ADVERTISEMENT

ಕುಂಬಳ ಬೀಜೋತ್ಪನ್ನ ಕೃಷಿ ನಂಬಿದವರಿಗೆ ಕಣ್ಣೀರು

ಬಿತ್ತನೆ ಬೀಜ ಪೂರೈಸುವ ಕಂಪನಿಗಳ ನಂಬಿ ಕೈ ಸುಟ್ಟುಕೊಂಡರು

ನಾ.ಮಂಜುನಾಥ ಸ್ವಾಮಿ
Published 20 ಏಪ್ರಿಲ್ 2021, 17:22 IST
Last Updated 20 ಏಪ್ರಿಲ್ 2021, 17:22 IST
ಯಳಂದೂರು ತಾಲ್ಲೂಕಿನ ಕೊಮಾರನಪುರ ಕೃಷಿಕ ಪ್ರದೀಪ್ ಕುಮಾರ್ ಕುಂಬಳದ ಬೀಜೋತ್ಪನ್ನ ಕೃಷಿಯಲ್ಲಿ ತೊಡಗಿದ್ದಾರೆ
ಯಳಂದೂರು ತಾಲ್ಲೂಕಿನ ಕೊಮಾರನಪುರ ಕೃಷಿಕ ಪ್ರದೀಪ್ ಕುಮಾರ್ ಕುಂಬಳದ ಬೀಜೋತ್ಪನ್ನ ಕೃಷಿಯಲ್ಲಿ ತೊಡಗಿದ್ದಾರೆ   

ಯಳಂದೂರು:ತಾಲ್ಲೂಕಿನ ಕೆಲವು ರೈತರು ಬಿತ್ತನೆ ಬೀಜ ಪೂರೈಸುವ ಕಂಪನಿಗಳ ಮಾತು ಕೇಳಿ ಬೀಜೋತ್ಪತ್ತಿಕೃಷಿ ಕೈಗೊಂಡು ಹಾಕಿದ ಬಂಡವಾಳವನ್ನು ಕಳೆದುಕೊಂಡಿದ್ದಾರೆ. ಉತ್ಪಾದನೆಮಾಡಿದ ಬೀಜಗಳನ್ನು ಸಕಾಲದಲ್ಲಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ.

ತಾಲ್ಲೂಕಿನ ಕೆಲವು ರೈತರು ಕುಂಬಳ ಬಿತ್ತನೆ ಬೀಜ ಪೂರೈಸುವ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಬೀಜ ಕಂಪನಿಗಳು ಬೇರೆ ಜಿಲ್ಲೆಗಳಲ್ಲಿ ಬೀಜೋತ್ಪನ್ನ ಮಾಡುವವರನ್ನು ಪರಿಚಯ ಮಾಡಿಸಿ,'ನಾಟಿ ಬೀಜ'ಕ್ಕಾಗಿ ಕೃಷಿ ಮಾಡುವಂತೆ ಸಲಹೆ ನೀಡಿವೆ. ಹೆಚ್ಚಿನ ಲಾಭದ ಆಸೆ ಹಾಗೂಅಲ್ಫಾವಧಿಯಲ್ಲಿ ಲಾಭ ತರುವ ಬೇಸಾಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿವೆ. ಇದನ್ನುನಂಬಿದ ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಹೊಸ ತಳಿ ಬೀಜ ಸಂಗ್ರಹಿಸುವ ಪ್ರಯೋಗಕ್ಕೆಮುಂದಾಗಿದ್ದಾರೆ. ಆದರೆ, ನಿರೀಕ್ಷೆಯತೆ ಬೀಜ ಉತ್ಪಾದಿಸಲು ಆಗದೆ, ವೆಚ್ಚದಲ್ಲಿಅರ್ಧ ಭಾಗವನ್ನು ಕಳೆದುಕೊಂಡು ಕಂಗೆಟ್ಟಿದ್ದಾರೆ.

ADVERTISEMENT

ರೈತ ಕೊಮಾರನಪುರ ಪ್ರದೀಪ್ ಕುಮಾರ್ ಮಾತನಾಡಿ, 'ಉತ್ತಮ ತಳಿಯ ಬೀಜೋತ್ಪತ್ತಿ ಮಾಡಿದರೆ,ಕೆಜಿಗೆ ₹ 1,400 ಬೆಲೆ ಇದೆ. ಕಂಪನಿಗಳು ಉತ್ತಮ ಫಸಲು ಮತ್ತು ಉತ್ಪಾದಕತೆ ಹೆಚ್ಚಿಸುವಕುಂಬಳ ಬೀಜಗಳನ್ನು ಕೃಷಿಕರಿಗೆ ಮಾರಾಟ ಮಾಡುತ್ತವೆ. ಉತ್ತಮ ಬ್ರ್ಯಾಂಡ್ ಮತ್ತುಕಂಪನಿಯ ಮುದ್ರೆಯೂ ಇರುವುದರಿಂದ ಸಹಜವಾಗಿಯೇ ರೈತರೂ ಇಂತಹ ಬೀಜಗಳನ್ನು ಹೆಚ್ಚಿನ ದರನೀಡಿ ಖರೀದಿಸುತ್ತಾರೆ. ಆದರೆ, ಇಂತಹ ಬೀಜಗಳನ್ನು ಕಂಪನಿಗಳು ರೈತರಿಂದಲೇ ಬೆಳೆಸುತ್ತಾರೆ. ಇದಕ್ಕೆ ಬೇಕಾದ ತಾಂತ್ರಿಕ ನೆರವು ಮತ್ತು ಸಲಹೆಗಳನ್ನು ಕಂಪನಿಗಳುನೀಡುತ್ತವೆ. ಆದರೆ, ಉತ್ಪಾದನೆ ಕುಸಿದಾಗ ಬೇಸಾಯಗಾರರ ನೆರವಿಗೆ ಧಾವಿಸುವುದಿಲ್ಲ'ಎಂದು ದೂರಿದರು.

