ಸಂತೇಮರಹಳ್ಳಿ: ಮಹಾನಮಿ ಆಯುಧ ಪೂಜೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಸತತ ಸುರಿಯುತ್ತಿರುವ ಮಳೆಯಿಂದ ಸೇವಂತಿ ಗಿಡಗಳು ನೆಲ ಕಚ್ಚಿದ್ದು, ಹೂವುಗಳು ಹಾಳಾಗಿ ನಷ್ಟ ಅನುಭವಿಸುವಂತಾಗಿದೆ.
ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ವಾರದಿಂದ ಬೀಳುತ್ತಿರುವ ಮಳೆಯ ಹೊಡೆತಕ್ಕೆ ರೈತರು ಬೆಳೆದಿರುವ ಹತ್ತಾರು ಎಕರೆ ಸೇವಂತಿ ಹಾಗೂ ಚೆಂಡು ಹೂವು ಫಸಲು ಕೊಳೆಯಲು ಆರಂಭಿಸಿವೆ. ಹಬ್ಬಗಳ ಸಮಯದಲ್ಲಿ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸಂತೇಮರಹಳ್ಳಿ, ಮಂಗಲ, ಯಡಿಯೂರು, ಹುಲ್ಲೇಪುರ, ಕೆಂಪನಪುರ ಹಾಗೂ ಸಿಂಗನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹೂವು ಬೆಳೆ ಮಳೆಗೆ ನಾಶವಾಗಿವೆ. ನವರಾತ್ರಿಯಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ, ದರವು ಹೆಚ್ಚಾಗಿದೆ. ರೈತರ ಲಾಭದ ನಿರೀಕ್ಷೆ ಮಳೆಯಿಂದ ಹುಸಿಯಾಗಿದೆ.
ಕೆಜಿಗೆ ₹150 ದರವಿದ್ದ ಸೇವಂತಿ ಹಬ್ಬದ ಸಮಯವಾಗಿರುವುದರಿಂದ 1 ಕೆ.ಜಿ.ಗೆ ₹ 250 ರಿಂದ ₹ 280 ವರೆಗೆ ಮಾರಾಟವಾಗುತ್ತಿದೆ. ₹ 20 ರಿಂದ ₹30 ದರವಿದ್ದ ಚೆಂಡು ಹೂವು ₹ 60 ರಿಂದ ₹ 80 ವರೆಗೆ ಮಾರಾಟವಾಗುತ್ತಿದೆ.
ನರ್ಸರಿಯಲ್ಲಿ ಗಿಡಗಳನ್ನು ತಂದು ನಾಟಿ ಮಾಡಿದ್ದು, ಒಂದೂವರೆ ಎಕರೆಗೆ₹ 50 ಸಾವಿರಕ್ಕೂ ಹೆಚ್ಚು ಖರ್ಚಾಗಿದೆ. ಮಳೆ ಇಲ್ಲದಿದ್ದರೆ 5 ಟನ್ ವರೆಗೆ ಹೂವು ಸಿಗುತಿತ್ತು. ₹ 1.5 ಲಕ್ಷದವರೆಗೆ ಲಾಭ ದೊರಕುತಿತ್ತು. ಮಳೆಯಿಂದ ಹೂವಿನ ಗಿಡಗಳು ನೆಲಕ್ಕೆ ಬಿದ್ದು , ಕಟಾವು ಮಾಡಲು ಸಾಧ್ಯವಿಲ್ಲ, ಕೊಳೆಯುತ್ತಿವೆ ಎಂದು ಮಂಗಲ ಗ್ರಾಮದ ಅನಿಲ್ ತಿಳಿಸಿದರು.
ಮಳೆಗೆ ಹೂವುಗಳು ನಷ್ಟವಾಗುವುದರ ಜತೆಗೆ ಗಿಡಗಳು ಬಾಗಿ ನೆಲ ಕಚ್ಚಿವೆ. ಇದರಿಂದ ಮುಂದಿನ ಬೀಡು ಬರಲಾರದು ಎಂದು ರೈತ ಮಹದೇವಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.