ADVERTISEMENT

ಗ್ರಾ.ಪಂ ಚುನಾವಣೆಗೆ ಚಾಮರಾಜನಗರದಲ್ಲಿ 6.96 ಲಕ್ಷ ಮತದಾರರು

ಆಗಸ್ಟ್‌ 31ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ, ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಸೂರ್ಯನಾರಾಯಣ ವಿ
Published 14 ಸೆಪ್ಟೆಂಬರ್ 2020, 19:30 IST
Last Updated 14 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಅವಧಿ ಮುಗಿದಿರುವ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಆಗಸ್ಟ್‌ 31ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ. ಅದರಂತೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 6.96 ಲಕ್ಷ ಮತದಾರರು ಇದ್ದಾರೆ.

ಗಡಿ ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳಿವೆ (ಚಾಮರಾಜನಗರ ತಾಲ್ಲೂಕಿನಲ್ಲಿ 43, ಗುಂಡ್ಲುಪೇಟೆಯಲ್ಲಿ 34, ಹನೂರಿನಲ್ಲಿ 25, ಕೊಳ್ಳೇಗಾಲದಲ್ಲಿ 16 ಮತ್ತು ಯಳಂದೂರು ತಾಲ್ಲೂಕಿನಲ್ಲಿ 12). ಈ ಪೈಕಿ129 ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಮುಕ್ತಾಯಗೊಂಡಿದೆ. ಹನೂರು ತಾಲ್ಲೂಕಿನ ಕುರಟ್ಟಿಹೊಸೂರು ಗ್ರಾಮ ಪಂಚಾಯಿತಿಯ ಅಧಿಕಾರ ಅವಧಿ 2021ರ ನವೆಂಬರ್‌ 1ರವರೆಗೂ ಇದೆ. ಹಾಗಾಗಿ, ಅಲ್ಲಿ ಚುನಾವಣೆ ನಡೆಯುವುದಿಲ್ಲ.

130 ಗ್ರಾಮ ಪಂಚಾಯಿತಿಗಳಲ್ಲಿ 2,171 ಸದಸ್ಯ ಸ್ಥಾನಗಳು ಇವೆ. ಈ ಪೈಕಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ 14 ಸ್ಥಾನಗಳಿದ್ದು, ಅವುಗಳನ್ನು ಬಿಟ್ಟು, 2,157 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 841 ಮತಗಟ್ಟೆಗಳನ್ನು ಗುರುತಿಸಲಾಗಿದೆ.

ADVERTISEMENT

ಮಹಿಳೆಯರು ಹೆಚ್ಚು: ಆಗಸ್ಟ್‌ 31ರಂದು ಘೋಷಣೆ ಮಾಡಿದ ಅಂತಿಮ ಮತದಾರರ ಪಟ್ಟಿಯ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ 6,96,418 ಲಕ್ಷ ಮತದಾರರಿದ್ದಾರೆ. ಈ ಪೈಕಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 3,47,201 ಪುರುಷ ಮತದಾರರಿದ್ದರೆ, 3,49,170 ಮಹಿಳೆಯರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. 47 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ. ಈ ವರ್ಷದ ಫೆಬ್ರುವರಿ 7ರಿಂದ ಆಗಸ್ಟ್‌ 31ರವರೆಗೆ ಹೊಸದಾಗಿ 2,421 ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಮೀಸಲಾತಿ ಪಟ್ಟಿ ಪ್ರಕಟ: ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಈಗಾಗಲೇ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ಘೋಷಿಸಬಹುದು. ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಯಬಹುದು ಎಂದು ಹೇಳಲಾಗುತ್ತಿದೆ.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಂತಿಮ ಮತದಾರರ ಪಟ್ಟಿಯನ್ನು ಪ‍್ರಕಟಿಸಲಾಗಿದೆ. ಒಂದು ಗ್ರಾಮ ಪಂಚಾಯಿತಿ ಬಿಟ್ಟು ಉಳಿದ ಕಡೆಗಳಲ್ಲಿ ಚುನಾವಣೆ ನಡೆಯಲಿದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೀಸಲಾ‌ತಿ ಪಟ್ಟಿ ಪ್ರಕಟಿಸಿ ರಾಜ್ಯ ಸರ್ಕಾರ ಗೆಜೆಟ್‌ ಅಧಿಸೂಚನೆಯನ್ನೂ ಹೊರಡಿಸಿದೆ. ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಬೇಕಾಗಿದೆ. ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆ’ ಎಂದು ಅವರು ಮಾಹಿತಿ ನೀಡಿದರು.

‘ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ತರಬೇತಿ ಸೇರಿದಂತೆ ಇನ್ನುಳಿದ ಕೆಲಸಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು’ ಎಂದು ಡಾ.ಎಂ.ಆರ್.ರವಿ ಅವರು ಮಾಹಿತಿ ನೀಡಿದರು.

ಗರಿಗೆದರಿದ ಚಟುವಟಿಕೆ

ಚುನಾವಣೆ ಶೀಘ್ರದಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಇತ್ತ ಗ್ರಾಮೀಣ ಭಾಗಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಳ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಗ್ರಾಮ ಪಂಚಾಯಿತಿ ಚುನಾವಣೆ ನೆರವಾಗುವುದರಿಂದ ರಾಜಕೀಯ ಪಕ್ಷಗಳು ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆ.

ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚು ಹೆಚ್ಚು ಗೆಲ್ಲಿಸುವ ಮೂಲಕ ಗ್ರಾಮ ಪಂಚಾಯಿತಿಯ ಆಡಳಿತವನ್ನು ಹಿಡಿಯಲು ಪಕ್ಷಗಳ ಮುಖಂಡರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ನ ರಾಜ್ಯ ಮಟ್ಟದ ಮುಖಂಡರು ಜಿಲ್ಲೆಗೆ ಬಂದಾಗಲೆಲ್ಲ, ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಸ್ಥಳೀಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸಲಹೆ ನೀಡುತ್ತಿದ್ದಾರೆ. ಮುಖಂಡರು, ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಟಿಕೆಟ್‌ಗಾಗಿ ಗ್ರಾಮೀಣ ಮಟ್ಟದಲ್ಲಿ ಲಾಬಿಯೂ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.