ADVERTISEMENT

ಜಾತ್ರೋತ್ಸವಕ್ಕೆ ಸಿದ್ಧವಾಗುತ್ತಿದೆ ಶಂಕರೇಶ್ವರ ಬೆಟ್ಟ

ಮಹದೇವ್ ಹೆಗ್ಗವಾಡಿಪುರ
Published 10 ಸೆಪ್ಟೆಂಬರ್ 2023, 5:34 IST
Last Updated 10 ಸೆಪ್ಟೆಂಬರ್ 2023, 5:34 IST
ಶಂಕರೇಶ್ವರ ಬೆಟ್ಟದ ಪ್ರವೇಶದ್ವಾರ
ಶಂಕರೇಶ್ವರ ಬೆಟ್ಟದ ಪ್ರವೇಶದ್ವಾರ   

ಸಂತೇಮರಹಳ್ಳಿ: ಗೌರಿ ಗಣೇಶ ಹಬ್ಬ ಹತ್ತಿರದಲ್ಲಿದೆ. ಹಬ್ಬ ಕಳೆದು ೫ನೇ ದಿನಕ್ಕೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಶಂಕರೇಶ್ವರ ಬೆಟ್ಟ ಸಜ್ಜಾಗುತ್ತಿದೆ. ಸುತ್ತಲಿನ ಗ್ರಾಮಸ್ಥರು ಜಾತ್ರೆಗೆ ಸಿದ್ಧತೆ ಆರಂಭಿಸಿದ್ದಾರೆ.

ಯಡಿಯೂರು ಹಾಗೂ ಮಂಗಲ ಗ್ರಾಮಗಳ ನಡುವೆ ರಾಷ್ಟ್ರೀಯ ಹೆದ್ದಾರಿ ಮಗ್ಗುಲಲ್ಲಿ ಹಸಿರು ಹೊತ್ತ ಶಂಕರೇಶ್ವರ ಬೆಟ್ಟ ಕಾಣುತ್ತದೆ. ಪ್ರತಿವರ್ಷದ ಭಾದ್ರಪದ ಚೌತಿಯ 5ನೇ ದಿನಕ್ಕೆ ಈ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಸುತ್ತಮುತ್ತಲಿನ ಗ್ರಾಮಗಳಾದ ಮಂಗಲ, ಯಡಿಯೂರು, ಮಹಾಂತಾಳಪುರ, ಹುಲ್ಲೇಪುರ, ಮಂಗಲ ಹೊಸೂರು, ಕೆಂಪನಪುರ ಗ್ರಾಮಸ್ಥರು ಜಾತ್ರೆಯ ನೇತೃತ್ವ ವಹಿಸುವುದರ ಜತೆಗೆ ಹಬ್ಬವನ್ನು ಆಚರಿಸುತ್ತಾರೆ.

ಶಂಕರೇಶ್ವರ ಬೆಟ್ಟದ ಜಾತ್ರೆಗೆ ತನ್ನದೇ ಆದ ಇತಿಹಾಸ ಇದೆ. ಎರಡು ಶತಮಾನಗಳ ಹಿಂದೆ ಮಂಗಲದ ದೇವರ ಗುಡ್ಡಪ್ಪ ಎಂಬುವವರ ಹಸುಗಳು ಮೇವು ಅರಸಿಕೊಂಡು ಬೆಟ್ಟಕೆ ಹೋಗುತ್ತಿದ್ದವು. ಸಂಜೆ ಮನೆಗೆ ಬಂದಾಗ ಒಂದು ಹಸು ಮಾತ್ರ ಹಾಲು ಕರೆಯುತ್ತಿರಲಿಲ್ಲ. ಮನೆಯವರು ಅನುಮಾನಗೊಂಡು ಮೇವಿಗೆ ಹೊರಟ ಹಸುವನ್ನು ಹಿಂಬಾಲಿಸಿದರಂತೆ. ಬೆಟ್ಟದ ಮೇಲಿರುವ ಪೊದೆಯೊಳಗೆ ಹಸುವಿನ ಹಾಲು ಸೋರಿಕೆಯಾಗಿರುವುದು ಕಂಡು ಬಂದಿತ್ತು. ಪೊದೆಯನ್ನು ಕತ್ತರಿಸಿ ನೋಡಿದಾಗ ಅಲ್ಲಿ ಶಿವಲಿಂಗ ಇತ್ತು. ಹಸು ದಿನನಿತ್ಯ ಶಿವಲಿಂಗಕ್ಕೆ ಹಾಲು ಸುರಿಸುತ್ತಿದ್ದುದು ಗೊತ್ತಾಯಿತು. 

