ADVERTISEMENT

ಸಂತೇಮರಹಳ್ಳಿ | ಚಿರತೆ ಉಪಟಳ: ಜನರಲ್ಲಿ ಆತಂಕ

ಹೊಲಗಳಿಗೆ ತೆರಳಲು ಭಯ ಕಾಡುಪ್ರಾಣಿಗಳ ಹಾವಳಿಗೆ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 7:05 IST
Last Updated 16 ಜೂನ್ 2025, 7:05 IST
ಉಮ್ಮತ್ತೂರು ವ್ಯಾಪ್ತಿಯಲ್ಲಿ ಈಚೆಗೆ ಸೆರೆ ಸಿಕ್ಕ ಚಿರತೆ
ಉಮ್ಮತ್ತೂರು ವ್ಯಾಪ್ತಿಯಲ್ಲಿ ಈಚೆಗೆ ಸೆರೆ ಸಿಕ್ಕ ಚಿರತೆ   

ಸಂತೇಮರಹಳ್ಳಿ: ಉಮ್ಮತ್ತೂರು ಅರಣ್ಯ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರಲ್ಲಿ ಭೀತಿ ಮನೆಮಾಡಿದೆ. ಜನ ಜಾನುವಾರುಗಳ ಮೇಲೆ ಚಿರತೆ ದಾಳಿ ಆತಂಕ ಮನೆಮಾಡಿದ್ದು ಮಾನವ ಪ್ರಾಣಿ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ.

ಕಳೆದ ಎರಡು ವಾರಗಳಿಂದೀಚೆಗೆ ಉಮ್ಮತ್ತೂರು ವ್ಯಾಪ್ತಿಯಲ್ಲಿ 3 ಚಿರತೆಗಳನ್ನು ಅರಣ್ಯ ಇಲಾಕೆ ಸೆರೆ ಹಿಡಿದಿದೆ. ಕಳೆದ ಒಂದು ವರ್ಷದಲ್ಲಿ 9 ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು ಚಿರತೆಗಳ ಹಾವಳಿಗೆ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.

ಒಂದು ಕಡೆ ಚಿರತೆ ಸೆರೆ ಸಿಕ್ಕಿತ್ತು ಎಂದು ನಿಟ್ಟುಸಿರು ಬಿಡುವ ಹೊತ್ತಿಗಾಗಲೇ ಮತ್ತೊಂದು ಕಡೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಶುರುವಾಗುತ್ತಿದೆ. ಚಿರತೆಗಳ ಕಾಟಕ್ಕೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಈ ಭಾಗದ ಜನರನ್ನು ಕಾಡುತ್ತಿದೆ.

ADVERTISEMENT

ಉಮ್ಮತ್ತೂರು ಕೃಷ್ಣವನ್ಯಮೃಗ ಧಾಮ ಚಿರತೆಗಳ ಪ್ರಮುಖ ಆವಾಸಸ್ಥಾನವಾಗಿದೆ. ಉಮ್ಮತ್ತೂರು, ಬಾಗಳಿ, ಕಾರ್ಯ, ಜನ್ನೂರು ವ್ಯಾಪ್ತಿ ಸೇರಿದಂತೆ 1,500 ಎಕರೆ ಪ್ರದೇಶದಲ್ಲಿ ಕೃಷ್ಣವನ್ಯಧಾಮ ಅರಣ್ಯ ಹರಡಿಕೊಂಡಿದೆ. ಜತೆಗೆ ಉಮ್ಮತ್ತೂರು, ತೊರವಳ್ಳಿ ಹಾಗೂ ದಾಸನೂರು ಗ್ರಾಮಗಳ ಭಾಗದಲ್ಲಿ ಕರಿಕಲ್ಲು ಕ್ವಾರಿಗಳು ಹೆಚ್ಚಾಗಿದ್ದು ಚಿರತೆಗಳು ಹೆಚ್ಚಾಗಿ ಅಡಗಿಕೊಂಡಿವೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಚಿರತೆಗಳು ಪ್ರಾಣಿಗಳ ಮೇಲೆ ದಾಳಿ ಮಾಡಿದ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅರಣ್ಯ ಇಲಾಖೆ ಬೋನ್‌ಗಳನ್ನು ಇರಿಸಿ ಸೆರೆ ಹಿಡಿಯುತ್ತಿದೆ. ಕಳೆದ ಎರಡು ವಾರಗಳಲ್ಲಿ ತೊರವಳ್ಳಿ, ಉಮ್ಮತ್ತೂರು ಹಾಗೂ ದಾಸನೂರು ಕರಿಕಲ್ಲು ಕ್ವಾರಿಗಳಲ್ಲಿ 3 ಚಿರತೆಗಳು ಸೆರೆ ಸಿಕ್ಕಿವೆ. ಒಂದು ವರ್ಷದಲ್ಲಿ ಕೆಂಪನಪುರ, ಹುಲ್ಲೇಪುರ, ನವಿಲೂರು, ಜನ್ನೂರು ಹಾಗೂ ಉಮ್ಮತ್ತೂರು ಭಾಗಗಳಲ್ಲಿ 9 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಚಿರತೆಗಳನ್ನು ಸೆರೆ ಹಿಡಿದರೂ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಆಲ್ದೂರು, ಜನ್ನೂರು, ಹೊಸೂರು, ಬಾಗಳಿ, ನವಿಲೂರು ಹಾಗೂ ಕಮರವಾಡಿ ಗ್ರಾಮಗಳಲ್ಲಿ ರಾತ್ರಿವೇಳೆ ಹಸುಗಳ ಮೇಲೆ ಚಿರತೆಗಳು ದಾಳಿ ಮಾಡುತ್ತಿದ್ದು ನಾಯಿಗಳು ಸೇರಿದಂತೆ ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿವೆ.

