ADVERTISEMENT

ಹೊಸ ಓದುಗರನ್ನು ಸೃಷ್ಟಿಸಿದ ಭೈರಪ್ಪ: ಚಿಂತಕ ಸುರೇಶ್ ಎನ್.ಋಗ್ವೇದಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:28 IST
Last Updated 22 ಆಗಸ್ಟ್ 2025, 2:28 IST
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಸಾಹಿತ್ಯ ಕ್ಷೇತ್ರಕ್ಕೆ ಎಸ್‌.ಎಲ್.ಭೈರಪ್ಪನವರ ಕೊಡುಗೆ ಹಾಗೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಮಾತನಾಡಿದರು
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಸಾಹಿತ್ಯ ಕ್ಷೇತ್ರಕ್ಕೆ ಎಸ್‌.ಎಲ್.ಭೈರಪ್ಪನವರ ಕೊಡುಗೆ ಹಾಗೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಮಾತನಾಡಿದರು   

ಚಾಮರಾಜನಗರ: ಬ್ರಹ್ಮಾಂಡದ ದಿವ್ಯ ಚಿಂತನೆ, ತತ್ವಗಳನ್ನು ಅನುಭವ ಹಾಗೂ ಅಧ್ಯಯನದ ಮೂಲಕ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಿರುವ ಎಸ್.ಎಲ್.ಭೈರಪ್ಪ ಶ್ರೇಷ್ಠ ಸಾಹಿತಿಗಳಲ್ಲೊಬ್ಬರು ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲ್ಲೂ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಸಾಹಿತ್ಯ ಕ್ಷೇತ್ರಕ್ಕೆ  ಎಸ್‌.ಎಲ್.ಭೈರಪ್ಪನವರ ಕೊಡುಗೆ ಹಾಗೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಓದಿನತ್ತ ಆಸಕ್ತಿ ಕುಂದುತ್ತಿರುವ ಕಾಲಘಟ್ಟದಲ್ಲಿ ಓದುಗ ವರ್ಗವನ್ನು ಸೆಳೆಯುವಲ್ಲಿ ಸಾಹಿತ್ಯ ಕ್ಷೇತ್ರದತ್ತ ಆಕರ್ಷಿಸುವಲ್ಲಿ ಭೈರಪ್ಪ ಸಫಲರಾಗಿದ್ದಾರೆ.

ಅತ್ಯಂತ ಸೂಕ್ಷ್ಮ ಸಾಹಿತ್ಯದ ಬರಹಗಳಿಂದ ಓದುಗರನ್ನು ಆಕರ್ಷಿಸುತ್ತಿದ್ದು ಸಾಹಿತ್ಯದತ್ತ ಹೊಸ ಓದಗರನ್ನು ಸೆಳೆಯುತ್ತಿದ್ದಾರೆ. 95ರ ಇಳಿ ವಯಸ್ಸಿನಲ್ಲೂ ಅವರ ಸಾಹಿತ್ಯ ಕೃಷಿಗೆ ಅಡ್ಡಿಯಾಗಿಲ್ಲ. ಜೀವನಾನುಭವಗಳು, ಸಾಮಾಜಿಕ ಚಿಂತನೆ, ಸಂಶೋಧನೆಗಳ ಮೂಲಕ ಸಾಹಿತ್ಯ ರಚನೆಯಲ್ಲಿ ತೊಡಿಗಿಸಿಕೊಂಡಿರುವ ಭೈರಪ್ಪ ತತ್ವಶಾಸ್ತ್ರದ ಚಿಂತನೆಗಳನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ ಎಂದರು.

