ADVERTISEMENT

ನರ ಸಂಬಂಧಿ ರೋಗದಿಂದ ಬಾಲಕನ ನರಳಾಟ

ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ವಿಳಂಬ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 2:39 IST
Last Updated 27 ಸೆಪ್ಟೆಂಬರ್ 2021, 2:39 IST
ಆಸ್ಪತ್ರೆಗೆ ದಾಖಲಾಗಿರುವ ಬಾಲಕ ಬಸವ
ಆಸ್ಪತ್ರೆಗೆ ದಾಖಲಾಗಿರುವ ಬಾಲಕ ಬಸವ   

ಗುಂಡ್ಲುಪೇಟೆ: ತಾಲ್ಲೂಕಿನ ಮಗುವಿನಹಳ್ಳಿ ಗ್ರಾಮದ ಸೋಲಿಗ ಸಮುದಾಯದ ಬಾಲಕನೊಬ್ಬ ನರವ್ಯೂಹಕ್ಕೆ ಸಂಬಂಧಿಸಿದ ರೋಗಕ್ಕೆ ತುತ್ತಾಗಿ ನರಳಾಡುತ್ತಿದ್ದು, ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನಿಗೆ ಇನ್ನೂ ಸರಿಯಾದ ಚಿಕಿತ್ಸೆ ಸಿಗದೇ ಇರುವುದರಿಂದ ಪೋಷಕರು ಪರದಾಡುತ್ತಿದ್ದಾರೆ.

ಮಗುವಿನಹಳ್ಳಿ ಗ್ರಾಮದ ಬೀರಯ್ಯ ಮತ್ತು ಕುನ್ನಮಾದಪ್ಪ ಎಂಬುವರ ಮಗ ಬಸವ (13) ಕಾಯಿಲೆಗೆ ತುತ್ತಾಗಿರುವ ಬಾಲಕ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಬಾಲಕ ಅಜ್ಜ–ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ. ಕೆಲವು ಸಮಯದ ಹಿಂದೆ ಅಜ್ಜಿ ಮೃತಪಟ್ಟಿದ್ದು, ಈಗ ಅಜ್ಜ ಬೊಮ್ಮಯ್ಯ ಅವರೇ ನೋಡಿಕೊಳ್ಳುತ್ತಿದ್ದಾರೆ. ಎರಡು ಮೂರು ತಿಂಗಳಿಂದ ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಬಸವ ಇದ್ದಾನೆ.

‘ಕುಳಿತುಕೊಂಡಿರುವ ಸಮಯದಲ್ಲಿ ಅಥವಾ ಒಂದೆರಡು ಹೆಜ್ಜೆ ನಡೆದಾಡಿದರೂ ಸಾಕು ಎತ್ತಿ ಬಿಸಾಕಿದಂತೆ ಆಗಿ ಬಿದ್ದು ಬಿಡುತ್ತಿದ್ದಾನೆ. ಇವನನ್ನು ನೋಡಿಕೊಳ್ಳಲು ದಿನಪೂರ್ತಿ ಅವನೊಂದಿಗೇ ಇರಬೇಕಿದೆ’ ಎಂದು ಬಸವನ ಅಜ್ಜ ಬೊಮ್ಮಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಐದು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಬಿದ್ದ ಬಸವನಿಗೆ ಚಿಕಿತ್ಸೆ ಕೊಡಿಸಲು ಪಟ್ಟಣದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಕೆರೆದೊಯ್ಯಲು ವೈದ್ಯರು ಸೂಚಿಸಿದ್ದರು.

‘ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ವಿಳಂಬವಾಗುತ್ತಿದೆ. ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಹೇಳುತ್ತಿಲ್ಲ. ಸಮಯ ದೂಡುತ್ತಿದ್ದಾರೆ. ಮುಂದೆ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ’ ಎಂದು ಬಸವನ ಸಂಬಂಧಿಕರು ದೂರಿದರು.

‘ಬಾಲಕನಿಗೆ ಚಿಕಿತ್ಸೆ ದೊರೆತು ನಡೆದಾಡಲು ಆಗುವಂತಾದರೆ ಸಾಕು. ಹೇಗೋ ಬದುಕಿಕೊಳ್ಳುತ್ತಾನೆ. ಇಲ್ಲದಿದ್ದರೆ ಅವನನ್ನು ನೋಡಿಕೊಳ್ಳುವ ವಯಸ್ಸಾದ ಅಜ್ಜನಿಗೆ ಹೆಚ್ಚು ಕಡಿಮೆ ಆದರೆ ಇವನನ್ನು ನೋಡಿಕೊಳ್ಳುವವರೇ ಇರುವುದಿಲ್ಲ. ಆದ್ದರಿಂದ ಬಾಲಕನಿಗೆ ಸೂಕ್ತ ಚಿಕಿತ್ಸೆ ದೊರೆತು ಗುಣಮುಖನಾಗಬೇಕು’ ಎಂದು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಸ್ವಾಮಿ ಅವರು ಹೇಳಿದರು.

ಇವನಿಗೆ ಸರಿಯಾದ ಚಿಕಿತ್ಸೆ ಸಿಕ್ಕಿ ಸರಿಯಾದರೆ ಸಾಕು ಇವನನ್ನು ಯಾರಾದರೂ ನೋಡಿಕೊಳ್ಳುತ್ತಾರೆ, ಇವನಿಗೆ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆಗೆ ದಾಖಲು ಮಾಡಿರುವ ಗ್ರಾಮ ಪಂಚಾಯತಿ ಸದಸ್ಯ ಚಿನ್ನಸ್ವಾಮಿ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲಸಿಕಾ ಅಧಿಕಾರಿ ಡಾ.ಅಂಕಪ್ಪ ಅವರು, ‘ತಾಲ್ಲೂಕಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮೈಸೂರಿಗೆ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದು ಹೆಚ್ಚಿನ ಚಿಕಿತ್ಸೆಗೆ ಅನುಕೂಲ ಮಾಡಲಿದ್ದಾರೆ’ ಎಂದು ತಿಳಿಸಿದರು.

–––

ಬಾಲಕನ ಅನಾರೋಗ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ. ತಕ್ಷಣವೇ ಸ್ಥಳೀಯ ವೈದ್ಯರಿಂದ ವಿವರಗಳನ್ನು ಪಡೆದು ಆತನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು
ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.