ADVERTISEMENT

ಚಾಮರಾಜನಗರ ಆಮ್ಲಜನಕ ದುರಂತ: ಸರ್ಕಾರಿ ಪ್ರಾಯೋಜಿತ ಕೊಲೆ– ಎಸ್‌ಡಿಪಿಐ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 12:34 IST
Last Updated 11 ಜೂನ್ 2021, 12:34 IST
ಅಬ್ದುಲ್‌ ಮಜೀದ್‌
ಅಬ್ದುಲ್‌ ಮಜೀದ್‌   

ಚಾಮರಾಜನಗರ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರಂದು ರಾತ್ರಿ ನಡೆದಿರುವುದು ಸರ್ಕಾರಿ ಪ್ರಾಯೋಜಿತ ಕೊಲೆ. ಆಮ್ಲಜನಕ ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಬೇಕು’ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (ಎಸ್‌ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌ ಅವರು ಶುಕ್ರವಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಘಟನೆ ನಡೆದು 40 ದಿನಗಳು ಕಳೆದರೂ ಜಿಲ್ಲೆಯ ಜನರು ಸುಮ್ಮನಿದ್ದಾರೆ. ಯಾರೂ ಘಟನೆಯನ್ನು ಖಂಡಿಸಿ, ಸಂತ್ರಸ್ತರ ಪರವಾಗಿ ಮಾತನಾಡುತ್ತಿಲ್ಲ. ಉಸ್ತುವಾರಿ ಸಚಿವರು ಸುಭಗರ ರೀತಿಯಲ್ಲಿ ಪೋಸ್‌ ಕೊಡುತ್ತಿದ್ದಾರೆ. ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡದೆ, ಶಿಕ್ಷಣ ಸಚಿವರಾಗಿ ಅವರು ಮಕ್ಕಳಿಗೆ ಯಾವ ಸಂದೇಶ ರವಾನಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಈ ಘಟನೆಗೆ ಜಿಲ್ಲಾಡಳಿತ, ಜಿಲ್ಲಾಧಿಕಾರಿ, ವೈದ್ಯಕೀಯ ಕಾಲೇಜಿನ ಡೀನ್‌, ಕೋವಿಡ್‌ ಉಸ್ತುವಾರಿಗಳು ಹಾಗೂ ಔಷಧ ನಿಯಂತ್ರಕರು ನೇರ ಹೊಣೆ. ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ವಿರೋಧ ಪಕ್ಷ ಕಾಂಗ್ರೆಸ್‌ ಸುಮ್ಮನಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಒಂದು ದಿನ ಬಂದು ಪತ್ರಿಕಾಗೋಷ್ಠಿ ನಡೆಸಿದ್ದು ಬಿಟ್ಟರೆ ಬೇರೆ ಏನು ಮಾಡಿದ್ದಾರೆ? ಮಾಜಿ ಸಂಸದ ಧ್ರುವನಾರಾಯಣ ಎಲ್ಲಿದ್ದಾರೆ? ಈ ಪ್ರಕರಣದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಹೈಕೋರ್ಟ್‌ ನೇಮಿಸಿರುವ ತನಿಖಾ ಸಮಿತಿಯು ಮೇ 2ರ ರಾತ್ರಿ ಮೇ 3ರ ಮುಂಜಾನೆ 37 ಜನರು ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ನಂತರ ಮೇ 4ರಿಂದ 10ರವರೆಗೆ 62 ಜನರು ಮೃತಪಟ್ಟಿದ್ದಾರೆ. ಈ ಪೈಕಿ 36 ಜನರು ದುರಂತ ನಡೆದ ಮೇ 2ರಂದು ದಾಖಲಾಗಿದ್ದರು. ಇವರೆಲ್ಲೂ ಆಮ್ಲಜನಕ ಪಡೆಯುತ್ತಿದ್ದರು. ಹಾಗಾಗಿ, ಒಟ್ಟು 73 ಜನರು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಅಧಿಕಾರಿಗಳು ದಾಖಲೆಗಳನ್ನು ತಿದ್ದಿದ್ದಾರೆ ಎಂಬ ಅಂಶವನ್ನೂ ತನಿಖಾ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 73 ಕುಟುಂಬಗಳಿಗೂ ಸರ್ಕಾರ ತಲಾ ₹50 ಲಕ್ಷ ಪರಿಹಾರ ಕೊಡಬೇಕು’ ಎಂದು ಅಬ್ದುಲ್‌ ಮಜೀದ್‌ ಒತ್ತಾಯಿಸಿದರು.

