
ಚಾಮರಾಜನಗರ: ‘ಜಿಲ್ಲೆಯ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆ ಮಾಡಲು ಹಾಗೂ ಶೇ 100 ಫಲಿತಾಂಶ ಗುರಿಯತ್ತ ಸಾಗಲು ಕೊನೆಯ 10 ವಾರಗಳು ನಿರ್ಣಾಯಕವಾಗಿದ್ದು ಶಿಕ್ಷಕರು ಶಕ್ತಿಮೀರಿ ಶ್ರಮ ಹಾಕಬೇಕು ಎಂದು ಡಿಡಿಪಿಐ ಚಂದ್ರ ಪಾಟೀಲ್ ತಿಳಿಸಿದರು.
ನಗರದ ಸೇವಾಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಪ್ರೌಢಶಾಲೆ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಎಸ್ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಂತರ ಮಕ್ಕಳ ಕಲಿಕಾ ವಿಧಾನ ಬದಲಾಗಿದೆ. ಡಿಜಿಟಲ್ ಬೋಧನೆಯತ್ತ ಮಕ್ಕಳ ಚಿತ್ತ ಹರಿದಿದೆ. ಹಾಗಾಗಿ ಶಿಕ್ಷಕರು ಫಲಿತಾಂಶ ಸುಧಾರಣೆಗೆ ಹೆಚ್ಚು ಶ್ರಮವಹಿಸಬೇಕು.
ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವಷ್ಟು ಸಮಯ ಕಲಿಕೆಗೆ ಒತ್ತು ನೀಡಬೇಕು. ಶಾಲೆ ಬಿಟ್ಟ ಬಳಿಕ ಮನೆಯಲ್ಲಿ ಮಗು ಏನನ್ನು ಓದಬೇಕು, ಹೇಗೆ ಅಧ್ಯಯನ ಮಾಡಬೇಕು ಎಂಬುದನ್ನು ಶಿಕ್ಷಕರು ಸ್ಪಷ್ಟವಾಗಿ ತಿಳಿ ಹೇಳಬೇಕು. ಪರಿಸ್ಥಿತಿಗೆ ಹೊಂದಿಕೊಂಡು ಕಲಿಸುವ ಪ್ರಕ್ರಿಯೆಗೆ ಶಿಕ್ಷಕರು ಒಗ್ಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೊಠಡಿಯಲ್ಲಿ ಬೋಧಿಸುವಾಗ ಎಲ್ಲ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ವಿದ್ಯಾರ್ಥಿಗಳು ಬೇರೆ ಬೇರೆ ಸನ್ನಿವೇಶದಲ್ಲಿ ವಿಭಿನ್ನವಾಗಿ ಕಲಿಯುತ್ತಾರೆ. ಸಹಪಾಠಿಗಳ ಮನಸ್ಥಿತಿ, ಪೋಷಕರ ಪರಿಸ್ಥಿತಿ, ಕಲಿಕಾ ವಾತಾವರಣಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಹಾಗಾಗಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆಗೆ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು.
ಕಲಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಮಕ್ಕಳನ್ನು ಗುರುತಿಸಿ ಕಲಿಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಶೇ 100 ಫಲಿತಾಂಶ ನೀಡುವ ನಿಟ್ಟಿನಲ್ಲಿ ಎಲ್ಲ ಶಾಲೆಗಳು ಯೋಜನೆ ರೂಪಿಸಿಕೊಂಡು ಪರಿಶ್ರಮ ಹಾಕಬೇಕು. ಪರೀಕ್ಷೆಗೆ ಬಾಕಿ ಉಳಿದಿರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಫಲಿತಾಂಶ ಸುಧಾರಣೆಗೆ ಹಾಗೂ ಹೆಚ್ಚು ಮಕ್ಕಳು ಉತ್ತೀರ್ಣರಾಗುವಂತೆ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ‘ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನು ಆಶ್ರಯಿಸಿದ್ದಾರೆ. ಮೊದಲ ತಲೆಮಾರಿನ ಶಿಕ್ಷಿತರನ್ನು ಸಮಾಜಕ್ಕೆ ಕೊಡುವ ಜವಾಬ್ಧಾರಿ ಶಿಕ್ಷಕರ ಮೇಲೆ ಇದ್ದು, ಮಾರ್ಚ್ 18ರ ತನಕ 3 ಸರಣಿ ಪರೀಕ್ಷೆಗಳು ಮತ್ತು ಕಿರು ಪರೀಕ್ಷೆಗಳನ್ನು ನಡೆಸಿ ಉತ್ತೀರ್ಣ ಪ್ರಮಾಣ ಹೆಚ್ಚಿಸಲು ಶ್ರಮಿಸಬೇಕು’ ಎಂದರು.
ಪ್ರಾಂಶುಪಾಲ ಲೋಕೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸಿದ್ದರಾಜು, ಕಿರಣ್ರಾಜ್, ಮಲ್ಲೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.