ಈಚೆಗೆ ಬಾಗಳಿ ಗ್ರಾಮದ ಜಮೀನಿನಲ್ಲಿ ಮಹಿಳೆಯೊಬ್ಬರು ಕುರಿ ಮೇಯಿಸುವಾಗ ಚಿರತೆ ದಾಳಿ ಮಾಡಿ ಕುರಿಯನ್ನು ಹೊತ್ತೊಯ್ದಿತ್ತು. ರಾತ್ರಿ ವೇಳೆಯಲ್ಲಿ ಮನೆಯ ಹೊರ ಭಾಗದಲ್ಲಿ ಕಟ್ಟಿರುವ ಜಾನುವಾರುಗಳನ್ನು ಚಿರತೆ ಬಲಿ ತೆಗೆದುಕೊಂಡಿದ್ದವು.

ಉಮ್ಮತ್ತೂರು ಅರಣ್ಯ ವ್ಯಾಪ್ತಿಯ ಗ್ರಾಮಗಳ ಬಹುತೇಕ ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಾನುವಾರುಗಳನ್ನು
ಜಮೀನುಗಳ ಕಡೆಗೆ ಮೇಯಿಸಲು ಬಿಟ್ಟಾಗ ಚಿರತೆಗಳು ದಾಳಿ ಮಾಡುತ್ತಿವೆ. ಇದರಿಂದ ಜಾನುವಾರು ಮೇಯಿಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಚಿರತೆಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು, ಈ ಭಾಗದ ಗ್ರಾಮಸ್ಥರಿಗೆ ಹಾಗೂ ಜಾನುವಾರುಗಳಿಗೆ ರಕ್ಷಣೆ ನೀಡಬೇಕು ಎಂದು ಮುಖಂಡ ಬಾಗಳಿ ರೇವಣ್ಣ ಒತ್ತಾಯಿಸುತ್ತಾರೆ.

ಚಿರತೆ ದಾಳಿ ಭೀತಿಯಿಂದ ಉಮ್ಮತ್ತೂರು ಅರಣ್ಯ ವ್ಯಾಪ್ತಿಯ ಅಂಚಿನಲ್ಲಿರುವ ಗ್ರಾಮಸ್ಥರು ರಾತ್ರಿಯ ಹೊತ್ತು ಜಮೀನುಗಳಿಗೆ ತೆರಳಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು, ಹೊಲಗಳಿಗೆ ನೀರು ಹಾಯಿಸಲು ಭಯಪಡುವಂತಾಗಿದೆ. ಪರಿಣಾಮ ರೈತರ ಬೆಳೆಗಳು ಕಾಡುಹಂದಿಗಳ ಪಾಲಾಗುತ್ತಿವೆ.

2 ವಾರಗಳಲ್ಲಿ ಮೂರು ಚಿರತೆಗಳ ಸೆರೆ ಜಾನುವಾರು, ನಾಯಿಗಳ ಮೇಲೆ ದಾಳಿ ಕುರಿ ಮೇಯಿಸಲು ಹೋಗಲು ಹೆದರುವ ಗ್ರಾಮಸ್ಥರು

ಜಮೀನುಗಳಿಗೆ ಹೋಗುವಾಗ ಹಲವು ಬಾರಿ ರಾತ್ರಿಯ ಹೊತ್ತು ರೈತರಿಗೆ ಚಿರತೆ ಕಾಣಿಸಿಕೊಂಡು ಭಯದಿಂದ ಮನೆ ಸೇರಿಕೊಂಡಿದ್ದಾರೆ. ಅರಣ್ಯ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರ ಫಸಲು ಉಳಿಸಬೇಕು

ದೇಮಹಳ್ಳಿ ಶಿವಕುಮಾರ್ ರೈತ

ಚಿರತೆ ಹಿಡಿಯಲು ಕ್ರಮ ಉಮ್ಮತ್ತೂರು ಅರಣ್ಯ ಭಾಗದಲ್ಲಿರುವ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಇರುವ ಬಗ್ಗೆ ಗ್ರಾಮಸ್ಥರು ಹಾಗೂ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಪ್ರಾಣಿಗಳ ಮೇಲೆ ದಾಳಿ ಮಾಡಿದ ಸ್ಥಳದಲ್ಲಿ ಬೋನ್‌ಗಳನ್ನು ಇಟ್ಟು ಚಿರತೆಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಎಚ್ಚರಿಕೆಯಿಂದ ಇರಬೇಕು ಹೊಲ ಗದ್ದೆಗಳಿಗೆ ಹೋಗುವಾಗ ಜಾಗರೂಕರಾಗಿರಬೇಕು ಎನ್ನುತ್ತಾರೆ ಉಪ ವಲಯ ಅರಣ್ಯಾಧಿಕಾರಿ ಚಂದ್ರಕುಮಾರ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.