ADVERTISEMENT

ಹಸುವಿನ ಮನೆತನದವರು ಶಿವಲಿಂಗಕ್ಕೆ ಗುಡಿಗೋಪುರ ನಿರ್ಮಿಸಿದರು. ಶಂಕರದೇವರ ಹೆಸರಿನಲ್ಲಿ ಪೂಜೆ ಪುನಸ್ಕಾರ ಆರಂಭಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರು ಇಂದಿಗೂ ಮನೆ ದೇವರಂತೆ ಪೂಜಿಸಿಕೊಂಡು ಬರುತ್ತಿದ್ದಾರೆ.

ಈ ಬೆಟ್ಟದಲ್ಲಿ ಕಾಡು ಪ್ರಾಣಿಗಳು ವಾಸಿಸುವ ಗುಹೆಗಳಿವೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಕಡಿಮೆಯಾಗಿರುವುದರಿಂದ ಬೆಟ್ಟಕ್ಕೆ ಬಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ಗುಹೆಗಳಿಗೂ ಭೇಟಿ ನೀಡಿ ಹೋಗುತ್ತಾರೆ.

ಬೆಟ್ಟದ ತಪ್ಪಲಿನಲ್ಲಿ ಗಣಪತಿ, ವೀರಭದ್ರೇಶ್ವರ, ಬಸವೇಶ್ವರ ದೇವಾಲಯಗಳಿದ್ದು, ಜಾತ್ರೆಯ ದಿನದಂದು ಪೂಜೆಗಳು ನಡೆಯುತ್ತವೆ. ಜಾತ್ರೆಯ ದಿನದಂದು ಬೆಟ್ಟದ ಮೇಲಿರುವ ಶಿವಲಿಂಗಕ್ಕೆ ಸೂರ್ಯೋದಯ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುವುದು ವಿಶೇಷ. ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.

ಸುತ್ತಲಿನ ಗ್ರಾಮಸ್ಥರು ಜಾತ್ರೆಗೆ ಮಹೋತ್ಸವಕ್ಕೆ ಪ್ರತಿವರ್ಷವೂ ಸಹಕಾರ ನೀಡುತ್ತಿದ್ದಾರೆ. ಎಲ್ಲ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ತಲೆ ತಲಾಂತರಗಳಿಂದಲೂ ಪ್ರತಿವರ್ಷ ಪೂಜಾಕಾರ್ಯ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಅರ್ಚಕ ಯಡಿಯೂರು ಮರಿಸ್ವಾಮಿ ಹೇಳುತ್ತಾರೆ.

ಪ್ರವಾಸಿ ತಾಣ ಮಾಡಲು ಒತ್ತಾಯ

ಚಾಮರಾಜನಗರಕ್ಕೆ ಹೋಗುವ ರಾಷ್ಟ್ರೀಯ  ಹೆದ್ದಾರಿ ಮಗ್ಗುಲಲ್ಲಿ ಇರುವ ಈ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಸುತ್ತಲಿನ ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದಾರೆ. ‘ಬೆಟ್ಟಕ್ಕೆ ಮೇಲೆ ಹತ್ತುತ್ತಿದ್ದಂತೆ ಉಲ್ಲಾಸಭರಿತವಾಗುತ್ತದೆ. ಜತೆಗೆ ಸುಂದರ ವಾತಾವರಣವಿದೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಪ್ರವಾಸಿಗ ತೊರವಳ್ಳಿಯ ಚೇತನ್ ಹೇಳಿದರು.  ‘ಭಕ್ತಾದಿಗಳು ಹಾಗೂ ಪ್ರವಾಸಿಗರು ಪ್ರತಿ ಸೋಮವಾರ ಹಾಗೂ ಶುಕ್ರವಾರ ಹೆಚ್ಚಾಗಿ ಆಗಮಿಸುವುದರಿಂದ ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಯಿಂದ ಬೆಟ್ದ ತಪ್ಪಲಿನವರೆಗೆ ರಸ್ತೆ ಅಭಿವೃದ್ಧಿಪಡಿಸಬೇಕು. ಜತೆಗೆ ಬೆಟ್ಟದ ತಪ್ಪಲಿನಲ್ಲಿ ಕಾವೇರಿ ಕುಡಿಯುವ ನೀರು ಶುದ್ಧೀಕರಿಸುವ ಘಟಕವಿದೆ. ಇಲ್ಲಿಂದ ಬೆಟ್ಟಕ್ಕೆ ಹತ್ತುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಯಡಿಯೂರು ಗ್ರಾಮದ ನಂದ ಒತ್ತಾಯಿಸಿದರು. 

ಶಂಕರೇಶ್ವರ ದೇವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.