ADVERTISEMENT

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಖಂಡಿಸಿ ಆ.10ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 11:54 IST
Last Updated 6 ಆಗಸ್ಟ್ 2021, 11:54 IST
ಹೊನ್ನೂರು ಪ್ರಕಾಶ್
ಹೊನ್ನೂರು ಪ್ರಕಾಶ್   

ಚಾಮರಾಜನಗರ: ಕೇಂದ್ರ ಸರ್ಕಾರವು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಖಂಡಿಸಿ ಇದೇ 10ರಂದು ರೈಜ್ಯ ರೈತ ಸಂಘವು ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘ಕೇಂದ್ರ ಸರ್ಕಾರವು ಎಲ್ಲ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಆ ಮೂಲಕ ರೈತ ಜಮೀನುಗಳನ್ನು ಕಿತ್ತು ಕಾರ್ಪೊರೇಟ್‌ ವಲಯಕ್ಕೆ ಕೊಡುವ ಹುನ್ನಾರ ಅಡಗಿದೆ. ಇದನ್ನು ವಿರೋಧಿಸಿ ಎರಡು ಹಂತಗಳಲ್ಲಿ ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಮೊದಲ ಹಂತದಲ್ಲಿ ಅಸಹಕಾರ ಚಳವಳಿ, ಎರಡನೇ ಹಂತದಲ್ಲಿ ಎಲ್ಲ ಶಾಸಕರ ಮನೆ ಮುಂದೆ ಕುಳಿತು ಚಳವಳಿ ಮಾಡಲಾಗುವುದು’ ಎಂದರು.

10ರಂದುನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದರು.

ADVERTISEMENT

ಧ್ವಜಾರೋಹಣಕ್ಕೆ ಬಿಡುವುದಿಲ್ಲ: ‘ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆಯದಿದ್ದರೆ, ಆಗಸ್ಟ್‌ 15ರಂದು ಯಾವುದೇ ಬಿಜೆಪಿ ಸಚಿವರು ಹಾಗೂ ಮುಖಂಡರು ಧ್ವಜಾರೋಹಣ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಅವರು ಎಚ್ಚರಿಸಿದರು.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆ ಮಾಡದೇ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಕಾನೂನುಗಳನ್ನು ವಾಪಸ್‌ ಪಡೆಯದಿದ್ದರೆ ಮುಂದಿನ ಚುನಾವಣೆಯಲ್ಲಿ ಇವರನ್ನು ಕಿತ್ತೊಗೆಯಲಾಗುವುದು’ ಎಂದು ಹೊನ್ನೂರು ಪ್ರಕಾಶ್‌ ಅವರು ಹೇಳಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಅವರು ಮಾತನಾಡಿ, ‘10ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ವಿದ್ಯುತ್ ಇಲಾಖೆಯ ಎಲ್ಲ ನೌಕರರೂ ಪಾಲ್ಗೊಳ್ಳುತ್ತಾರೆ. ಅಲ್ಲದೇ ದೇಶದಾದ್ಯಂತ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದರು.

ರೈತ ಮುಖಂಡರಾದ ಮಾಡ್ರಳ್ಳಿ ಮಹದೇವಪ್ಪ, ಹೊನ್ನೂರು ಬಸವಣ್ಣ, ಚಂಗಡಿ ಕರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.