ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ 8 ಕೇಂದ್ರ, 1,615 ವಿದ್ಯಾರ್ಥಿಗಳು

ಸೋಮವಾರದಿಂದ 28ರವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

ಸೂರ್ಯನಾರಾಯಣ ವಿ
Published 19 ಸೆಪ್ಟೆಂಬರ್ 2020, 13:25 IST
Last Updated 19 ಸೆಪ್ಟೆಂಬರ್ 2020, 13:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೋಮವಾರದಿಂದ (ಸೆ.21) ಆರಂಭವಾಗಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಕೈಗೊಂಡಿದೆ.

ಪೂರಕ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಎಂಟು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1,615 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸೆ.21ರಂದು ಆರಂಭವಾಗಲಿರುವ ಪರೀಕ್ಷೆ, ಸೆ.28ಕ್ಕೆ ಮುಕ್ತಾಯಗೊಳ್ಳಲಿದೆ. ಕೋವಿಡ್‌–19 ಕಾರಣದಿಂದ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಚಾಮರಾಜನಗರದಲ್ಲಿ ಮೂರು (ಜೆಎಸ್‌ಎಸ್‌ ಬಾಲಕರ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸೇವಾ ಭಾರತಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ), ಗುಂಡ್ಲುಪೇಟೆಯಲ್ಲಿ ಎರಡು (ಡಿ.ಬಿ. ಸರ್ಕಾರಿ ಜ್ಯೂನಿಯರ್‌ ಕಾಲೇಜು, ಜವಾಹರ ಎಜುಕೇಷನ್‌ ಸೊಸೈಟಿಯ ಶ್ರೀಮತಿ ಕೆ.ಎಸ್.ನಾಗರತ್ನ ಬಾಲಕಿಯರ ಪ್ರೌಢ ಶಾಲೆ‌), ಕೊಳ್ಳೇಗಾಲ (ಸರ್ಕಾರಿ ಎಂ.ಜಿ.ಎಸ್‌.ವಿ ಜ್ಯೂನಿಯರ್‌ ಕಾಲೇಜು), ಹನೂರು (ಜಿ.ವಿ.ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜು), ಯಳಂದೂರುಗಳಲ್ಲಿ (ಕರ್ನಾಟಕ ಪಬ್ಲಿಕ್‌ ಶಾಲೆ) ತಲಾ ಒಂದು ಪರೀಕ್ಷಾ ಕೇಂದ್ರಗಳಿವೆ.

ADVERTISEMENT

ಚಾಮರಾಜನಗರದಲ್ಲಿ ಹೆಚ್ಚು ಮಕ್ಕಳು: 2019–20ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರು, ಪುನರಾವರ್ತಿತರು, ಖಾಸಗಿಯವರು ಸೇರಿದಂತೆ ಒಟ್ಟು 1,615 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1,048 ಹುಡುಗರು, 567 ಹುಡುಗಿಯರು.

ಐದು ತಾಲ್ಲೂಕುಗಳ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಹನೂರು ತಾಲ್ಲೂಕಿನಲ್ಲಿ ಕಡಿಮೆ ಮಕ್ಕಳು ಇದ್ದಾರೆ. ಚಾಮರಾಜನಗರದಲ್ಲಿ 774 ವಿದ್ಯಾರ್ಥಿಗಳು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 602 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಯಳಂದೂರಿನಲ್ಲಿ 107, ಕೊಳ್ಳೇಗಾಲ 84 ಮತ್ತು ಹನೂರಿನಲ್ಲಿ 48 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ.

ಮುಂಜಾಗ್ರತೆ ಪಾಲನೆ: ಕೋವಿಡ್‌–19 ತಡೆಯುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಸಂದರ್ಭದಲ್ಲಿ ಕೈಗೊಂಡಿದ್ದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪೂರಕ ಪರೀಕ್ಷೆ ಸಂದರ್ಭದಲ್ಲೂ ಕಟ್ಟು ನಿಟ್ಟಾಗಿ ಅನುಸರಿಸಲು ಇಲಾಖೆ ಸಿದ್ಧತೆ ನಡೆಸಿದೆ.

‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಕಡ್ಡಾಯವಾಗಿ ಒಳಪಡಿಸಲಾಗುವುದು. ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗುವುದು. ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳು ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜ್ವರ ಹಾಗೂ ಇನ್ನಿತರ ರೋಗ ಲಕ್ಷಣ ಹೊಂದಿರುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು.ಮೊದಲ ದಿನವಾದ ಬೆಳಿಗ್ಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ. 10.30ಕ್ಕೆ ಪರೀಕ್ಷೆ ಆರಂಭವಾಗಲಿದೆ. ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕಾಗಿರುವುದರಿಂದ ಒಂದು ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಗಳಿಗೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.