ADVERTISEMENT

‘ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕ್ರಮ’

ಸೆಸ್ಕ್ ಕಚೇರಿ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:05 IST
Last Updated 24 ಡಿಸೆಂಬರ್ 2025, 6:05 IST
ಸಂತೇಮರಹಳ್ಳಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಉಪ ವಿಭಾಗ ಕಚೇರಿ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಚಾಮರಾಜನಗರ ಇಇ ಪ್ರದೀಪ್‌ ಕುಮಾರ್ ಮಾತನಾಡಿದರು
ಸಂತೇಮರಹಳ್ಳಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಉಪ ವಿಭಾಗ ಕಚೇರಿ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಚಾಮರಾಜನಗರ ಇಇ ಪ್ರದೀಪ್‌ ಕುಮಾರ್ ಮಾತನಾಡಿದರು   

ಸಂತೇಮರಹಳ್ಳಿ: ‘ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿ ಮಾರ್ಚ್ ತಿಂಗಳೊಳಗೆ ಸೋಲಾರ್ ಪಾರ್ಕ್ ನಿರ್ಮಾಣವಾಗುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ನಿರಂತರವಾಗಿ ವಿದ್ಯುತ್ ದೊರೆಯಲಿದೆ’ ಎಂದು ಸೆಸ್ಕ್ ಚಾಮರಾಜನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರದೀಪ್‌ ಕುಮಾರ್ ತಿಳಿಸಿದರು.

ಇಲ್ಲಿನ ಸೆಸ್ಕ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ 86 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ 16 ಕಡೆಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಚಾಮರಾಜನಗರ ತಾಲ್ಲೂಕಿನ ಹೊನ್ನಹಳ್ಳಿಯಲ್ಲಿ ಸೋಲಾರ್ ಪಾರ್ಕ್ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿದೆ. ಅದೇ ರೀತಿಯಾಗಿ ಸಂತೇಮರಹಳ್ಳಿ ಹೋಬಳಿ ಜನ್ನೂರು ಗ್ರಾಮದಲ್ಲಿರುವ 23 ಎಕರೆ ಸರ್ಕಾರಿ ಜಮೀನಿನಲ್ಲಿ 3 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುವ ಹಿನ್ನೆಲೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಈಗಾಗಲೇ ಕಾಮಗಾರಿ ಆರಂಭಗೊಂಡಿದೆ. ಮಾರ್ಚ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಸಂತೇಮರಹಳ್ಳಿ ಹೋಬಳಿ ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ’ ಎಂದರು.

ADVERTISEMENT

‘ಪಿ.ಎಂ.ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್‌ಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ 510 ರೈತರು ನೋಂದಣಿ ಮಾಡಲಾಗಿದೆ. 66 ಮಂದಿ ರೈತರಿಂದ ಹಣ ಪಾವತಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರಿಯಾಯಿತಿ ದರ ಅನುದಾನದಲ್ಲಿ ಈಗಾಗಲೇ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಗಣಗನೂರು, ಜನ್ನೂರು ಗ್ರಾಮಗಳ ರೈತರು ಕೃಷಿ ಪಂಪ್ ಸೆಟ್‌ಗೆ ಸೋಲಾರ್ ಆಡಳವಡಿಸಲಾಗಿದೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸೌರಗೃಹ ಉಚಿತ ವಿದ್ಯುತ್ ಯೋಜನೆಯಡಿ ಮಾಸಿಕ ವಿದ್ಯುತ್ ಬಿಲ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಗೃಹ ಬಳಕೆ ಗ್ರಾಹಕರು ಮನೆಗಳ ಕಟ್ಟಡದಲ್ಲಿ ಸೌರ ಘಟಕ ಆಳವಡಿಸಲು ರಿಯಾಯಿತಿ ದರದಲ್ಲಿ ಸೋಲಾರ್ ಆಳವಡಿಸಿಕೊಳ್ಳಬಹುದು. ಇದರ ಪ್ರಯೋಜನ ಪಡೆದುಕೊಳ್ಳಲು ಗ್ರಾಹಕರು ಮುಂದಾಗಬೇಕು’ ಎಂದು ತಿಳಿಸಿದರು.

‘3 ತಿಂಗಳಿಗೊಮ್ಮೆ ಸಾರ್ವಜನಿಕರ ಸಮಸ್ಯೆ ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಜನ ಸಂಪರ್ಕ ಸಭೆ ಆಯೋಜನೆ ಮಾಡಲಾಗುತ್ತಿದೆ. ಈ ಸಭೆಯಲ್ಲಿ ಬರುವ ದೂರುಗಳ ಆನುಸಾರವಾಗಿ ಸಮಸ್ಯೆ ಬಗೆಹರಿಸಲು ಹೆಚ್ಚು ಒತ್ತು ನೀಡಲಾಗುತ್ತದೆ. ಇಲಾಖೆ ಸಾರ್ವಜನಿಕರಿಗೆ ಗುಣಮಟ್ಟದ ವಿದ್ಯುತ್ ನೀಡುವ ನಿಟ್ಟಿನಲ್ಲಿ ಹೆಚ್ಚು ಆದ್ಯತೆ ನೀಡುತ್ತಿದೆ. ಸಭೆಯಲ್ಲಿ ಬಂದಿರುವ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ವೇಳೆಯಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಮೀನಿನಲ್ಲಿರುವ ಟಿಸಿ ಬದಲಾವಣೆ, ಕೊಳವೆ ಬಾವಿಗೆ ಹೊಸ ನಂಬರ್, ಮನೆಗೆ ಹೆಚ್ಚುವರಿ ಮೀಟರ್ ಆಳವಡಿಕೆ, ರಾಘವೇಂದ್ರ ಬಡಾವಣೆಗೆ ಹೆಚ್ಚುವರಿ ಟಿಸಿ ಸೇರಿದಂತೆ ದೂರುಗಳು ಸಭೆಯಲ್ಲಿ ಕೇಳಿ ಬಂದವು.

ಹಿರಿಯ ಸಹಾಯಕ ಜನಾರ್ಧನ್, ಜೆಇಗಳಾದ ತಿಪ್ಪೇಸ್ವಾಮಿ, ಮನೋಜ್‌ಕುಮಾರ್, ಸತೀಶ್, ಮರಿಸ್ವಾಮಿ, ದೊರೆಸ್ವಾಮಿ ಇದ್ದರು.

‘₹12 ಕೋಟಿ ಬಾಕಿ’

ಎಇಇ ಮುದ್ದುರಾಜು ಮಾತನಾಡಿ ‘ಕಳೆದ 3 ತಿಂಗಳ ಹಿಂದೆ ನಡೆದ ಸಭೆಯಲ್ಲಿ 5 ದೂರುಗಳು ಕೇಳಿ ಬಂದಿದ್ದು ಈಗಾಗಲೇ 4 ದೂರುಗಳ ಸಮಸ್ಯೆ ಬಗೆಹರಿಸಲಾಗಿದೆ. ಸಂತೇಮರಹಳ್ಳಿ ಉಪ ವಿಭಾಗ ವ್ಯಾಪ್ತಿಗೆ 20 ಗ್ರಾಮ ಪಂಚಾಯಿತಿಯ ಕುಡಿಯುವ ನೀರು ಬೀದಿ ದೀಪಗಳ ವಿದ್ಯುತ್ ಬಿಲ್ ಬಾಕಿ ₹ 12 ಕೋಟಿ ಉಳಿದಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.