ADVERTISEMENT

ನವೋದ್ಯಮ ಆರಂಭಿಸಿ ಉದ್ಯೋಗ ಸೃಷ್ಟಿಸಿ

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊರೈರಾಜ್ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:08 IST
Last Updated 29 ಅಕ್ಟೋಬರ್ 2025, 3:08 IST
ಚಾಮರಾಜನಗರದ ಸರ್ಕಾರಿ ಎಂಜಿನಿಯರಿಂಗ್‍ ಕಾಲೇಜಿನಲ್ಲಿ ಮಂಗಳವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಇನ್‍ಕ್ಯೂಬೇಷನ್‍ ಕುರಿತ ಕಾರ್ಯಗಾರವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೈರಾಜ್ ಉದ್ಘಾಟಿಸಿದರು
ಚಾಮರಾಜನಗರದ ಸರ್ಕಾರಿ ಎಂಜಿನಿಯರಿಂಗ್‍ ಕಾಲೇಜಿನಲ್ಲಿ ಮಂಗಳವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಇನ್‍ಕ್ಯೂಬೇಷನ್‍ ಕುರಿತ ಕಾರ್ಯಗಾರವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೈರಾಜ್ ಉದ್ಘಾಟಿಸಿದರು   

ಚಾಮರಾಜನಗರ: ನವ ಉದ್ಯಮಗಳನ್ನು ಸ್ಥಾಪಿಸಲು ಹಾಗೂ ಉದ್ಯಮವನ್ನು ಅಭಿವೃದ್ಧಿಪಡಿಸಲು ಪೂರಕವಾದ ಕಾರ್ಯಾಗಾರಗಳ ಪ್ರಯೋಜನ ಪಡೆದು ಉದ್ಯಮ ಸ್ಥಾಪಿಸಿ, ಉದ್ಯೋಗ ಸೃಷ್ಟಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೈರಾಜ್ ಸಲಹೆ ನೀಡಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್‍ ಕಾಲೇಜಿನಲ್ಲಿ ಮಂಗಳವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ಇನ್‍ಕ್ಯೂಬೇಷನ್‍ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು , ಶೇ 75ಕ್ಕಿಂತ ಹೆಚ್ಚು ಮಂದಿ ಕೃಷಿಯನ್ನೇ ಮೂಲವೃತ್ತಿಯಾಗಿ ಅವಲಂಬಿಸಿದ್ದಾರೆ.

ದೇಶದ ಬೆಳವಣಿಗೆಯಲ್ಲಿ ಆಧುನಿಕ ಕೃಷಿ ಅತಿ ಮುಖ್ಯ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿ ಜೀವನದ ಬಳಿಕ ಉದ್ಯೋಗ ಅರಸಿ ಅಲೆಯುವ ಬದಲು  ಸ್ವಂತ ಉದ್ಯಮ ಸ್ಥಾಪಿಸುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸಬೇಕು. ಕೌಶಲಗಳಿಗೆ ತಕ್ಕಂತೆ ಹೊಸ ಉದ್ಯಮಗಳು ಆರಂಭವಾಗಬೇಕು. ಹೆಚ್ಚೆಚ್ಚು ಉದ್ಯಮಗಳ ಸ್ಥಾಪನೆಯಿಂದ ಜಿಡಿಪಿ ಬೆಳವಣಿಗೆ ಹೆಚ್ಚಾಗಿ ದೇಶ ಪ್ರಗತಿಯಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

‘ಉದ್ಯಮದಾತ ಮನಸ್ಸು ಮಾಡಿದರೆ ನೂರಾರು ಉದ್ಯೋಗಗಳನ್ನು ಸೃಷ್ಟಿಸಬಹುದು. ಈನಿಟ್ಟಿನಲ್ಲಿ ನವೋದ್ಯಮ ಆರಂಭಿಸುವ ಆಕಾಂಕ್ಷಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆರ್ಥಿಕ ನೆರವು ಸಿಗಲಿದೆ. ಇದಕ್ಕಾಗಿಯೇ ಸರ್ಕಾರದ ಹಲವು ಯೋಜನೆಗಳಿದ್ದು, ನವೋದ್ಯಮ ಸ್ಥಾಪಿಸುವವರಿಗೆ ಸಾಲ ಸೌಲಭ್ಯಗಳು ಕೂಡ ಸಿಗಲಿವೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೈರಾಜ್ ತಿಳಿಸಿದರು.

