ADVERTISEMENT

ಜಿಲ್ಲೆಯಾದ್ಯಂತ ಶಂಕರ ಜಯಂತಿ ಆಚರಣೆ

ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:17 IST
Last Updated 6 ಮೇ 2022, 16:17 IST
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರಿನಲ್ಲಿರುವ ಶಂಕರ ಮಠದಲ್ಲಿ ಶುಕ್ರವಾರ ಶಂಕರ ಪಂಚಮಿ ಅಂಗವಾಗಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರಿನಲ್ಲಿರುವ ಶಂಕರ ಮಠದಲ್ಲಿ ಶುಕ್ರವಾರ ಶಂಕರ ಪಂಚಮಿ ಅಂಗವಾಗಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು   

ಚಾಮರಾಜನಗರ‌: ಜಿಲ್ಲೆಯಾದ್ಯಂತ ಶುಕ್ರವಾರ ಶಂಕರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ತಾಲ್ಲೂಕಿನ ಹೆಬ್ಬಸೂರಿನಲ್ಲಿರುವ ಶೃ‌ಂಗೇರಿ ಪೀಠದ ಶಂಕರ ಮಠ, ನಗರದ ಅಗ್ರಹಾರ ಬೀದಿಯ ಪಟ್ಟಾಭಿ ರಾಮ ಮಂದಿರ ಸೇರಿದಂತೆ ವಿವಿಧ ಕಡೆಗಳಲ್ಲಿ, ಶೃಂಗೇರಿ ಸೇರಿದಂತೆ ಶಂಕರಾಚಾರ್ಯರು ಸ್ಥಾಪಿಸಿರುವ ಪೀಠಗಳಿಗೆ ನಡೆದುಕೊಳ್ಳುವವರು ತಮ್ಮ ಮನೆಗಳಲ್ಲಿ ಶಂಕಾರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಶಂಕರ ಜಯಂತಿಯನ್ನು ಆಚರಿಸಿದರು.

ನಗರದ ಅಗ್ರಹಾರ ಬೀದಿಯ ಪಟ್ಟಾಭಿ ರಾಮಮಂದಿರದಲ್ಲಿ ಅರ್ಚಕರಾದ ಪಾಲಾಕ್ಷ ಭಾರದ್ವಾಜ್ ನೇತೃತ್ವದಲ್ಲಿ ಶಂಕರ ಪಂಚಮಿ ಅಂಗವಾಗಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ರಾಮಮಂದಿರದ ಉಪಾಧ್ಯಕ್ಷ ಎಸ್.ಲಕ್ಷ್ಮೀನರಸಿಂಹ, ‘ಶಂಕರಾಚಾರ್ಯರು ದಕ್ಷಿಣಾಮೂರ್ತಿ ಅವತಾರ. 32 ವರ್ಷದಲ್ಲಿ ಅವರು ಇಡೀ ದೇಶವನ್ನೇ ಸುತ್ತಿದವರು. ಕರ್ನಾಟಕಕ್ಕೆ ನೀಡಿರುವ ಕೊಡುಗೆ ಅಪಾರ. ಶೃಂಗೇರಿಯನ್ನು ದಿವ್ಯ ಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ಅವರಿಗೆ ಸೇರುತ್ತದೆ’ ಎಂದರು.

ಡಾ.ವೆಂಕಟಸ್ವಾಮಿ, ರಾಮಮಂದಿರದ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಅರ್ಚಕ ಕಾರ್ತಿಕ ಭಾರದ್ವಾಜ್, ಸತೀಶ, ಅನಂತ, ಪ್ರಸಾದ್, ನಾಗೇಂದ್ರ ಪ್ರಸಾದ್, ಸತೀಶ್ ಕುಮಾರ್, ಶ್ರೀನಾಥ್ ಇದ್ದರು.

ಕುಂಭಾಭಿಷೇಕ ಮಹೋತ್ಸವಕ್ಕೆ ಚಾಲನೆ: ತಾಲ್ಲೂಕಿನ ಹೆಬ್ಬಸೂರು ಗ್ರಾಮದಲ್ಲಿರುವ ಶೃಂಗೇರಿ ಶಂಕರ ಮಠದಲ್ಲಿ ಗುರುವಾರ ಶಂಕರ ಜಯಂತಿ ಆಚರಿಸುವುದರ ಮೂಲಕ ಏಳು ದಿನ ನಡೆಯಲಿರುವ ಕುಂಭಾಭಿಷೇಕಕ್ಕೆ ಚಾಲನೆ ದೊರೆಯಿತು.

ಬೆಳಿಗ್ಗೆ ಶಂಕರಾಚಾರ್ಯರ ಪ್ರತಿಮೆಗೆ ಮಹಾಭಿಷೇಕ, ವಿಶೇಷ ಪೂಜೆ ನೆರವೇರಿತು.ನಂತರ ಶಂಕರಾಚಾರ್ಯರ ಉತ್ಸವ ಮೂರ್ತಿ ಮತ್ತು ಭಾವಚಿತ್ರವನ್ನು ಹೆಬ್ಬಸೂರಿನ ಅಗ್ರಹಾರದ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ ಮಹಾ ಮಂಗಳಾರತಿಯ ನಂತರ ಅನ್ನಸಂತರ್ಪಣೆ ನಡೆಯಿತು.

ಮಠದ ಧರ್ಮಾಧಿಕಾರಿ ಶ್ರೀಧರ್ ಪ್ರಸಾದ್, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜು, ತ್ಯಾಗರಾಜು, ವಿನಯ್, ಶೇಷಪ್ಪ ಭೋಜಪ್ಪ, ಕೃಷ್ಣಮೂರ್ತಿ, ಶಾರದಾ ಮಹಿಳಾ ಸಂಘದ ಅಧ್ಯಕ್ಷೆ ಸರಳಮ್ಮ, ಅಂಬಮ್ಮ, ನಾಗರತ್ನ, ಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.