ADVERTISEMENT

ಸಂಚಾರ ಪೊಲೀಸರ ವಿರುದ್ಧ ರೈತರ ಆಕ್ರೋಶ: ರೋಲ್‌ಕಾಲ್ ಆರೋಪಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 16:19 IST
Last Updated 28 ಅಕ್ಟೋಬರ್ 2021, 16:19 IST
ಸಂಚಾರ ಠಾಣೆಯ ಪೊಲೀಸರ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು
ಸಂಚಾರ ಠಾಣೆಯ ಪೊಲೀಸರ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ನಗರದ ಸಂಚಾರಪೊಲೀಸ್ ಠಾಣೆಯ ಎಎಸ್‌ಐ ರೇವಣ್ಣ ಸ್ವಾಮಿ ರೈತ ಸಂಘದವರು ರೋಲ್‌ಕಾಲ್ ಮಾಡುತ್ತಾರೆ ಎಂದಿದ್ದಾರೆ ಎಂದು ಆರೋಪಿಸಿ, ರೈತ ಸಂಘದ ಪದಾಧಿಕಾರಿಗಳು ಗುರುವಾರ ಸಂಚಾರ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಠಾಣೆಯ ಮುಂಭಾಗದ ರಸ್ತೆಯಲ್ಲಿ ಧರಣಿ ಕುಳಿತ ರೈತ ಮುಖಂಡರು, ಸಂಚಾರ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ ‘ಚಾಮರಾಜನಗರದಲ್ಲಿ ಸಂಚಾರ ಪೊಲೀಸರು, ಕೂಲಿ ಮಾಡುವವರು, ರೈತರ ದ್ವಿಚಕ್ರವಾಹನಗಳನ್ನು ಗುರಿಯಾಗಿಸಿಕೊಂಡು ವಾಹನಗಳನ್ನು ತಡೆದು ದಂಡ ವಸೂಲಿ ಮಾಡುತ್ತಿದ್ದಾರೆ. ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ತೊಂದರೆ ಕೊಡಬೇಡಿ ಎಂದು ಸಂಘದ ಜಿಲ್ಲಾ ಅಧ್ಯಕ್ಷರು ಹೇಳಿದ್ದಕ್ಕೆ ಸಂಚಾರ ಠಾಣೆಯ ಎಎಸ್‌ಐ ರೇವಣ್ಣಸ್ವಾಮಿ ಏಕ ವಚನದಲ್ಲಿ, ‘ನೀವು ರೋಲ್‌ಕಾಲ್ ಮಾಡುತ್ತೀರಿ’ ಎಂದಿದ್ದಾರೆ.ನಮ್ಮ ಮೇಲೆ ಆರೋಪ ಮಾಡಿರುವುದನ್ನು ಸಾಬೀತುಪಡಿಸಬೇಕು. ಅಲ್ಲಿಯ ತನಕ ಹೋರಾಟ ಕೈ ಬಿಡುವುದಿಲ್ಲ’ ಎಂದರು.

ADVERTISEMENT

‘ಸಂಚಾರ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಡವರನ್ನು ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಸಂಚರಿಸುವ ದೊಡ್ಡ ದೊಡ್ಡ ವಾಹನಗಳನ್ನು ಕೇಳದೆ ಬೈಕ್‌ಗಳನ್ನು ಮಾತ್ರ ತಡೆದು ದಂಡ ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ಪೃಥ್ವಿ, ರಘು, ಮಲ್ಲೇಶ್, ಮಹದೇವಸ್ವಾಮಿ, ಪುಟ್ಟರಾಜು, ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.