
ಸಂತೇಮರಹಳ್ಳಿ: ಹೋಬಳಿ ವ್ಯಾಪ್ತಿಯ ತೆಳ್ಳನೂರು ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಾಗೂ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವ ಭೀತಿ ಎದುರಾಗಿದೆ.
ಶಾಲೆಯಲ್ಲಿ ಮೂಲಸೌಕರ್ಯ ಹಾಗೂ ಶಿಕ್ಷಕರ ಅಲಭ್ಯತೆಯಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಆತಂಕದಿಂದ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಚಿಂತನೆ ನಡೆಸುತ್ತಿದ್ದಾರೆ.
ಸರ್ಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಶಿಕ್ಷಣ ದೊರೆಯುತ್ತಿದ್ದು, 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಶಾಲೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದರು. ಕೊಠಡಿ ಹಾಗೂ ಶಿಕ್ಷಕರ ಕೊರತೆಯಿಂದ ಪ್ರತಿವರ್ಷ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಾ ಬಂದಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಶಾಲೆ ಮುಚ್ಚಬೇಕಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.
ಗ್ರಾಮದ ಶಾಲೆಯು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದರೂ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲದೆ ಕೇವಲ ಮೂವರು ಶಿಕ್ಷಕರು ಎಲ್ಲ ತರಗತಿಗಳಿಗೆ ಬೋಧನೆ ಮಾಡುತ್ತಿದ್ದಾರೆ.
ಒಂದೂವರೆ ವರ್ಷದ ಹಿಂದೆ ಶಾಲೆಯಲ್ಲಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಬದಲಾಗಿ ಶಾಲೆಗೆ ಹೊಸ ಶಿಕ್ಷಕರು ಬಂದಿಲ್ಲ. ಇರುವ ಮೂವರು ಶಿಕ್ಷಕರು ಎಲ್ಲ ವಿಷಯಗಳನ್ನು ಬೋಧನೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಲೆಗೆ ಮುಖ್ಯ ಶಿಕ್ಷಕರನ್ನೂ ನಿಯೋಜಿಸದೆ ಸಹ ಶಿಕ್ಷಕರೊಬ್ಬರಿಗೆ ಪ್ರಭಾರ ಮುಖ್ಯ ಶಿಕ್ಷಕರ ಜವಾಬ್ದಾರಿ ವಹಿಸಲಾಗಿದೆ.
ಶಾಲೆಗೆ ಕನಿಷ್ಠ ಇಬ್ಬರು ಶಿಕ್ಷಕರು ತುರ್ತು ಅವಶ್ಯಕತೆ ಇದೆ ಎಂದು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪೋಷಕರು ದೂರುತ್ತಾರೆ.
ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕೊಠಡಿ ಸೇರಿದಂತೆ 7 ಕೊಠಡಿಗಳಿದ್ದು, ಬಹುತೇಕ ಎಲ್ಲವೂ ಶಿಥಿಲಾವಸ್ಥೆ ತಲುಪಿವೆ. ಮುಖ್ಯ ಶಿಕ್ಷಕರ ಕೊಠಡಿ ಹೊರತುಪಡಿಸಿ 4 ಕೊಠಡಿಗಳಲ್ಲಿ ಮಾತ್ರ ತರಗತಿಗಳು ನಡೆಯುತ್ತಿದೆ. 1, 2 ಹಾಗೂ 3ನೇ ತರಗತಿಯ ಮಕ್ಕಳು ನಲಿ-ಕಲಿಯಲ್ಲಿ ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳಬೇಕಾಗಿದೆ.
ಉಳಿದ 3 ಕೊಠಡಿಗಳಲ್ಲಿ 4ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿದೆ. ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತಿದ್ದು, ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶಿಕ್ಷಕರು ಮಾಡಿದ ಪಾಠವನ್ನು ಮಕ್ಕಳು ಮನನ ಮಾಡಿಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದಾರೆ.
ಎರಡು ವರ್ಷಗಳಿಂದ ಶಾಲೆಯ 2 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಕುಸಿಯುವ ಭೀತಿ ಎದುರಾಗಿದೆ. ಮಕ್ಕಳು ಪಾಠ ಕೇಳುವಾಗಲೇ ಹಲವು ಬಾರಿ ವಿದ್ಯಾರ್ಥಿಗಳ ತಲೆಯ ಮೇಲೆ ಛಾವಣಿಯ ಗಾರೆ ತುಣುಕುಗಳು ಉದುರಿ ಬಿದ್ದಿವೆ. ಅದೃಷ್ಟವಶಾತ್ ಮಕ್ಕಳಿಗೆ ಗಂಭೀರ ಪೆಟ್ಟಾಗಿಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎರಡು ಕೊಠಡಿಗಳಿಗೆ ಬೀಗ ಹಾಕಲಾಗಿದೆ.
ಶಿಥಿಲಾವಸ್ಥೆ ತಲುಪಿರುವ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರುತ್ತವೆ. ಗೋಡೆಗಳ ಮೂಲಕ ಮಳೆ ನೀರು ಇಳಿದು ಪಾಠ ಕೇಳಲು ತೊಂದರೆ ಉಂಟಾಗುತ್ತಿದೆ. ಕೊಠಡಿಗಳು ನೆಲಕ್ಕುರುಳಿ ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಕೊಠಡಿ ನಿರ್ಮಾಣ ಮಾಡಬೇಕು. ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿ ಬೋಧನೆಗೆ ಅವಕಾಶ ಮಾಡಿಕೊಡಬೇಕು ಎಂದು ಪೋಷಕರು ಒತ್ತಾಯಿಸುತ್ತಾರೆ.
‘ಸಮಸ್ಯೆಗೆ ತುರ್ತು ಪರಿಹಾರ ನೀಡಿ’
‘ಶಿಥಿಲಾವಸ್ಥೆಗೊಂಡಿರುವ ಕೊಠಡಿಗಳನ್ನು ದುರಸ್ತಿಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಹಾಗೂ ಶಿಕ್ಷಣ ಇಲಾಖೆ ಮನವಿ ಮಾಡಿದ್ದರೂ ಸ್ಪಂದನೆ ದೊರೆತಿಲ್ಲ. ಶಾಲೆಯಲ್ಲಿ ಶಿಕ್ಷಕರ ಹಾಗೂ ಕೊಠಡಿಗಳ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಪೋಷಕರೆಲ್ಲರೂ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಶಾಲೆಗೆ ಅಗತ್ಯ ಶಿಕ್ಷಕರನ್ನು ನಿಯೋಜಿಸಬೇಕು ಶಾಲಾ ಕೊಠಡಿ ದುರಸ್ತಿಗೊಳಿಸಬೇಕು’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾದಪ್ಪ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.