ADVERTISEMENT

ಆನೆಮಡುವಿನ ಕೆರೆಗೆ ನೀರು: ₹1.5 ಕೋಟಿ ಯೋಜನೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 6:35 IST
Last Updated 8 ಮಾರ್ಚ್ 2023, 6:35 IST

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಲಕ್ಕೂರು ಮಾರ್ಗವಾಗಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ 1.80 ಕಿ.ಮೀ ಉದ್ದದ ಪೈಪ್‍ಲೈನ್ ಪಕ್ಕದಲ್ಲಿ ಮತ್ತೊಂದು ಪೈಪ್‍ಲೈನ್ ಅಳವಡಿಸಿ ಆನೆಮಡುವಿನ ಕೆರೆಗೆ ನೀರು ಹರಿಸುವ ₹1.50 ಕೋಟಿ ಮೊತ್ತದ ಕಾಮಗಾರಿ ಅನುಷ್ಠಾನಕ್ಕೆ ಒಪ್ಪಿಗೆ ಸಿಕ್ಕಿದೆ.

ಉಡಿಗಾಲದ ಚಿಕ್ಕ ಮೋರಿ ಮೂಲಕ ಗುರುತ್ವಾಕರ್ಷಣೆ ಶಕ್ತಿಯಲ್ಲಿ ನೀರು ಹರಿಸಬೇಕು ಎಂದು ರೈತ ಮುಖಂಡರು, ಗ್ರಾಮಸ್ಥರು ಪಟ್ಟುಹಿಡಿದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಸೋಮಣ್ಣ ಅವರು ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆ ರೂಪಿಸಲು ಸೂಚನೆ ನೀಡಿದ್ದರು.

ಅದರಂತೆ ಆಲಂಬೂರು ಏತ ಯೋಜನೆಯ ಮೂರನೇ ಹಂತದ ಲಕ್ಕೂರು ಗ್ರಾಮದ ಹತ್ತಿರದಿಂದ ಪೈಪ್‍ಲೈನ್ ಮುಖಾಂತರ ಉಡಿಗಾಲ ಹತ್ತಿರ ಹರಿಯುವ ಹಳ್ಳಕ್ಕೆ ನೀರನ್ನು ಹರಿಸಲು ಸೂಚಿಸಿದ್ದು, ಅದರಂತೆ ಸರ್ವೆ ಕಾರ್ಯ ಕೈಗೊಂಡು ಆಲಂಬೂರು ಯೋಜನೆಯ 3ನೇ ಹಂತದ ಸರಪಳಿ 3.40 ಕಿ.ಮೀ ನಿಂದ 1.80 ಕಿ.ಮೀ ಉದ್ದಕ್ಕೆ ಪೈಪ್‍ಲೈನ್ ಅಳವಡಿಸಿ 7.50 ಕಿ.ಮೀ ಉದ್ದದ ಕಾಲುವೆಯಲ್ಲಿ ಬರುವ 12 ಚೆಕ್‌ ಡ್ಯಾಮ್‌ಗಳನ್ನು ತುಂಬಿಸಿ ನಂತರ ಆನೆಮಡುವಿನ ಕೆರೆಗೆ ನೀರನ್ನು ಹರಿಸಲು ₹1.5 ಕೋಟಿ ರೂ. ವೆಚ್ಚದ ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರು ಮೈಸೂರಿನ ನೀರಾವರಿ ವಲಯದ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದ್ದಾರೆ.

ADVERTISEMENT

ತಮ್ಮಡಹಳ್ಳಿಯ ಕೆರೆಯಿಂದ ಆನೆಮಡುವಿನಕೆರೆಗೆ 4 ಕಿ.ಮೀ ಉದ್ದಕೆ ಪೈಪ್‌ಲೈನ್‌ ಅಳವಡಿಸಿ ₹3.70 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಯನ್ನು ಕಾವೇರಿ ನೀರಾವರಿ ನಿಗಮ ರೂಪಿಸಿತ್ತು. ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಬೇಕಾದ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘ ಮತ್ತು ಸ್ಥಳೀಯ ರೈತರು ಹೊಸ ಮಾರ್ಗದಲ್ಲಿ ಪೈಪ್‌ಲೈನ್‌ ಮೂಲಕ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ, ಉಡಿಗಾಲದ ಚಿಕ್ಕ ಮೋರಿ ಮೂಲಕ ಗುರುತ್ವಾಕರ್ಷಣ ಶಕ್ತಿಯಲ್ಲಿ ನೀರು ಹರಿಸಬೇಕು ಎಂದು ಪಟ್ಟುಹಿಡಿದು ತೀವ್ರ ಹೋರಾಟ ಮಾಡಿದ್ದರು.

ರೈತರ ಹೋರಾಟಕ್ಕೆ ಸ್ಪಂದಿಸಿದ್ದ ಉಸ್ತುವಾರಿ ಸಚಿವ ಸೋಮಣ್ಣ, ಚಿಕ್ಕಮೋರಿ ಮೂಲಕ ನೀರು ಹರಿಸಲು ಪ್ರತ್ಯೇಕ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದರು. ಅದೀಗ ನೆರವೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.