‘ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆದಿದ್ದ ಕುಂಬಳ ತಾಕುಗಳಿಗೆ ಇಲ್ಲಿನರೈತರನ್ನು ಕರೆಸಿ, ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯ ಮಾಡಿದ್ದರು. ಅಲ್ಲಿನಬೇಸಾಯಗಾರರು ಬೀಜೋತ್ಪತ್ತಿ ವಿಧಾನ ಹೆಚ್ಚಿನ ವರಮಾನ ತಂದುಕೊಡುವ ಬೆಳೆ ಎಂದುನಂಬಿಸಿದ್ದರು. ಮೂರು ತಿಂಗಳು ಗಿಡಕ್ಕೆ ರೋಗ ತಗಲದಂತೆ, ಎಲೆ ಮುದುಡದಂತೆ ಹಗಲು ರಾತ್ರಿನೋಡಿಕೊಂಡೆವು. 1 ಎಕರೆ 5 ಗುಂಟೆಯಲ್ಲಿ ಬೆಳೆಸಿದ ಕುಂಬಳದಿಂದ 22 ಕೆಜಿ ಬೀಜ ಮಾತ್ರಸಂಗ್ರಹವಾಗಿದೆ. ಕೆಜಿಗೆ ₹1,450 ಬೆಲೆ ಇದೆ. ಆದರೆ, ಖರ್ಚು ₹50 ಸಾವಿರ ದಾಟಿದೆ’ ಎಂದು ಅವರು ಮಾಹಿತಿ ನೀಡಿದರು.

‘ಜಿಲ್ಲೆಯ ಇತರ ಭಾಗಗಳಲ್ಲಿ ನಾಟಿ ಮಾಡಿದವರಿಗೂ ಇಳುವರಿ ಕುಸಿದಿದೆ. ಬೀಜಗಳನ್ನುಕಂಪನಿಗಳು ಬೇಗ ಕೊಂಡರೆ, ಬಂಡವಾಳದ ಅರ್ಧದಷ್ಟು ಹಣ ಕೈಸೇರುತ್ತದೆ. ಹಾಗಾಗಿ, ಬೀಜಪೂರೈಸುವ ಕಂಪನಿಗಳು ರೈತರ ಹಿತಕಾಯುವತ್ತ ಹೆಚ್ಚಿನ ಆಸ್ಥೆ ವಹಿಸಬೇಕು’ ಎಂದು ಅವರು ಆಗ್ರಹಿಸಿದರು.

ಬೀಜೋತ್ಪನ್ನ ಕೃಷಿ ಹೇಗೆ?

‘ಕುಂಬಳ ಹೂ ಬಿಟ್ಟಾಗ ಗಂಡು ಮತ್ತು ಹೆಣ್ಣು ಹೂಗಳನ್ನು ಗುರುತಿಸಿ ಪರಾಗಸ್ಪರ್ಶಮಾಡಬೇಕು. ನಂತರ ಹೂಗಳನ್ನು ಬಿಸಿಲಿಗೆ ಬಾಡದಂತೆ ಗಿಡದಲ್ಲಿ ಕವರ್ ಮಾಡಬೇಕು.ಕಟಾವಿನ ಹಂತದಲ್ಲಿ ಕಾಯಿಗಳನ್ನು ನೆರಳಿನಲ್ಲಿ ಒಣಗಿಸಬೇಕು. ಬೀಜ ಪ್ರತ್ಯೇಕಗೊಳಿಸಿದಮೇಲೆ ತಾಂತ್ರಿಕತೆಯ ಮೂಲಕ ಬೀಜ ಒಣಗಿಸಿ, ನಂತರ ಕಂಪನಿಗೆ ಮಾರಾಟ ಮಾಡಬೇಕು. ಬೇರೆಡೆಮಾರಾಟ ಮಾಡಲು ರೈತರಿಗೆ ಅವಕಾಶ ಇಲ್ಲ’ ಎನ್ನುತ್ತಾರೆ ರೈತರು.

‘ರೈತರೇ ಜವಾಬ್ದಾರರು’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್‌.ರಾಜು ಅವರು, ‘ಬೆರಳೆಣಿಕೆಯರೈತರಷ್ಟೇ ಬೀಜೋತ್ಪದನಾ ಕೃಷಿಯಲ್ಲಿ ತೊಡಗಿದ್ದಾರೆ. ರೈತರೇ ನೇರವಾಗಿ ಬೀಜ ಮಾರಾಟ ಮಾಡುವ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಲಾಭ ನಷ್ಟಗಳಿಗೆ ಬೇಸಾಯಗಾರರೇ ಜವಾಬ್ದಾರರಾಗುತ್ತದೆ. ಹೀಗಾಗಿ, ಇದು ಇಲಾಖೆಯ ಗಮನಕ್ಕೆ ಬರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.