ADVERTISEMENT

ದೋಷ ನಿವಾರಣೆಗೆ ಧಾರ್ಮಿಕ ಕಾರ್ಯಕ್ರಮ

ಸುಳ್ವಾಡಿ: ಮೊದಲ ದಿನ ಸ್ಥಳ ಶುದ್ಧಿ, ಸಂಪ್ರೋಕ್ಷಣೆ, ಪ್ರವೇಶ ಬಲಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 16:11 IST
Last Updated 21 ಅಕ್ಟೋಬರ್ 2020, 16:11 IST
ಸುಳ್ವಾಡಿ ದೇವಾಲಯದಲ್ಲಿ ನಿರ್ಮಿಸಲಾಗಿರುವ ಯಾಗ ಶಾಲೆಯ ಶುದ್ಧೀಕರಣ ಪೂಜೆ ನಡೆಯಿತು
ಸುಳ್ವಾಡಿ ದೇವಾಲಯದಲ್ಲಿ ನಿರ್ಮಿಸಲಾಗಿರುವ ಯಾಗ ಶಾಲೆಯ ಶುದ್ಧೀಕರಣ ಪೂಜೆ ನಡೆಯಿತು   

ಹನೂರು: ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಬುಧವಾರ ಸಂಜೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಆಗಮಿಕ ಪಂಡಿತ ಮಲ್ಲಣ್ಣ ಅವರ ನೇತೃತ್ವದಲ್ಲಿ 23 ಅರ್ಚಕರು ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ತೊಡಗಿದ್ದಾರೆ.

2018ರ ಡಿಸೆಂಬರ್‌ 14ರಂದು ವಿಷ ಪ್ರಸಾದ ದುರಂತ ಸಂಭವಿಸಿದ ನಂ‌ತರ ದೇವಾಲಯವನ್ನು ಮುಚ್ಚಲಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ದೇವಾಲಯವನ್ನು ತೆರೆದು ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಬುಧವಾರ ಸಂಜೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಪಂಚಗವ್ಯದಿಂದ ಸ್ಥಳಶುದ್ಧಿ ಮಾಡಲಾಯಿತು. ಪುಣ್ಯಾಹ ವಾಚನ, ಯಾಗಶಾಲೆ ಶುದ್ಧೀಕರಣ ಹಾಗೂ ಪ್ರವೇಶ ಬಲಿ, ನವಗ್ರಹ ಪೂಜೆ ನಡೆಸಲಾಯಿತು.

ADVERTISEMENT

ಇದಕ್ಕೂ ಮೊದಲು, ಗ್ರಾಮದ ಐವರು ಮುತ್ತೈದೆಯರು ಹಾಗೂ ಮಕ್ಕಳು ಸತ್ತಿಗೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಾಲಯಲ್ಲಿ ಪೂರ್ಣಕುಂಭಗಳಿಗೆ ಪೂಜೆ ಸಲ್ಲಿಸಿ ಅವುಗಳನ್ನು ತಂದು ದೇವಾಲಯಕ್ಕೆ ಸಮರ್ಪಿಸಿದರು.

ನಂತರ ಅರ್ಚಕರು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ 22 ತಿಂಗಳುಗಳಿಂದ ಮುಚ್ಚಿದ್ದ ದೇವಾಲಯದ ಬಾಗಿಲು ತೆರೆದರು.

ವಿಶೇಷ ಅಲಂಕಾರ: ಗರ್ಭಗುಡಿ, ಪ್ರಾಂಗಣ, ಕಲ್ಯಾಣಿ ಸೇರಿದಂತೆ ಇಡೀ ದೇವಾಲಯಕ್ಕೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಚಪ್ಪರ, ಬಾಳೆ ಕಂದು, ಮಾವಿನ ಸೊಪ್ಪು ಸಹಿತ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಗ್ರಾಮದ ಮುಖಂಡರು ಹಾಗೂ ಸ್ಥಳೀಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೋಮ ಹವನ: ಮೂರು ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮುಖ್ಯ ಆಗಮಿಕ ಪಂಡಿತ ಮಲ್ಲಣ್ಣ ಅವರು, ‘ಎರಡು ವರ್ಷಗಳ ಹಿಂದೆ ನಡೆದ ದುರಂತದ ದೋಷ ನಿವಾರಣೆಗಾಗಿ ಹಾಗೂ ಪ್ರಾಯಶ್ಚಿತ್ತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜಪ, ಪಾರಾಯಣ, ಹೋಮ, ಹವನಗಳು, ಮಾರಮ್ಮ ದೇವಿಗೆ ಕುಂಭಾಭಿಷೇಕ, ಪಂಚಾಸ್ತ್ರ ಹೋಮ, ಕಲಶಾಭಿಷೇಕಗಳು ನಡೆಯಲಿವೆ. ಕೊನೆಯ ದಿನ ದುರ್ಗಾ ಹೋಮ ನಡೆಯಲಿದೆ. ದೇವಿಯ ಪುನಃಪ್ರತಿಷ್ಠಾಪನಾ ಕಾರ್ಯಕ್ರಮವೂ ನಡೆ‌ಯಲಿದೆ. ಮೂರು ದಿನಗಳ ಕಾರ್ಯಕ್ರಮ ಮುಗಿದ ನಂತರ 48 ದಿನಗಳ ಕಾಲ ಅಭಿಷೇಕ ನಡೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.