
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಅಗ್ನಿ ಅನಾಹುತದಿಂದ ಭಸ್ಮವಾದ ಅಂಗಡಿಗಳ ದುರಸ್ತಿಗೆ ವ್ಯಾಪಾರಿಗಳು ಶನಿವಾರ ಮುಂದಾಗಿದ್ದಾರೆ.
ಸಂಕ್ರಾಂತಿ ತೇರಿಗೂ ಮೊದಲು ಮತ್ತೆ ವ್ಯಾಪಾರ-ವಹಿವಾಟು ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೂದಿ ಸ್ಥಳದಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳುವತ್ತ ಪೆಟ್ಟಿಗೆ ಅಂಗಡಿಗಳ ದುರಸ್ತಿ ಕಾರ್ಯ ನಡೆಸಿದ್ದಾರೆ.
ಇದೇ 16 ರಂದು ಬೆಟ್ಟದಲ್ಲಿ ಸಂಕ್ರಾಂತಿ ರಥೋತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಸಮಯದಲ್ಲಿ ತೇರನ ಬೀದಿಯನ್ನು ಚಂದವಾಗಿಸಬೇಕಿದೆ. ಮತ್ತೆ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಬೇಕಿದೆ ಎಂಬುದು ವ್ಯಾಪಾರಿಗಳ ಅನಿಸಿಕೆ.
‘ಅಂಗಡಿಗಳು ಸುಟ್ಟು ಹೋಗಿವೆ, ಸರ್ಕಾರದಿಂದ ಯಾವ ಸಹಾಯವು ಸಿಕ್ಕಿಲ್ಲ. ಈ ಸಮಯದಲ್ಲಿ ಕುಟುಂಬದ ನೂರಾರು ಜನರ ಬದುಕು ವ್ಯಾಪಾರವನ್ನೇ ನಂಬಿಕೊಂಡಿದೆ. ದುರಸ್ತಿಗಾಗಿ ಅನ್ಯರನ್ನು ಕಾಯ್ದು ಕುಳಿತರೆ ಸಮಯ ಕಳೆಯುತ್ತದೆ. ಒಂದಷ್ಟು ಲಾಭಾಂಶವೂ ಕೈ ಬಿಡುತ್ತದೆ. ಹಾಗಾಗಿ, ಸಂತ್ರಸ್ತರು ಅವರವರ ಅಂಗಡಿಗಳನ್ನು ಮತ್ತೆ ಆರಂಭಿಸಲು ಮುಂದಾಗಿದ್ದಾರೆ. ಬಡ್ಡಿಗೆ ಸಾಲ ತಂದು ಬಹು ಬೇಗ ಅಂಗಡಿ ತೆರೆಯುವತ್ತ ಚಿತ್ತ ಹರಿಸಿದ್ದಾರೆ’ ಎಂದು ವ್ಯಾಪಾರಿ ನಾಗೇಂದ್ರ ಹೇಳಿದರು.
‘ಸಂಬಂಧಿಕರು ಮತ್ತು ಸಂಘ-ಸಂಸ್ಥೆಗಳಿಂದ ಮುಂಗಡ ತಂದು ಮತ್ತೆ ಗೂಡಂಗಡಿ ತೆರೆಯುತ್ತೇವೆ. ಪಾನೀಯ ಮತ್ತು ಟೀ ಮಾರಾಟ ಆರಂಭಿಸುತ್ತೇವೆ. ಜಾತ್ರೆಗೆ ಅಗತ್ಯವಾದ ಆ್ಯಂಟಿಕ್ ವಸ್ತುಗಳು, ಮೂಲಿಕೆ, ಪರಿಸರ ಸ್ನೇಹಿ ತಿನಿಸು, ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿ, ಪ್ರವಾಸಿಗರು ಮತ್ತು ಭಕ್ತರಿಗೆ ಮಾರುವ ಕನಸು ಹೊಂದಿದ್ದೇವೆ, ಬದುಕು ಮತ್ತೆ ಮೊದಲಿನಂತೆ ಅರಳಿದರೆ ಸಾಕು’ ಎನ್ನುತ್ತಾರೆ ಕಾರ್ತಿಕ ಪ್ರಿಯ.
‘ಬುಡಕಟ್ಟು ಸಮುದಾಯದ 8 ಅಂಗಡಿಗಳು ಸುಟ್ಟಿವೆ, ನೂರಾರು ಜನರ ಬದುಕು ಅಂಗಡಿ ವ್ಯಾಪಾರದ ಮೇಲೆ ನಿಂತಿದೆ. ಸರ್ಕಾರ ಅಂಗಡಿ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕು. ಬಡ್ಡಿ ರಹಿತ ಬಂಡವಾಳ ನೀಡಬೇಕು’ ಎಂದು ವ್ಯಾಪಾರಿಗಳು ಆಗ್ರಹಿಸುತ್ತಾರೆ.
ಬುಡಕಟ್ಟು ಸಮುದಾಯದ 8 ಅಂಗಡಿ ಭಸ್ಮ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ: ಬೇಸರ ನೂರಾರು ಜನರ ಬದುಕು ಅತಂತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.