‘ಅದೇ ದಿನ ರಾತ್ರಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರೂ, ಪರಿಹಾರ ನೀಡಿದವರ ಪಟ್ಟಿಯಲ್ಲಿ ಕೆಲವರನ್ನು ಸೇರಿಸಲಾಗಿಲ್ಲ. ಒಂದು ಕುಟುಂಬಕ್ಕೆ ರಾತ್ರಿ ಒಂದು ಗಂಟೆಗೇ ಶವವನ್ನು ಕೊಟ್ಟಿದ್ದಾರೆ. ಕೋವಿಡ್‌ ಶಿಷ್ಟಾಚಾರದ ಪ್ರಕಾರ ರಾತ್ರಿ ಕುಟುಂಬದವರಿಗೆ ಶವ ಕೊಡುವಂತಿಲ್ಲ’ ಎಂದರು.

‘ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ’

‘ಪಕ್ಷವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿರಂತರ ಹೋರಾಟಕ್ಕೆ ನಿರ್ಧರಿಸಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಪಕ್ಷ ಕೊಂಡೊಯ್ಯಲಿದೆ. ಘಟನೆಯ ಸಂತ್ರಸ್ತ ಕುಟುಂಬಗಳಿಗೆ ಕಾನೂನು ಸೇರಿದಂತೆ ಎಲ್ಲ ನೆರವನ್ನು ಪಕ್ಷ ನೀಡಲಿದೆ. ಕೋವಿಡ್‌ ಲಾಕ್‌ಡೌನ್‌ ಮುಗಿದ ನಂತರ ಎಲ್ಲ ಸಂತ್ರಸ್ತ ಕುಟುಂಬಗಳ ಸದಸ್ಯರನ್ನು ಬೆಂಗಳೂರಿಗೆ ಕರೆದೊಯ್ದು ರಾಜಭವನ ಚಲೋ ಹಮ್ಮಿಕೊಳ್ಳಲಾಗುವುದು’ ಎಂದು ಅಬ್ದುಲ್‌ ಮಜೀದ್‌ ಅವರು ಹೇಳಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್‌ ಅಹಮದ್‌ ಅವರು ಮಾತನಾಡಿ, ‘ಮೃತಪಟ್ಟಿರುವ 24 ಮಂದಿಯ ಪೈಕಿ 23 ಜನರ ಮನೆಗಳಿಗೆ ಹೋಗಿದ್ದೇವೆ. ಮೃತಪಟ್ಟವರೆಲ್ಲರೂ ಆ ಕುಟುಂಬಗಳ ಆಧಾರಸ್ತಂಭಗಳಾಗಿದ್ದರು. ಈ ಕುಟುಂಬಗಳ ಸ್ಥಿತಿ ಶೋಚನೀಯವಾಗಿದೆ. ಅವರಿಗೆ ನ್ಯಾಯ ದೊರಕಿಸಿಕೊಡಲು ಎಸ್‌ಡಿಪಿಐ ಹೋರಾಡಲಿದೆ’ ಎಂದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಕಲೀಲ್‌ ಉಲ್ಲಾ, ಮೇ 2ರ ಘಟನೆಯಲ್ಲಿ ಪತಿಯನ್ನು ಕಳೆದು ಕೊಂಡ ಬಿಸಲವಾಡಿಯ ಜ್ಯೋತಿ ಹಾಗೂ ಮುಡಿಗುಂಡದ ಸಿದ್ದರಾಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.