ಚಾಮರಾಜನಗರ: ಜಿಲ್ಲೆಯಾದ್ಯಂತ ಸಾವಿರಾರು ಸಾಲು ಮರಗಳನ್ನು ನೆಟ್ಟು ಪೋಷಿಸುತ್ತಿರುವ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ 2024–25ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಲೆನಾಡು ಹಾಗೂ ಕರಾವಳಿ ವಲಯದಿಂದ ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿಯು ₹ 1 ಲಕ್ಷ ನಗದು ಪುರಸ್ಕಾರದ ಜೊತೆಗೆ ಪ್ರಶಸ್ತಿ ಪತ್ರ ಒಳಗೊಂಡಿದೆ.
ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ಸಾಲುಮರದ ವೆಂಕಟೇಶ್ ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿ. ಒಂದು ದಶಕದಿಂದಲೂ ಗಿಡ ನೆಡುವ ಕಾಯಕವನ್ನು ವ್ರತದಂತೆ ಪಾಲಿಸಿಕೊಂಡು ಬಂದಿರುವ ಅವರು ಜೀವನವನ್ನೇ ಪರಿಸರಕ್ಕಾಗಿ ಮೀಸಲಿರಿಸಿದ್ದಾರೆ. ಐದಾರು ವರ್ಷಗಳ ಹಿಂದೆ ರಸ್ತೆ ಬದಿಯಲ್ಲಿ ಅವರು ನೆಟ್ಟ ಗಿಡಗಳು ಇಂದು ಮರವಾಗಿ ತಂಗಾಳಿ ಸೂಸುತ್ತಿವೆ. ಬಿಸಿಲಿನ ಬೇಗೆಯಿಂದ ಬಳಲಿದವರಿಗೆ ನೆರಳು ನೀಡುತ್ತಿವೆ.
ನಗರದ ಬಿ.ರಾಚಯ್ಯ ಜೋಡಿ ರಸ್ತೆ, ಜಿಲ್ಲಾ ನ್ಯಾಯಾಲಯ ರಸ್ತೆ, ಡಿವಿಯೇಷನ್ ರಸ್ತೆ, ರಾಮಸಮುದ್ರ, ಮುಕ್ತ ವಿವಿ ರಸ್ತೆ, ರೈಲು ನಿಲ್ದಾಣ ರಸ್ತೆ, ಸಿಮ್ಸ್ ಆಸ್ಪತ್ರೆಯ ರಸ್ತೆ, ಅಂಬೇಡ್ಕರ್ ಕ್ರೀಡಾಂಗಣ, ಕೇಂದ್ರಿಯ ವಿದ್ಯಾಲಯ ಹೀಗೆ ನಗರದ 6 ಕಿ.ಮೀ ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿ ಸಾಲು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ ವೆಂಕಟೇಶ್.
ಎಸ್‌ಪಿಬಿ ಸ್ಫೂರ್ತಿ: ಗಿಡ ನೆಡುವ ಹವ್ಯಾಸಕ್ಕೆ ಖ್ಯಾತ ಹಿನ್ನೆಲೆಗಾಯಕ ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೇ ಸ್ಫೂರ್ತಿ. ಅವರ ಋಣ ಸಂದಾಯ ಮಾಡಲು 2016ರಲ್ಲಿ ಎಸ್‌ಪಿಬಿ ಹುಟ್ಟುಹಬ್ಬದ ಆಚರಣೆ ಅಂಗವಾಗಿ ಆರಂಭಿಸಿದ ಗಿಡ ನೆಡುವ ಕಾಯಕ ಇಂದಿಗೂ ಸಾಂಗವಾಗಿ ಮುಂದುವರಿದಿದೆ.
ಸಾಲಕ್ಕೆ ಮನೆ ಮಾರಿದೆ: ‘ಮರ ಗಿಡಗಳ ಮಹತ್ವದ ಮುಂದೆ ಆರ್ಥಿಕ ಶಿಸ್ತು ಹಳಿ ತಪ್ಪಿತು. ಗಿಡಗಳ ಖರೀದಿ ಮಾಡಲು, ನೆಡಲು, ನೀರುಣಿಸಲು, ನಿರ್ವಹಣೆ ಮಾಡಲು ಹಣದ ಅವಶ್ಯಕತೆ ಇದ್ದಿದ್ದರಿಂದ ಸಾಲ ಮಾಡುವುದು ಅನಿವಾರ್ಯವಾಯಿತು. ಕೆಲ ವರ್ಷಗಳಲ್ಲಿ ಸಾಲದ ಹೊರೆ ಹೆಚ್ಚಾಗಿ ಕಷ್ಟಪಟ್ಟು ಕಟ್ಟಿದ ಮನೆ ಮಾರಾಟ ಮಾಡಿ ಸಾಲ ತೀರಿಸಬೇಕಾಯಿತು. ಮನೆ ಕಳೆದುಕೊಂಡ ಬಗ್ಗೆ ಬೇಸರವಿಲ್ಲ, ಅಂದು ಸಾಲಮಾಡಿ ನೆಟ್ಟ ಗಿಡಗಳನ್ನು ಇಂದು ನೋಡುವಾಗ ಮನಸ್ಸು ತುಂಬಿ ಬರುತ್ತದೆ’ ಎನ್ನುತ್ತಾರೆ ವೆಂಕಟೇಶ್.
‘ಏಕಾಂಗಿಯಾಗಿ ಶುರುವಾದ ಪರಿಸರ ಉಳಿಸುವ ಹೋರಾಟಕ್ಕೆ ಸಮಾನ ಮನಸ್ಕರು ಕೈಜೋಡಿಸಿದ್ದಾರೆ. ಲೆಕ್ಕಪರಿಶೋಧಕ ವೃತ್ತಿಯಲ್ಲಿ ಬರುವ ಆದಾಯದ ಒಂದು ಪಾಲನ್ನು ಗಿಡಗಳನ್ನು ನೆಡಲು ಹಾಗೂ ನಿರ್ವಹಣೆ ಮಾಡಲು ಬಳಸುತ್ತಿದ್ದೇನೆ. ಈ ಕಾರ್ಯದಲ್ಲಿ ಆತ್ಮತೃಪ್ತಿ ಕಂಡುಕೊಂಡಿದ್ದೇನೆ’ ಎನ್ನುತ್ತಾರೆ.
7,000 ಸಾವಿರಕ್ಕೂ ಹೆಚ್ಚು ಗಿಡ
ಆಕಾಶ ಮಲ್ಲಿಗೆ ಬಸವನ ಪಾದ ದೇವಗಣ ಬೇವು ಹೆಬ್ಬೇವು ಹೊಂಗೆ ಗಿಡ ಸೇರಿದಂತೆ ವಿವಿಧ ಜಾತಿಯ 7000 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ನಗರದ ಪ್ರಮುಖ ಬಡಾವಣೆಗಳು ರಸ್ತೆಗಳಲ್ಲಿರುವ ಸಾಲುಮರಗಳು ವೆಂಕಟೇಶ್ ಅವರ ಪರಿಸರ ಪ್ರೇಮದ ಸಾಕ್ಷಿಯಾಗಿ ನಿಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.