ಚಾಮರಾಜನಗರ: ಜಿಲ್ಲೆಯಾದ್ಯಂತ 75ನೇ ಗಣರಾಜ್ಯೋತ್ಸವ ದಿನವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಧ್ವಜಾರೋಹಣ ನಡೆಸಿ ಗೌರವ ವಂದನೆ ಸಲ್ಲಿಸಲಾಯಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ರಾಷ್ಟ್ರನಾಯಕರಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕೆ.ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ಸಾಗಿದ ಅವರು, ವಿವಿಧ ತುಕಡಿಗಳ ಪರಿವೀಕ್ಷಣೆ ನಡೆಸಿದರು. ಪೊಲೀಸ್, ಅರಣ್ಯ, ಅಬಕಾರಿ ಇಲಾಖೆಗಳು, ಪೊಲೀಸ್ ಬ್ಯಾಂಡ್, ಗೃಹರಕ್ಷಕ ದಳ, ಸಿಮ್ಸ್ ಎನ್‌ಸಿಸಿ, ವಿವಿಧ ಶಾಲೆಗಳ 18 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಪೊಲೀಸ್ ಬ್ಯಾಂಡ್‌ನ ಸಂಗೀತಕ್ಕೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ ತುಕಡಿಗಳ ಪಥಸಂಚಲನ ಗಮನಸೆಳೆಯಿತು.
ಜಿಲ್ಲೆಯ ಅಭಿವೃದ್ಧಿಗೆ ಕ್ರಮ: ಜಿಲ್ಲೆಯ ಜನತೆಗೆ ಗಣತಂತ್ರ ದಿನದ ಸಂದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿದರು.
‘ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಾಂಸ್ಕೃತಿಕ, ಶಿಕ್ಷಣ ಮತ್ತು ಇತರೆ ಮೂಲಭೂತ ಹಕ್ಕುಗಳನ್ನು ನೀಡುವುದು ಸಂವಿಧಾನದ ಪ್ರಮುಖ ಉದ್ದೇಶ’ ಎಂದು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಪದೇ ಪದೇ ಜಿಲ್ಲೆಗೆ ಭೇಟಿ ನೀಡುವ ಮೂಲಕ ಜಿಲ್ಲೆಗೆ ಅಂಟಿಕೊಂಡಿದ್ದ ಕಳಂಕ ಕಳಚಿದಂತಾಗಿದೆ. ಚಾಮರಾಜನಗರ–ಗುಂಡ್ಲುಪೇಟೆ ತಾಲ್ಲೂಕು 297 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಸರ್ಕಾರಿ ಮೆಡಿಕಲ್ ಕಾಲೇಜು, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಡೇರಿ ನಿರ್ಮಾಣ, ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ದೊಡ್ಡ ದೊಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೀರ್ತಿ ಅವರಿಗೆ ಸಲ್ಲುತ್ತದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದರು.
ಒಟ್ಟಾಗಿ ಶ್ರಮಿಸೋಣ: ‘ಗಣತಂತ್ರ ವ್ಯವಸ್ಥೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವು ಜನರ ಸಕ್ರಿಯ ಸಹಭಾಗಿತ್ವ ಮತ್ತು ಸಹಕಾರ ಇಲ್ಲದೆ ಅರ್ಥಪೂರ್ಣವಾಗಲಾರದು. ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆ ಇತ್ಯಾದಿ ವಿಷಯಗಳನ್ನು ಬದಿಗೊತ್ತಿ ಅನಕ್ಷರತೆ, ಬಡತನ ನಿರುದ್ಯೋಗ ನಿರ್ಮೂಲನೆಗೆ ಒಟ್ಟಾಗಿ ಶ್ರಮಿಸೋಣ’ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಬಹುಮಾನ ಪಡೆದ ಐವರು ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ದೀಪ್ ಜೆ.ಕಾಂಟ್ರಾಕ್ಟರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ
ಧ್ವಜಾರೋಹಣ ಪಥಸಂಚಲನದ ಬಳಿಕ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಆಕರ್ಷದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ತಾಯಿ ಭಾರತಿಯನ್ನು ಹೊಗಳುವ ನಮ್ಮ ಸಂಸ್ಕೃತಿ ಕಲೆ ಸೈನಿಕರ ಧೈರ್ಯವನ್ನು ಬಿಂಬಿಸುವ ಹಾಗೂ ಸಂವಿಧಾನ ಪೀಠಿಕೆಯ ಹಾಡಿನ ರೂಪಕ್ಕೆ ನೃತ್ಯವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಚಾಮರಾಜನಗರದ ಜೆಎಸ್‌ಎಸ್ ಬಾಲಕಿಯರ ಪ್ರೌಢಶಾಲೆ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಸೇಂಟ್ ಜೋಸೆಫ್ ಪ್ರೌಢಶಾಲೆ ಬಂಜಾರ ಇಂಡಿಯನ್ ವಿದ್ಯಾಸಂಸ್ಥೆ ಮಲ್ಲಯ್ಯನಪುರದ ಆದರ್ಶ ವಿದ್ಯಾಲಯ ಸರ್ಕಾರಿ ಜ್ಯೂನಿಯರ್ ಕಾಲೇಜು ಪ್ರೌಢಶಾಲೆ ಮತ್ತು ಅಮಚವಾಡಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಬ್ಯಾಂಡ್ ತಂಡದ ಪ್ರದರ್ಶನ ಅತ್ಯಾಕರ್ಷಕವಾಗಿತ್ತು.
ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ
ಸಮಾರಂಭದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಅಂಬೇಡ್ಕರ್ ಅವರ ಪ್ರತಿಮೆ ಸಂವಿಧಾನ ಪೀಠಿಕೆ ಹಾಗೂ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೊಗಳನ್ನು ಪ್ರದರ್ಶಿಸುವ ಎಲ್‌ಇಡಿ ಪರದೆ ಹೊಂದಿರುವ ಸ್ತಬ್ಧ ಚಿತ್ರಕ್ಕೆ ಸಚಿವರು ಹಸಿರು ನಿಶಾನೆ ತೋರಿದರು. ಈ ಸ್ತಬ್ಧ ಚಿತ್ರವು ಜಿಲ್ಲೆಯ ಎಲ್ಲ 130 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.