರರಿಗೆ ಸ್ವಲ್ಪ ತೊಂದರೆಯಾಯಿತು. ದ್ವಿಚಕ್ರವಾಹನಗಳಲ್ಲಿ ಸಾಗುತ್ತಿದ್ದವರು ಅನಿವಾರ್ಯವಾಗಿ ಆಟೊಗಳನ್ನು ಅವಲಂಬಿಸಬೇಕಾಯಿತು.ನಿರಂತರ ಮಳೆಯಿಂದಾಗಿ ಜಿಲ್ಲಾ ಕೇಂದ್ರದಲ್ಲಿ ಜನಸಾಮಾನ್ಯರ ಓಡಾಟಕ್ಕೂ ತೊಂದರೆಯಾಯಿತು.

ಸಂಜೆ ಶಾಲೆ, ಕಚೇರಿಗಳು ಬಿಡುವ ಸಮಯಕ್ಕೆ ಮಳೆ ಸುರಿದಿದ್ದರಿಂದ, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಮನೆ ಸೇರಲು ಪರದಾಡಬೇಕಾಯಿತು.

ಹೊರಗೆ ಬಂದ ಛತ್ರಿ ಜಾಕೆಟ್‌: ಮಳೆ ನಿಲ್ಲುವ ಲಕ್ಷಣ ಕಂಡು ಬರದೇ ಇದ್ದುದರಿಂದ ಜನರು ಛತ್ರಿ ಹಿಡಿದುಕೊಂಡು ಓಡಾಡಿದರು. ಚಳಿಯ ವಾತಾವರಣ ಇದ್ದುದರಿಂದ ಸ್ವೆಟರ್‌, ಜಾಕೆಟ್‌ಗಳನ್ನೂ ಧರಿಸಿದ್ದು ಕಂಡು ಬಂತು.

ಚಾಮರಾಜನಗರ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಉಳಿದಂತೆ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರುಗಳಲ್ಲಿ ತುಂತುರು ಮಳೆಯಾಗಿದೆ.

ಗುಂಡ್ಲುಪೇಟೆ ವರದಿ:ಕಾಡಂಚಿನ ಪ್ರದೇಶಗಳಲ್ಲೂ ಸ್ವಲ್ಪ‍ ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವದೇವರಹಳ್ಳಿ, ಬೇರಾಂಬಾಡಿ, ಮೇಲುಕಾಮನಹಳ್ಳಿ, ಮಗುವಿನಹಳ್ಳಿ, ಕುಂದುಕೆರೆ, ಚಿರಕನಹಳ್ಳಿ ಭಾಗದಲ್ಲಿ ಸತತ ಮಳೆ ಸುರಿಯಿತು.

ಐದು ದಿನ ಮಳೆ: ಮುನ್ಸೂಚನೆ
ಮೈಸೂರಿನ ನಾಗನಹಳ್ಳಿಯಲ್ಲಿರುವ ಕೃಷಿ ಹವಾಮಾನ ಸೇವಾ ಕೇಂದ್ರ ನೀಡಿರುವ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಇದೇ 11ರವರೆಗೂ ಉತ್ತಮ ಮಳೆಯಾಗಲಿದೆ. ವಾತಾವರಣ ಕೂಡ ತಂಪಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.