ADVERTISEMENT

ರಥೋತ್ಸವ: ಧಾರ್ಮಿಕ ಕಾರ್ಯಕ್ರಮ ಆರಂಭ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 16:25 IST
Last Updated 6 ಜುಲೈ 2022, 16:25 IST
13ರಂದು ನಡೆಯಲಿರುವ ರಥೋತ್ಸವಕ್ಕೆ ಸಜ್ಜುಗೊಳ್ಳುತ್ತಿರುವ ನೂತನ ಬ್ರಹ್ಮರಥ
13ರಂದು ನಡೆಯಲಿರುವ ರಥೋತ್ಸವಕ್ಕೆ ಸಜ್ಜುಗೊಳ್ಳುತ್ತಿರುವ ನೂತನ ಬ್ರಹ್ಮರಥ   

ಚಾಮರಾಜನಗರ: ಐದು ವರ್ಷಗಳ ನಂತರ, ಇದೇ 13ರಂದು ನಡೆಯಲಿರುವ ನಗರದ ಚಾಮರಾಜೇಶ್ವರಸ್ವಾಮಿ ರಥೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಜಾತ್ರೆಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಬುಧವಾರದಿಂದ ಆರಂಭಗೊಂಡಿವೆ.

2017ರಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಯಿಂದ ಬ್ರಹ್ಮರಥಕ್ಕೆ ಹಾನಿಯಾದ ಬಳಿಕ ರಥೋತ್ಸವ ನಿಂತಿತ್ತು. ಐದು ವರ್ಷಗಳ ಬಳಿಕ ಹೊಸ ರಥ ನಿರ್ಮಾಣವಾಗಿದ್ದು, ಈ ಬಾರಿ ಅದ್ದೂರಿಯಾಗಿ ರಥೋತ್ಸವ ನಡೆಸಲು ದೇವಾಲಯದ ಆಡಳಿತ ಮಂಡಳಿ, ಭಕ್ತರು ನಿರ್ಧರಿಸಿದ್ದಾರೆ. ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ರಥ ಕಟ್ಟುವ ಕಾರ್ಯ ಪ್ರಗತಿಯಲ್ಲಿದೆ.

ಧಾರ್ಮಿಕ ಕಾರ್ಯಕ್ರಮ: ರಥೋತ್ಸವದ ಅಂಗವಾಗಿ 12 ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬುಧವಾರವೇ ಇದಕ್ಕೆ ಚಾಲನೆ ನೀಡಲಾಗಿದೆ. 17ರವರೆಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ADVERTISEMENT

ಮೊದಲ ದಿನ ಅಂಕುರಾರ್ಪಣಪೂರ್ವಕ ವೃಷಭಾಧಿವಾಸ ಕಾರ್ಯಕ್ರಮ ನಡೆದಿದೆ.

ಗುರುವಾರ (ಜುಲೈ 7) ಬೆಳಿಗ್ಗೆ 11.30ರಿಂದ 12ಗಂಟೆವರೆಗಿನ ಕನ್ಯಾ ಲಗ್ನ ಮುಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಬೇರಿತಾಡನಾನಂತರ ಶಿಭಿಕಾರೋಹಣೋತ್ಸವ ನಡೆಯಲಿದೆ.

8ರಂದು ಚಂದ್ರ ಮಂಡಲಾರೋಹಣೋತ್ಸವ, 9ರಂದು ಅನಂತ ಪೀಠಾರೋಹಣೋತ್ಸವ, 10ರಂದು ಪುಷ್ಪಮಂಟಪಾರೋಹಣೋತ್ಸವ, 11ರಂದು ವೃಷಭಾರೋಹಣೋತ್ಸವ, 12ರಂದು ವಸಂತೋತ್ಸವ ಪೂರ್ವಕ ಗಜವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

13ರಂದು ಪೂರ್ವಾಷಾಢ ನಕ್ಷತ್ರದಲ್ಲಿ 11ರಿಂದ 11.30 ಶುಭ ಕನ್ಯಾ ಲಗ್ನದಲ್ಲಿ ರಥೋತ್ಸವ ಜರುಗಲಿದೆ.

14ರಂದು ಮೃಗಾಯಾತ್ರಾ ಪೂರ್ವಕ ಅಶ್ವಾರೋಹಣಾ, ನಂತರ ಮಹಭೂತಾರೋಹಣ, ದೇವಿ ಪ್ರಣಯಕಲಹ ಸಂಧಾನೋತ್ಸವ, 15ರಂದು ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ, ರಾತ್ರಿ ಧ್ವಜಾವರೋಹಣ, ಮೌನಬಲಿ, 16ರಂದು ಪುಷ್ಪಯಾಗ ಪೂರ್ವಕ ಕೈಲಾಸಯಾನಾ ರೋಹಣೋತ್ಸವ ನೆರವೇರಲಿದೆ.

ಕೊನೆಯ ದಿನ 17ರಂದು ಮಹಾಸಂಪ್ರೋಕ್ಷಣಾ ಪೂರ್ವಕ ನಂದಿವಾಹನೋತ್ಸವದೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.