ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ತಾಲ್ಲೂಕಿನ ಚಿಕ್ಕತುಪ್ಪೂರಿನ ಯುವಕ ಮನೋಜ್ ಕುಮಾರ್ ಹತ್ಯೆ ಪ್ರಕರಣದ ಸಂಬಂಧ ಎ1 ಆರೋಪಿಯನ್ನು ಕೂಡಲೇ ಬಂಧಿಸುವಂತೆ ಎಸ್‌ಸಿ, ಎಸ್‌ಟಿ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.
ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ. ಕೆಲ ಪ್ರಕರಣಗಳ ತನಿಖೆ ದಿಕ್ಕು ತಪ್ಪಿಸಲಾಗುತ್ತಿದೆ. ಆದ್ದರಿಂದ ಮುಂದಿನ ಸಭೆಯನ್ನು ಡಿವೈಎಸ್ಪಿ ನೇತೃತ್ವದಲ್ಲಿ ಕರೆಯಬೇಕು ಎಂದು ಸಮುದಾಯದ ಮುಖಂಡರು ಮನವಿ ಮಾಡಿದರು.
ಪುರಸಭೆ ಸದಸ್ಯ ರಾಜಗೋಪಾಲ್ ಮಾತನಾಡಿ, ಚಿಕ್ಕತುಪ್ಪೂರು ಘಟನೆ ನಡೆದು ತಿಂಗಳು ಕಳೆದರೂ ಆರೋಪಿ ಬಂಧಿಸದಿರಲು ಕಾರಣವೇನು. ಅಧಿಕಾರಿಗಳು ಒತ್ತಡಕ್ಕೆ ಮಣಿದಿದ್ದು, ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಎಸ್‌ಸಿ, ಎಸ್‌ಟಿ ಸಭೆ ನಡೆಯುವ ಬಗ್ಗೆ ಠಾಣಾ ವ್ಯಾಪ್ತಿಯ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಕೇವಲ ಬೆರಳಣಿಕೆ ಮುಖಂಡರನ್ನು ಮಾತ್ರ ಕರೆಯಲಾಗಿದೆ ಏಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಇನ್‌ಸ್ಪೆಕ್ಟರ್ ಜಯಕುಮಾರ್, ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಡಿವೈಎಸ್ಪಿ ತನಿಖಾ ಅಧಿಕಾರಿಯಾಗಿರುವುದರಿಂದ ಅವರ ಸೂಚನೆ ಮೇರೆಗೆ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿಂದನಾಯಕ ಮಾತನಾಡಿ, ಪಟ್ಟಣದಲ್ಲಿ ನಡೆದ ಶಿವು ಕೊಲೆ ಸಂಬಂಧ ಕೇವಲ ಇಬ್ಬರನ್ನು ಬಂಧಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಬೇಕು. ಪ್ರಕರಣ ಒಂದೇ ಕಡೆ ವಾಲುವಂತೆ ಮಾಡದೆ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಲು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಜಯಕುಮಾರ್, ಪ್ರಕರಣದ ಸಂಬಂಧ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಡಿಎಸ್‍ಎಸ್ ತಾಲೂಕು ಅಧ್ಯಕ್ಷ ಭೀಮನಬೀಡು ಶಿವಮಲ್ಲು ಮಾತನಾಡಿ, ಠಾಣೆಗೆ ಬಂದವರ ಜೊತೆ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು. ಭೀಮನಬೀಡು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಗಮನಕ್ಕೆ ತಂದರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮಾಡ್ರಹಳ್ಳಿ ರಂಗಸ್ವಾಮಿ ಮಾತನಾಡಿ, ಪೊಲೀಸರು ವೈಫಲ್ಯದಿಂದ ಎಸ್‌ಸಿ, ಎಸ್‌ಟಿ ಸಮುದಾಯದವರ ಕೊಲೆ ನಡೆಯುತ್ತಿದೆ. ಚಿಕ್ಕತುಪ್ಪೂರು ಮನೋಜ್ ಕುಮಾರ್ ಹತ್ಯೆ ಪ್ರಕರಣದ ಆರೋಪಿ ಬಂಧಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಮುಖಂಡರ ಯಾವುದೇ ಪ್ರಶ್ನೆಗೆ ನಿರ್ದಿಷ್ಟ ಉತ್ತರವನ್ನು ಪೊಲೀಸರು ನೀಡುತ್ತಿಲ್ಲ. ಕೇವಲ ಸಮಜಾಯಿಸಿ ನೀಡುವ ಕೆಲಸ ಮಾತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಬೇರಂಬಾಡಿ ರಂಗಪ್ಪನಾಯಕ ಮಾತನಾಡಿ, ಪಟ್ಟಣದಲ್ಲಿ ಓವರ್ ಲೋಡ್ ಹಾಗೂ ಅಡ್ಡಾದಿಡ್ಡಿ ಸಂಚಾರದ ಟಿಪ್ಪರ್ ಲಾರಿಗಳಿಗೆ ಕಡಿವಾಣ ಹಾಕಬೇಕು ಎಂದರು.
