ADVERTISEMENT

ಚಾಮರಾಜನಗರ | ಬೆಳೆ ನಷ್ಟ: ವೈಜ್ಞಾನಿಕ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಮೇ 2024, 15:55 IST
Last Updated 8 ಮೇ 2024, 15:55 IST
ಬರ ಹಾಗೂ ಗಾಳಿ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹೊನ್ನೂರು ಪ್ರಕಾಶ್‌ ಹಾಗೂ ಇತರರು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಮಾಡಿದರು. ಕೃಷಿ ಇಲಾಖೆ ಉಪನಿರ್ದೇಶಕಿ ಸುಷ್ಮಾ ಇದ್ದರು
ಬರ ಹಾಗೂ ಗಾಳಿ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹೊನ್ನೂರು ಪ್ರಕಾಶ್‌ ಹಾಗೂ ಇತರರು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಮಾಡಿದರು. ಕೃಷಿ ಇಲಾಖೆ ಉಪನಿರ್ದೇಶಕಿ ಸುಷ್ಮಾ ಇದ್ದರು   

ಚಾಮರಾಜನಗರ: ಬರ ಹಾಗೂ ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕವು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. 

ಸಂಘದ ಪದಾಧಿಕಾರಿಗಳು ಬುಧವಾರ ಹೆಚ್ಚವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಉಪನಿರ್ದೇಶಕಿ ಸುಷ್ಮಾ ಇದ್ದರು.

‘ಮೂರು ದಿನಗಳ ಅವಧಿಯಲ್ಲಿ ಸುರಿದ ಗಾಳಿ ಮಳೆಗೆ ಜಿಲ್ಲೆಯಲ್ಲಿ 1,250 ಎಕರೆ ಬಾಳೆ ನಾಶವಾಗಿದ್ದು, ಸರ್ಕಾರ ಎನ್‌ಡಿಆರ್‌ಎಫ್‌ ಮಾನದಂಡದ ಅಡಿಯಲ್ಲಿ ಎಕರೆಗೆ ₹6,800 ಪರಿಹಾರ ನೀಡುತ್ತದೆ. ಒಂದು ಎಕರೆ ಬಾಳೆ ಬೆಳೆಯಲು ₹1 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ. ಆದರೆ ಪರಿಹಾರ ವೆಚ್ಚದ ಶೇ 5ರಷ್ಟನ್ನೂ ಕೊಡುವುದಿಲ್ಲ’ ಎಂದು ಮನವಿಯಲ್ಲಿ ಹೇಳಲಾಗಿದೆ. 

ADVERTISEMENT

‘ಸರ್ಕಾರ ಯಾವ ಮಾನದಂಡದ ಮೇಲೆ ಪರಿಹಾರ ಕೊಡುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಉಸ್ತುವಾರಿ ಸಚಿವರು ಕೂಡಲೇ ಈ ಬಗ್ಗೆ ಗಮನ ಇರಿಸಿ ಬರದಿಂದ ತತ್ತರಿಸಿರುವ ರೈತರಿಗೆ ಎಕರೆಗೆ ಕನಿಷ್ಠ ₹1 ಲಕ್ಷ ಪರಿಹಾರ ನೀಡಬೇಕು’ ಎಂದು  ಒತ್ತಾಯಿಸಲಾಗಿದೆ. 

‘ಚುನಾವಣಾ ನೀತಿ ಸಂಹಿತೆ ಮುಗಿದ ವಾರದೊಳಗೆ ವೈಜ್ಞಾನಿಕವಾಗಿ ಪರಿಹಾರ ನೀಡಿದಿದ್ದರೆ, ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಹೊನ್ನೂರು ಪ್ರಕಾಶ್‌, ವೀರನಪುರದ ನಾಗಪ್ಪ, ಮಹೇಶ್, ಸುರೇಶ್, ಜಗದೀಶ್, ಮಾದೇವ ನಾಯಕ, ಪುಟ್ಟೇಗೌಡ, ಮಾಡ್ರಳ್ಳಿ ಪಾಪಣ್ಣ, ಮಂಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.