ಸಂತೇಮರಹಳ್ಳಿ: ಹೋಬಳಿಗೆ ಸೇರಿದ ಕುದೇರು ಸಮೀಪವಿರುವ ಸ್ವಾಮಿ ವಿವೇಕಾನಂದ ಕಾಲೊನಿಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಕಾಲೊನಿಯ ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದರು.
ಕಾಲೊನಿಯ ನಿವಾಸಿಗಳು ಕಾಮಗಾರಿ ಅಪೂರ್ಣಗೊಂಡಿರುವ ಸ್ಥಳದಲ್ಲಿ, ಕಾಮಗಾರಿ ನಿರ್ವಹಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗ್ಗುತ್ತಾ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು.
‘ಕಾಲೊನಿಯಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಇಲ್ಲಿರುವ ಕುಟುಂಬಗಳು ಹಂದಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಕಾಲೊನಿಯಲ್ಲಿ ಮೂಲಸೌಲಭ್ಯವಿಲ್ಲದೆ ನಿವಾಸಿಗಳು ತೊಂದರೆ ಪಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಪ್ರತಿಭಟನಕಾರರು ಕಿಡಿಕಾರಿದರು.
‘ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕಾಲೊನಿಗೆ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಎಸ್‌ಸಿಪಿ ಯೋಜನೆಯಡಿ ₹30 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ನಿರ್ವಹಣೆ ಹೊಂದಿರುವ ನಿರ್ಮಿತಿ ಕೇಂದ್ರ 6 ತಿಂಗಳ ಹಿಂದೆ ಕಾಲೊನಿಯಲ್ಲಿ ಬಾಕ್ಸ್ ಚರಂಡಿ ಹಾಗೂ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಡಕ್ ನಿರ್ಮಾಣ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದೇ ಇರುವ ಪರಿಣಾಮ, ಮಳೆ ಬಂದಾಗ ಚರಂಡಿಯಲ್ಲಿ ನೀರು ಮುಂದೆ ಹೋಗದೆ ಮನೆಗಳ ಮುಂಭಾಗದಲ್ಲೇ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ ಹಾಗೂ ದುರ್ವಾಸನೆಯನ್ನು ನಿವಾಸಿಗಳು ನಿತ್ಯ ಅನುಭವಿಸುವಂತಾಗಿದೆ’ ಎಂದು ಮಹಿಳೆಯರು ಆರೋಪಿಸಿದರು.
ಆರು ತಿಂಗಳ ಹಿಂದೆ ಕಾಮಗಾರಿ ಆರಂಭಿಸಿ, ಚರಂಡಿ ಕಾಮಗಾರಿಯನ್ನು ಮಾತ್ರ ಮಾಡಿ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮಳೆಗಾಲ ಆಗಿರುವುದರಿಂದ ರಸ್ತೆಯಲ್ಲಿ ನೀರು ನಿಂತು ನಿವಾಸಿಗಳು ಮನೆಯಿಂದ ಹೊರಗಡೆ ಬರುವುದಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನಹರಿಸಿ, ಅಪೂರ್ಣಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಮಂಜುಳಾ, ರತ್ನ, ಭಾಗ್ಯಮ್ಮ, ನಾಗಮ್ಮ, ಚಿನ್ನಮ್ಮ, ಲಕ್ಷ್ಮಮ್ಮ, ಗೌರಮ್ಮ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.