ಕಿಲಗೆರೆ ಬಸವಣ್ಣ ಮಾತನಾಡಿ, ಠಾಣೆಯಲ್ಲಿ ಆತಂಕದ ವಾತಾವರಣವಿದ್ದು, ಸರಿಯಾಗಿ ನ್ಯಾಯ ಸಿಗುತ್ತಿಲ್ಲ. ನ್ಯಾಯಕ್ಕಾಗಿ ಜಿಲ್ಲೆ ಕೇಂದ್ರಗಳಿಗೆ ಅಲೆಯಬೇಕಾಗಿದೆ ಎಂದು ಆರೋಪಿಸಿದರು.
ಹುಲಸಗುಂದಿ ಮುತ್ತಣ್ಣ ಮಾತನಾಡಿ, ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯ ಹಂಗಳ ಹಾಗೂ ಬೆಂಡರವಾಡಿ ದಲಿತ ವ್ಯಕ್ತಿಗಳ ಕೊಲೆ ಸಂಬಂಧ ಆರೋಪಿಗಳು ಇನ್ನು ಸಿಕ್ಲಿಲ್ಲ. ಇದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.
ಸುರೇಶ್ ನಾಯಕ್ ಮಾತನಾಡಿ, ಎಲ್ಲಾ ಸರ್ಕಲ್ ನಲ್ಲಿ ಸಿಸಿಟಿವಿ ಕ್ಯಾಮೆರಾ ಅವಳವಡಿಕೆ ಮಾಡುತ್ತೇವೆ ಎಂದು ಹೇಳಿದ್ದೀರಿ. ಆದರೂ ಅಳವಡಿಸಿಲ್ಲ. ಇದರಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂದು ದೂರಿದರು.
10 ಲಕ್ಷ ವೆಚ್ಚದಲ್ಲಿ ಪಟ್ಟಣದಾದ್ಯಂತ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಟೆಂಡರ್ ಆಗಿದೆ. ಹಣ ಬಿಡುಗಡೆಯಾದ ಕೂಡಲೇ ಅಳವಡಿಕೆಗೆ ಕ್ರಮ ವಹಿಸಲಾಗುವುದು. ಜೊತೆಗೆ ಪ್ರತಿಯೊಂದು ಪ್ರಕರಣವನ್ನು ನಿಯಮಾನುಸರವೇ ತನಿಖೆ ನಡೆಸಲಾಗುವುದು ಎಂದು ಇನ್‌ಸ್ಪೆಕ್ಟರ್ ಜಯಕುಮಾರ್ ತಿಳಿಸಿದರು.
ಸಭೆಯಲ್ಲಿ ಎಸ್‌ಐ ಸಾಹೇಬ ಗೌಡ, ಪುರಸಭೆ ಸದಸ್ಯ ಎನ್.ಕುಮಾರ್, ನಾರಾಯಣಸ್ವಾಮಿ, ಮಂಗಲ ಉಮೇಶ್, ದೇವರಾಜು, ಶಂಕರ್, ಕಾರ್ ರಮೇಶ್, ಮುನೇಶ್, ರವಿ, ನಾರಾಯಣ, ನಿಟ್ರೆ ಮಹದೇವಯ್ಯ ಇದ್ದರು.
ಮದ್ಯ ಅಕ್ರಮ ಮಾರಾಟ: ಕಡಿವಾಣಕ್ಕೆ ಒತ್ತಾಯ ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಆಗ್ರಹ ನಿಯಮಾನುಸಾರ ಪ್ರಕರಣಗಳ ತನಿಖೆ: ಇನ್‌ಸ್ಪೆಕ್ಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.