ಬೆಂಗಳೂರಿನ ಎಂ.ಎಸ್.ಎಂ.ಇ. ಸಂಸ್ಥೆಯ ಎ.ಡಿ.ಒ ಶಿವಕುಮಾರ್ ಮಾತನಾಡಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಂಸ್ಥೆಯು ಸ್ವ ಉದ್ಯೋಗ ಆರಂಭಿಸಲು ಆಸಕ್ತಿ ಇರುವ ಉದ್ಯೋಗಾಕಾಂಕ್ಷಿಗಳಿಗೆ ಹಣಕಾಸು ನೆರವು ನೀಡಲು ಸರ್ಕಾರದಿಂದ ಸ್ಥಾಪಿತವಾಗಿರುವ ಸಂಸ್ಥೆಯಾಗಿದೆ.

ರಾಷ್ಟ್ರೀಯ ಆರ್ಥಿಕತೆಯಲ್ಲಿ ಒಟ್ಟು ದೇಶಿಯ ಉತ್ಪನ್ನದ ಮೂರನೇ ಒಂದು ಭಾಗ ಎಂ.ಎಸ್.ಎಂ.ಇ. ಚಟುವಟಿಕೆಗಳಿಂದ ಬರಲಿದೆ. ಹೊಸ ಉದ್ಯಮ, ವ್ಯವಹಾರ, ತಾಂತ್ರಿಕ ಆಲೋಚನೆ, ಉತ್ಪಾದಿಸಿದ ಸರಕುಗಳ ಮಾರಾಟ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಎಂ.ಎಸ್.ಎಂ.ಇ ಸಹಾಯಕವಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಮಧು ಅಧ‍್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೆಲಸಕ್ಕಾಗಿ ಅಲೆಯುವ ಬದಲು ಸ್ವತಃ ಉದ್ಯಮ ಸ್ಥಾಪಿಸಿ ಉದ್ಯೋಗಗಳನ್ನು ಸೃಷ್ಟಿಸಬೇಕು.  ದೇಶದ ಬೆಳವಣಿಗೆಗೆ ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕ ವಿಜಯ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಸ್.ಎನ್. ದೇವೇಂದ್ರ ಕುಮಾರ್, ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಿ.ಬಿ.ಜನಾರ್ದನ ಸ್ವಾಮಿ, ಸಂಯೋಜಕರಾದ ಡಾ. ಸಂದೀಪ್, ಡಾ. ಮನೀಲ್ ರಾಜ್, ಸಹಾಯಕ ಆಡಳಿತಾಧಿಕಾರಿಗಳಾದ ಜೆ.ಮಹದೇವು  ಉಪಸ್ಥಿತರಿದ್ದರು.

ಬ್ಯಾಂಕ್‌ಗಳಿಂದ ಆರ್ಥಿಕ ನೆರವು

ಸ್ವಉದ್ಯೋಗ ಆರಂಭಿಸಲು ಆಸಕ್ತಿ ಇರುವ ನವ ಉದ್ಯಮದಾರರಿಗೆ ಅಗತ್ಯ ಆರ್ಥಿಕ ಸೌಲಭ್ಯಗಳನ್ನು ಸಾರ್ವಜನಿಕ ಬ್ಯಾಂಕ್‌ಗಳ ಮೂಲಕ ಒದಗಿಸಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಉದ್ಯಮವನ್ನು ಉತ್ತಮವಾಗಿ ನಿರ್ವಹಿಸಿದರೆ ಯಶಸ್ವಿ ಉದ್ಯಮಿಗಳಾಗಬಹುದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ.ಎನ್.ಸುರೇಖಾ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.