ADVERTISEMENT

ಭಾರತೀಯ ಸಂಸ್ಕೃತಿ, ಪರಂಪರೆ, ತತ್ವಶಾಸ್ತ್ರ, ತರ್ಕಶಾಸ್ತ್ರ, ಕಲೆ, ಸಾಹಿತ್ಯ, ಸಂಗೀತ, ಇತಿಹಾಸ, ಧರ್ಮ, ಸೃಜನಶೀಲತೆ, ಮನುಷ್ಯ ಸಂಬಂಧ, ರಾಜಕೀಯ ಚಿತ್ರಣ, ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಸಾಹಿತ್ಯದೊಳಗೆ ಅಡಕಗೊಳಿಸಿದ್ದಾರೆ. ಗ್ರಾಮೀಣ ಬದುಕಿನ ಚಿತ್ರಣ, ಜಾತಿ ವ್ಯವಸ್ಥೆಯ ಬಗ್ಗೆಯೂ ಅವರ ಬರಹಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ ಎಂದರು.

ಭೈರಪ್ಪನವರ ಕಾದಂಬರಿಗಳು ನಾಟಕಗಳಾಗಿ, ಚಲನಚಿತ್ರಗಳಾಗಿ, ಧಾರಾವಾಹಿಗಳಾಗಿ ಸಮಾಜದ ಮೇಲೆ ಪರಿಣಾಮ ಬೀರಿವೆ. ಸಾಹಿತ್ಯದ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಅವರು ಹುಟ್ಟಿದೂರಿನಲ್ಲಿ ಕೆರೆ ನಿರ್ಮಿಸಿದ್ದಾರೆ. ಅವರ ಸಾಹಿತ್ಯ ಸೇವೆಗೆ ಪದ್ಮಭೂಷಣ, ಪದ್ಮಶ್ರೀ, ಸಹಿತ ಹಲವು ಪ್ರಶಸ್ತಿಗಳು ಸಂದಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಚಳವಳಿಗಾರ ರಾಜಗೋಪಾಲ್ ‘ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಭೈರಪ್ಪ ಕನ್ನಡಿಗರ ಮನೆಗೆದ್ದ ಸಾಹಿತಿಯಾಗಿದ್ದಾರೆ. ಅವರ ಬರಹಗಳಲ್ಲಿರುವ ಸೂಕ್ಷ್ಯತೆ ಮನುಷ್ಯನಿಗೆ ಪೂರ್ಣತೆಯ ಅನುಭವ ನೀಡುತ್ತವೆ. ಹೊಸ ಲೋಕ್ಕೆ ಕೊಂಡೊಯ್ದ ಅನುಭವ ಉಂಟಾಗುತ್ತದೆ. ಜ್ಞಾನ, ಸಾಹಿತ್ಯ , ಚಿಂತನೆಗಳು ಸಾಹಿತ್ಯ ಲೋಕದ ಅವಲೋಕನವಾಗಿದೆ ಎಂದರು.

ಜಾನಪದ ಗಾಯಕ ಸುರೇಶ್‌ನಾಗ್ ಹರದನಹಳ್ಳಿ ಮಾತನಾಡಿ ಜನಪದ, ಹಳ್ಳಿಗಾಡಿನ ಸೊಗಡು, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಇತಿಹಾಸ, ಭಾವನೆ ಹಾಗೂ ಜೀವನ ವಿಧಾನಗಳನ್ನು ಸೊಗಸಾಗಿ ಸಾಹಿತ್ಯಕ್ಕಿಳಿಸಿರುವ ಭೈರಪ್ಪನವರ ಬರಹಗಳನ್ನು ಓದುಗರು ಆಸ್ವಾದಿಸಬೇಕು ಎಂದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಬೈರಪ್ಪನವರ ಜನ್ಮದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿ.ಕೆ.ಆರಾಧ್ಯ, ಶಿವಲಿಂಗ ಮೂರ್ತಿ, ಸರಸ್ವತಿ, ರವಿಚಂದ್ರ ಪ್ರಸಾದ್, ಮಹೇಶ್, ಕುಮಾರ್, ಅರವಿಂದ್, ಮೋಹನ್, ಮಾದೇಶ್ ಶೆಟ್ಟಿ, ಲೋಕೇಶ್ ನಾಯ್ಕ ,ಮೃತ್ಯುಂಜಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.