ADVERTISEMENT

ಅಸ್ಸಾಂ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ: ಎಸ್‌ಡಿಪಿಐ ಖಂಡನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 13:10 IST
Last Updated 25 ಸೆಪ್ಟೆಂಬರ್ 2021, 13:10 IST
ಅಸ್ಸಾಂನ ಡರಾಂಗ್‌ ಜಿಲ್ಲೆಯಲ್ಲಿ ಒಕ್ಕಲೆಬ್ಬಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ಎಸ್‌ಡಿಪಿಐನ ಜಿಲ್ಲಾ ಘಟಕದ ಪ‌ದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು
ಅಸ್ಸಾಂನ ಡರಾಂಗ್‌ ಜಿಲ್ಲೆಯಲ್ಲಿ ಒಕ್ಕಲೆಬ್ಬಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ಎಸ್‌ಡಿಪಿಐನ ಜಿಲ್ಲಾ ಘಟಕದ ಪ‌ದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಅಸ್ಸಾಂನ ಡರಾಂಗ್‌ ಜಿಲ್ಲೆಯಲ್ಲಿ ಒಕ್ಕಲೆಬ್ಬಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ಎಸ್‌ಡಿಪಿಐನ ಜಿಲ್ಲಾ ಘಟಕದ ಪ‌ದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಅಸ್ಸಾಂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಡರಾಂಗ್‌ ಜಿಲ್ಲೆಯ ಧಾಲ್ಪುರ ಪ್ರದೇಶದಲ್ಲಿ 800 ಕುಟುಂಬಗಳನ್ನು ಸರ್ಕಾರ ಒಕ್ಕಲೆಬ್ಬಿಸುತ್ತಿದ್ದು, ಪುನರ್ವಸತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಗುಂಡಿಕ್ಕಿ ಕೊಂದಿರುವುದು ಅಮಾನವೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ. ಶತ ಶತಮಾನಗಳಿಂದ ಜೀವಿಸಿಕೊಂಡು ಬರುತ್ತಿರುವ ಜನರನ್ನು ಬಾಂಗ್ಲಾದ ನುಸುಳುಕೋರರು ಎಂದು ಆಪಾದಿಸಿ, ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಒಕ್ಕಲೆಬ್ಬಿಸಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ, ಪುನರ್ವಸತಿಗೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಜೀವಿಸುವ ಹಕ್ಕಿಗಾಗಿ ಪ್ರತಿಭಟನೆ ನಡೆಸಿದ ಬಡವರ ಮೇಲೆ ಗುಂಡಿಕ್ಕಿರುವುದು ಅಮಾನವೀಯವಾದರೆ, ಅದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರ ನಡೆ ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗುಂಡಿನ ದಾಳಿಯಲ್ಲಿ ಮೃತಪಟ್ಟ ಪ್ರತಿಭಟನಕಾರನ ಮೃತದೇಹದ ಮೇಲೆ ಛಾಯಾಗ್ರಾಹಕನೊಬ್ಬ ಜಿಗಿದು ಆಕ್ರೋಶ ಭರಿತವಾಗಿ ಹಲ್ಲೆ ನಡೆಸಿರುವ ಮನೋಸ್ಥಿತಿ ಮುಸ್ಲಿಮರ ವಿರುದ್ಧ ಈ ದೇಶದಲ್ಲಿ ಫ್ಯಾಸಿಸ್ಟರು ಸಾಮಾನ್ಯ ಜನರ ಮನಸ್ಸಿನಲ್ಲಿ ತುಂಬಿರುವ ವಿಷಬೀಜ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಬಯಲುಗೊಳಿಸಿದೆ’ ಎಂದು ಪ್ರತಿಭಟಕಾರರು ಹೇಳಿದರು.

ಅಸ್ಸಾಂ ಸರ್ಕಾರ ಸಂತ್ರಸ್ತರ ಕುಟುಂಬಗಳಿಗೆ ನೆಲೆ ಕಲ್ಪಿಸಿಕೊಡಬೇಕು. ಘಟನೆಯಿಂದ ಉಂಟಾದ ನಷ್ಟ ಪರಿಹಾರವನ್ನು ಭರಿಸಿಕೊಡಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಉಪಾಧ್ಯಕ್ಷ ಸೈಯದ್‌ ಆರೀಫ್‌, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್‌, ಕಾರ್ಯದರ್ಶಿ ಜಬಿನೂರ್‌, ಖಜಾಂಚಿ ಸೈಯದ್‌ ಇರ್ಫಾನ್‌, ಜಿಲ್ಲಾ ಸಮಿತಿ ಸದಸ್ಯರಾದ ಸಿ.ಕೆ.ನಯಾಜ್‌ ಉಲ್ಲಾ, ರಫೀಕ್‌ ಉಲ್ಲಾ ಖಾನ್‌, ಪಿಎಫ್‌ಐ ಅಧ್ಯಕ್ಷ ಕಫೀಲ್‌ ಅಹಮದ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.