ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಮಧ್ಯಾಹ್ನ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ನೆತ್ತಿ ಸುಡುಸುತ್ತಿದ್ದ ಬಿರುಬಿಸಿಲಿನ ನಡುವೆ,ದೇವಸ್ಥಾನದ ಆವರಣದ ಕಲ್ಲಿನ ಹಾಸಿನ ಬಿಸಿ ಕಾಲಿಗೆ ತಗುಲಿ ನಿಲ್ಲಲಾಗದಿದ್ದರೂ ಭಕ್ತರು ಗೋಪಾಲ, ಗೋವಿಂದ, ಗೋವಿಂದ ಎಂಬ ಉದ್ಘೋಷ ಮಾಡುತ್ತಾ ರಥವನ್ನು ಎಳೆದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸುತ್ತಮುತ್ತಲಿನ ಊರುಗಳ ಜನರು, ಹೊರ ಜಿಲ್ಲೆಯ ಪ್ರವಾಸಿಗಳು ರಥೋತ್ಸವನ್ನು ಕಣ್ತುಂಬಿಕೊಂಡರು.
ಸೋಮವಾರ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಜನರು ತಂಡೋಪತಂಡವಾಗಿ ನೆರೆದಿದ್ದರು. ಸರತಿ ಸಾಲಿನಲ್ಲಿ ನಿಂತು ಗೋಪಾಲಸ್ವಾಮಿ ದರ್ಶನ ಪಡೆದರು. ಮಧ್ಯಾಹ್ನ 12.30ರ ಸುಮಾರಿಗೆ ಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ನೂರಾರು ಸಂಖ್ಯೆಯಲ್ಲಿ ಭಕ್ತರು ತೇರನ್ನು ಎಳೆದರು. ರಥವನ್ನು ದೇವಾಲಯಕ್ಕೆ ಒಂದು ಸುತ್ತು ಎಳೆಯಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲ ಕೃಷ್ಣ ಭಟ್ಟ ಹಾಗೂ ತಂಡದವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಕೋವಿಡ್ ಕಾರಣದಿಂದ 2020 ಹಾಗೂ 2021ರಲ್ಲಿ ರಥೋತ್ಸವ ನಡೆದಿರಲಿಲ್ಲ. ಜಾತ್ರೆ ಸರಳವಾಗಿ, ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ, ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು.ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ದೇವಸ್ಥಾನದ ಕೆಳಗೆ ಭಕ್ತರು ಪಾನಕ ಮಜ್ಜಿಗೆಯನ್ನು ವಿತರಣೆ ಮಾಡಿದರು.
ಹೆಚ್ಚುವರಿ ಬಸ್: ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶ ಇಲ್ಲದಿರುವುದರಿಂದ, ಬೆಟ್ಟದ ತಪ್ಪಲಿನಿಂದ ಕೆಎಸ್‌ಆರ್‌ಟಿಸಿ ಹೆಚ್ಚುವರಿ 50 ಬಸ್‌ಗಳ ಸೌಕರ್ಯವನ್ನು ಕಲ್ಪಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಬೆಟ್ಟದ ಕಠಿಣ ತಿರುವುಗಳಲ್ಲಿ ಕೆಎಸ್ಆರ್‌ಟಿಸಿಯು ಟೋಯಿಂಗ್ ವಾಹನ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿತ್ತು.
ರಥೋತ್ಸವಕ್ಕೆ ಶಾಸಕ ಸಿ.ಎಸ್.ನಿರಂಜನಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡಿವೈಎಸ್‌ಪಿ ಪ್ರಿಯದರ್ಶಿನಿ, ತಹಶಿಲ್ದಾರ್ ರವಿಶಂಕರ್, ಪೊಲೀಸ್ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ ಸೇರಿದಂತೆ ಪೊಲೀಸ್, ಅರಣ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.
ಹೊಸ ಅಂಗಡಿಗಳಿಲ್ಲ: ಬೆಟ್ಟದ ತಪ್ಪಲಿನಲ್ಲಿ ಯಾವಾಗಲೂ ಇರುವ ಅಂಗಡಿಗಳು ಬಿಟ್ಟು ಹೊಸ ಅಂಗಡಿಗಳು ಇರಲಿಲ್ಲ.
ನೂಕು ನುಗ್ಗಲು; ಇಬ್ಬರಿಗೆ ಗಾಯ
ರಥವನ್ನು ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಇಬ್ಬರು ಯುವಕರು ಆಯತಪ್ಪಿ ಕೆಳಗಡೆ ಬಿದ್ದರು. ಸಣ್ಣಪುಟ್ಟ ಗಾಯಗಳಾಯಿತು. ಅಲ್ಲಿದ್ದ ಜನರು ಕ್ಷಣಾರ್ಧದಲ್ಲಿ ಇಬ್ಬರನ್ನು ಎಳೆದಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.
ತಕ್ಷಣ ಅಲ್ಲೇ ಇದ್ದ ಆರೋಗ್ಯ ಇಲಾಖೆಯ ಆಂಬುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಆಂಬುಲೆನ್ಸ್ ಚಾಲು ಆಗಲಿಲ್ಲ. ಬಳಿಕ ಅರಣ್ಯ ಇಲಾಖೆಯ ವಾಹನದಲ್ಲಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.