ADVERTISEMENT

ಎಲ್ಲ ಕೆರೆಗಳಿಗೆ ನೀರಿಗೆ ₹400 ಕೋಟಿ: ಸೋಮಣ್ಣ

ಬೇಗೂರಿನಲ್ಲಿ ರೊಬೋಟಿಕ್‌ ಪ್ರಯೋಗಾಲಯ ಉದ್ಘಾಟನೆ, ಉಳಿದ ತಾಲ್ಲೂಕುಗಳಲ್ಲೂ ಸ್ಥಾಪ‍ನೆ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 16:28 IST
Last Updated 26 ಜುಲೈ 2022, 16:28 IST
ರೊಬೋಟಿಕ್‌ ಪ್ರಯೋಗಾಲಯವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹಾಗೂ ಇತರ ಗಣ್ಯರು ಪರಿಶೀಲಿಸಿದರು
ರೊಬೋಟಿಕ್‌ ಪ್ರಯೋಗಾಲಯವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹಾಗೂ ಇತರ ಗಣ್ಯರು ಪರಿಶೀಲಿಸಿದರು   

ಗುಂಡ್ಲುಪೇಟೆ: ‘ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯದಿಂದ ಹೆಚ್ಚಿನ ಅನುಕೂಲ ಆಗುವುದಾದರೆ ಚಾಮರಾಜನಗರ, ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲೂ ನಮ್ಮ ಪ್ರತಿಷ್ಠಾನದ ವತಿಯಿಂದ ಪ್ರಯೋಗಾಲಯ ಸ್ಥಾಪಿಸಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ತಿಳಿಸಿದರು.

ತಾಲ್ಲೂಕಿನ ಬೇಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿ.ಸೋಮಣ್ಣ ಜನ್ಮ ದಿನದ ಅಂಗವಾಗಿಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವಿ.ಸೋಮಣ್ಣ ಅಭಿಮಾನಿ ಬಳಗ ಆಯೋಜಿಸಿದ್ದ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಯೋಗಾಲಯಗಳ ಎಲ್ಲ ಖರ್ಚುಗಳನ್ನು ನಾನೇ ಭರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವುದಕ್ಕಾಗಿ ₹ 400 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಲಾಗಿದ್ದು, ಸರ್ಕಾರದಲ್ಲಿ ಅನುಮೋದನೆ ಹಂತದಲ್ಲಿದೆ. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸುತ್ತೂರು ಶ್ರಿಗಳು ಚಾಲನೆ ನೀಡಿದ್ದರು. ನಂತರ ಹತ್ತಾರು ಕೆಲಗಳಿಗೆ ನೀರು ತುಂಬಿಸುವ ಯೋಜನೆ ಸಫಲ ಕಂಡಿದೆ’ ಎಂದರು.

ADVERTISEMENT

‘ಜಿಲ್ಲೆಯ ಎಲ್ಲ ಕುಟುಂಬಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುವುದು. ಜೊತೆಗೆ ನಂಜನಗೂಡಿನಿಂದ ಗುಂಡ್ಲುಪೇಟೆವರೆಗೆ ಜೋಡಿ ರಸ್ತೆಯನ್ನಾಗಿ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ನಂಜುಂಡಪ್ಪ ವರದಿಯನ್ನು ಯಥಾವತ್ ಜಾರಿಗೆ ತರಲು ಶ್ರಮ ವಹಿಸಲಾಗುವುದು’ ಎಂದರು.

ಗ್ರಾಮದ ಬಗ್ಗೆ ಚಿಂತಿಸಿ: ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಯುವಕರಿಗೆ ನಗರ ಪ್ರದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ. ಆದರೆ, ಸ್ವಗ್ರಾಮಕ್ಕೆ ಏನು ಮಾಡಬೇಕು ಎಂಬುದನ್ನು ಅವರು ಮೊದಲು ಚಿಂತನೆ ಮಾಡಬೇಕು’ ಎಂದರು.

