ಸಂತೇಮರಹಳ್ಳಿ: 50 ವರ್ಷಗಳಿಂದ ತಮ್ಮ ಮನೆಯಲ್ಲಿ ಬೊಂಬೆಗಳನ್ನು ಕೂರಿಸಿ ಪೂಜಿಸಿ ನವರಾತ್ರಿ ಆಚರಣೆ ಮಾಡುವ ಕುಟುಂಬವೊಂದು ಇಲ್ಲಿದೆ. ಅವರೇ ಸಂತೇಮರಹಳ್ಳಿಯ ಹೋಟೆಲ್ ಬಾಲು.
ಪ್ರತಿವರ್ಷ ತಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸಿ, ವಿಶಿಷ್ಟವಾಗಿ ನವರಾತ್ರಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಇವರ ಮನೆಯಲ್ಲಿ ನವರಾತ್ರಿ ಬಂತೆಂದರೆ ಬೊಂಬೆಗಳದ್ದೇ ದರ್ಬಾರು.
ನವರಾತ್ರಿ ಸಮಯದಲ್ಲಿ ಇವರ ತಂದೆ ತಾಯಿ ಗೊಂಬೆಗಳನ್ನು ಕೂರಿಸಿ, ಪೂಜಿಸಿಕೊಂಡು ಬರುತ್ತಿದ್ದ ಸಂಪ್ರದಾಯವನ್ನು ಈಗ ಮಕ್ಕಳು, ಮೊಮ್ಮಕ್ಕಳು ಆಚರಿಸಿಕೊಂಡು ಬರುತ್ತಿದ್ದಾರೆ. ಮನೆಯಲ್ಲಿ ಶೇಖರಿಸಿಟ್ಟಿರುವ 300 ರಷ್ಟು ಬೊಂಬೆಗಳನ್ನು ನವರಾತ್ರಿ ಸಮಯದಲ್ಲಿ ಪ್ರತಿಷ್ಠಾಪಿಸಿ ಪೂಜಿಸು ತ್ತಿದ್ದಾರೆ.
ಅಷ್ಟ ಲಕ್ಷ್ಮಿಯರು, ದಶಾವತಾರ, ಮದುವೆ ಗೊಂಬೆಗಳು, ಕೃಷ್ಣ–ರಾಧೆ, ಸರಸ್ವತಿ, ಮರದ ಗೊಂಬೆಗಳು, ಪೂಜಾ ಸಾಮಗ್ರಿಗಳೂ ಇವೆ. ಬೊಂಬೆಗಳನ್ನು ಕ್ರಮ ಬದ್ದವಾಗಿ ಜೋಡಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಮೊದಲ ದಿನ ಬ್ರಹ್ಮಚಾರಿಣಿ, ದುರ್ಗೆ, ಮಹಾಗೌರಿ, ಕಾಳರಾತ್ರಿ ದೇವಿ, ಸರಸ್ವತಿ, ಸ್ಕಂಧಮಾತೆ, ದುರ್ಗಾ ಪರಮೇಶ್ವರಿ, ಕೂಷ್ಮಾಂಡ ಹಾಗೂ ಕೊನೆಯ ದಿನ ನಾಡ ದೇವತೆ ಚಾಮುಂಡೇಶ್ವರಿಯನ್ನು ಪೂಜಿಸಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ಗೊಂಬೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ಪೂಜಾ ಸಮಯದಲ್ಲಿ ಸಿಹಿ ವಿತರಿಸಲಾಗುತ್ತದೆ. ಸರಸ್ವತಿ ದೇವಿ ಪೂಜಾ ದಿನದಂದು ಪುಸ್ತಕಗಳನ್ನು ಇಟ್ಟು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನಿವೇದಿಸಿ, ಪೂಜೆ ಸಲ್ಲಿಸಲಾಗುತ್ತದೆ. ದುರ್ಗಾಷ್ಟಮಿಯಂದು ದೇವಿ ಬರುತ್ತಾಳೆ ಎಂಬ ನಂಬಿಕೆಯಿಂದ ವಿಶೇಷ ಪೂಜೆ ಸಲ್ಲಿಸಿ ಹೆಣ್ಣು ಮಕ್ಕಳಿಗೆ ಅರಸಿನ ಕುಂಕುಮ, ಬಳೆ ನೀಡಿ ಸಿಹಿ ಊಟ ಬಡಿಸಲಾಗುತ್ತದೆ. 9ನೇ ದಿನಕ್ಕೆ ಬನ್ನಿ ಸೊಪ್ಪಿನಿಂದ ಪೂಜೆ ಸಲ್ಲಿಸಿ ನವರಾತ್ರಿಯ ಗೊಂಬೆ ಪೂಜೆ ಮುಕ್ತಾಯಗೊಳಿಸುತ್ತಾರೆ.
ಪ್ರತಿವರ್ಷ ಸಂಪ್ರದಾಯದಂತೆ ಮನೆಯಲ್ಲಿ ಗೊಂಬೆಗಳನ್ನು ಕೂರಿಸಿ ಪೂಜಿಸಿಕೊಂಡು ಬರುತ್ತಿದ್ದೇವೆ. ಗೊಂಬೆಗಳನ್ನು ಪೂಜಿಸುವುದೆಂದರೆ ಸಂಭ್ರಮ ಇರುತ್ತದೆಬಾಲು, ಗೊಂಬೆ ಕೂರಿಸಿದವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.