ಚಾಮರಾಜನಗರ: ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಮೀಕ್ಷೆ ವರದಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಬಲಗೈ ಸಮುದಾಯದಿಂದ ನಾಗಮೋಹನ್ ದಾಸ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಕಾರರು ನಾಗಮೋಹನ್ ದಾಸ್ ವಿರುದ್ಧ ಘೋಷಣೆ ಕೂಗಿದರು.
ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, ‘ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ವರದಿ ಅವೈಜ್ಞಾನಿಕವಾಗಿದ್ದು, ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ನಾಗಮೋಹನ್ ದಾಸ್ ಅವರು ಹೊಲಯ ಸಮುದಾಯಕ್ಕೆ ಮರಣಶಾಸನ ವರದಿ ನೀಡಿದ್ದಾರೆ. ಹಾಗಾಗಿ ಈ ವರದಿಯನ್ನು ಯಥಾವತ್ತಾಗಿ ಜಾರಿ ಮಾಡದೇ ತಿರಸ್ಕರಿಸಬೇಕು’ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಚಿವ ಸಂಪುಟ ಕರೆದು ನಾಗಮೋಹನ್ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ಸಲ್ಲಿಸಿರುವ ಸಮೀಕ್ಷೆ ವರದಿ ಪುನರ್ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ದಲಿತ ಸಮುದಾಯ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಬಲಗೈ ಸಮುದಾಯಕ್ಕೆ ಸೇರಿದ ಛಲವಾದಿ, ಹೊಲಯ ಒಳಮೀಸಲಾತಿಯ ಜಾಗೃತಿ ಸಮಿತಿ ಮುಖಂಡ ಅಯ್ಯನಪುರ ಶಿವಕುಮಾರ್, ಸಿ.ಎಂ.ಶಿವಣ್ಣ, ಆಲೂರು ನಾಗೇಂದ್ರ, ನಾಗಯ್ಯ, ವಕೀಲ ದಲಿತರಾಜ್, ಆಟೊ ಉಮೇಶ್, ನಾಗೇಶ್, ಶಿವಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.