ಶಾಸಕ ನಿರಂಜನ ಕುಮಾರ್, ಮೈಸೂರು ವಿ.ವಿ ಕುಲಪತಿ ಡಾ.ಜಿ.ಹೇಮಂತ ಕುಮಾರ್, ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳು ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಡಿ.ಎಲ್. ಸಿಂಚನ ಅವರ ಪೋಷಕರನ್ನು ಅಭಿನಂದಿಸಿದ ಸಚಿವ ಸೋಮಣ್ಣ, ಆಕೆಯನ್ನು ತಾವು ದತ್ತು ಪಡೆಯುದಾಗಿ ತಿಳಿಸಿ, ವಿದ್ಯಾರ್ಥಿನಿಗೆ ಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ ಎಸ್‌ಪಿ ಡಿ.ಪಿ. ಶಿವಕುಮಾರ್, ಡಿಡಿಪಿಐ ಮಂಜುನಾಥ್, ಡಿಡಿಪಿಯು ನಾಗಮಲ್ಲೇಶ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಮರಹಳ್ಳಿ ಶ್ರೀಕಂಠಪ್ಪ, ವಿ.ಸೋಮಣ್ಣ ಅಭಿಮಾನಿ ಬಳಗದ ಕಂಡೇಶ್, ಹರದನಹಳ್ಳಿ ರಮೇಶ್, ಎಸ್‍ಎಂಪಿ ಡೆವಲಪರ್ಸ್‍ನ ಶಿವಪ್ರಕಾಶ್, ಜಿ 9 ಪ್ರಾಜೆಕ್ಟ್‍ನ ಕಿರಣ್, ಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಳಿ ಮಾಜಿ ಅಧ್ಯಕ್ಷ ಆಲನಹಳ್ಳಿ ಮಹದೇವಸ್ವಾಮಿ, ಗುತ್ತಿಗೆದಾರ ಚಂದ್ರು ಇತರರು ಇದ್ದರು.

‘ವಿಜ್ಞಾನದ ಜ್ಞಾನ ಹೆಚ್ಚಿಸಿಕೊಳ್ಳಿ’

ಸುತ್ತೂರು ಮಠ‌ದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ವೈಜ್ಞಾನಿಕವಾಗಿ ಜಗತ್ತು ಬದಲಾಗುತ್ತಿದೆ. ಹೀಗಾಗಿ ಮಕ್ಕಳು ವೈಜ್ಞಾನಿಕ ಜ್ಞಾನ ವೃದ್ಧಿಸಿಕೊಳ್ಳಬೇಕು. ರೊಬೋಟಿಕ್‍ನಲ್ಲಿ ಹೊಸ ಹೊಸ ಆವಿಷ್ಕಾರ ಆಗುತ್ತಿದ್ದು, ಕಲಿಕೆ ಬಗ್ಗೆ ಮಕ್ಕಳು ಆಸಕ್ತಿ ಹೊಂದಬೇಕು. ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಪ್ರತಿಭಾವಂತರಿದ್ದಾರೆ. ಪ್ರಕೃತಿಯನ್ನು ಮನುಷ್ಯ ಕೆಡಿಸದಿದ್ದರೆ ಸಾಕು. ಅದೇ ಉತ್ತಮ ರೀತಿಯಲ್ಲಿರುತ್ತದೆ’ ಎಂದು ತಿಳಿಸಿದರು.

ಗುಂಡ್ಲುಪೇಟೆಲಿ ಮನೆ ಮಾಡು...

‘ಜನರ ಕಷ್ಟ ಸುಃಖಗಳಿಗೆ ಸ್ಪಂದಿಸಿ, ಒಡನಾಟ, ಆತ್ಮೀಯತೆ ಇಟ್ಟುಕೊಂಡರೆ ನಿಮ್ಮ ಪರ ಜನರು ನಿಲ್ಲುತ್ತಾರೆ. ಈ ಕಾರಣದಿಂದ ಶಾಸಕ ನಿರಂಜನಕುಮಾರ್ ಗುಂಡ್ಲುಪೇಟೆಯಲ್ಲಿ ಮನೆ ಮಾಡುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಆಗ ನಿರಂತರವಾಗಿ ಗೆಲ್ಲಬಹುದು’ ಎಂದು ಸಮಾರಂಭದಲ್ಲಿದ್ದ ಶಾಸಕರಿಗೆ ಸೋಮಣ್ಣ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.