ಮಹದೇಶ್ವರ ಬೆಟ್ಟ: ಇಲ್ಲಿನ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಜ್ಯ ಮಟ್ಟದ ರೈತರ ತರಬೇತಿ ಹಾಗೂ ಅಧ್ಯನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರೈತರ ಕೃಷಿ ಅಭಿವೃದ್ಧಿಗಾಗಿ ಎಂ.ಎಸ್. ಸ್ವಾಮಿನಾಥನ್ ವರದಿಯ ಜಾರಿಗೊಳಿಸಬೇಕು. ದೇಶದಾದ್ಯಂತ ರಾಜಕೀಯ ಪಕ್ಷಗಳು ಮತವನ್ನು ಪಡೆಯಲು ಮಾತ್ರ ಮತದಾರನಿಗೆ ಗ್ಯಾರಂಟಿ ಎಂಬ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿವೆ. ದೇಶದ ಬೆನ್ನೆಲುಬು ರೈತರ ಆದಾಯ ಹೆಚ್ಚು ಮಾಡುವ ಯಾವುದೇ ಯೋಜನೆಗಳು ಪ್ರಕಟವಾಗುತ್ತಿಲ್ಲ ಎಂದರು.
ಪ್ರಧಾನಿ ಮೋದಿಯವರು 2025ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ್ದರು, ಆದರೆ ಕೃಷಿ ಉತ್ಪಾದನಾ ವೆಚ್ಚ ಮಾತ್ರ ದ್ವಿಗುಣಗೊಂಡಿದೆ. ಸರ್ಕಾರಿ ನೌಕರರ ವೇತನ, ಭತ್ಯೆ ನೂರಕ್ಕೆ ನೂರರಷ್ಟು ಹೆಚ್ಚಳವಾಗಿದೆ. ಆದರೆ ರೈತರ ಆದಾಯ ಇನ್ನು ದ್ವಿಗುಣ ಆಗಿಲ್ಲ. ಕೃಷಿ ಉತ್ಪನ್ನಗಳ ವೈಜ್ಞಾನಿಕ ಬೆಲೆ ನಿಗದಿಗೆ ಖರ್ಚು ವೆಚ್ಚಗಳನ್ನು ಅಂದಾಜು ಮಾಡಿ ಉತ್ಪಾದನಾ ವೆಚ್ಚಕ್ಕೆ ಒಂದೂವರೆ ಪಟ್ಟು ಸೇರಿಸಿ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಎಂ.ಎಸ್. ಸ್ವಾಮಿನಾಥನ್ ವರದಿಯಲ್ಲಿ ಹೇಳಲಾಗಿದೆ. ಆದರೆ ಅದನ್ನು ಜಾರಿ ಮಾಡದೆ ರೈತರಿಗೆ ಮೋಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಗಿ, ಭತ್ತ, ಜೋಳ, ಮೆಕ್ಕೆಜೋಳ, ಅರಿಶಿನ, ಸೂರ್ಯಕಾಂತಿ, ಹೆಸರು ಕಾಳು, ಉದ್ದು, ತೊಗರಿ ಖರೀದಿಗೆ ವರ್ಷಪೂರ್ತಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಆದರೆ ಕೆಲವೇ ದಿನ ತೆರೆದು ದಲ್ಲಾಳಿಗಳಿಗೆ ಲಾಭವಾಗುವಂತೆ ನೋಡಿಕೊಳ್ಳುತ್ತಿದೆ. ಇದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಂಎಸ್‌ಪಿಗಿಂತಲೂ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಬಾರದು. ಕೈಗಾರಿಕೆ ಅಭಿವೃದ್ಧಿಗೆ ಬೇಕಾದರೆ ರೈತರನ್ನೇ ಪಾಲುದಾರರಾಗಿ ಮಾಡಿಕೊಳ್ಳಲಿ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಲು ಮೀನ–ಮೇಷ ಎಣಿಸುತ್ತಿವೆ. ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಬೇಕು ಎಂದು ಹೋರಾಟ ಮಾಡುವ ರೈತರ ಮೇಲೆ ಪ್ರಕರಣ ದಾಖಲಿಸುವ ಸರ್ಕಾರಗಳು ರೈತರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತವೆ. ಕೃಷಿಯಿಂದ ರೈತರನ್ನು ಹೊರಗಿಡುವ ಹುನ್ನಾರವಾಗಿ ಮೊದಲ ಹಂತದಲ್ಲಿ ಕೃಷಿಗೆ ಬೇಕಾಗುವ ವಿದ್ಯುತ್ ಅನ್ನು ಖಾಸಗಿಕರಣ ಮಾಡಲು ಸ್ಮಾರ್ಟ್ ಮೀಟರ್ ಎಂಬ ಗುಮ್ಮ ಬಿಟ್ಟಿದ್ದಾರೆ. ತಕ್ಷಣ ಇದನ್ನು ಕೃಷಿ ವಲಯಕ್ಕೆ ವಿಸ್ತರಿಸದೆ ಕೈಬಿಡಬೇಕು ಎಂದು ಭಾಗ್ಯರಾಜ್ ಒತ್ತಾಯಿಸಿದರು.
ರೈತರಿಗೆ ಕೃಷಿಯಲ್ಲಿ ಬೇಕಾಗುವ ತಾಂತ್ರಿಕ ಜ್ಞಾನ ಹಾಗೂ ಅರಿವು ಉಂಟುಮಾಡಲು ಕೃಷಿಯಲ್ಲಿ ವೈಜ್ಞಾನಿಕವಾದಂತ ಬದಲಾವಣೆಗಳನ್ನು ಮಾಡಿಕೊಳ್ಳಲು ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು ಸುಸ್ಥಿರ ಕೃಷಿ ಮಾಡಲು ಇಂತಹ ತರಬೇತಿಯಿಂದ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಶಿವರಾಜಪ್ಪ, ಮಹದೇವಯ್ಯ, ಶಿವರುದ್ರಪ್ಪ, ಎನ್.ಎಂ. ನಾಯಕ್, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಳಗೆರೆ, ಗಣೇಶ್ ಕರೆ ಹುಂಡಿ, ರಾಜಣ್ಣ, ಹನುಮಯ್ಯ ಮಲಿಯೂರು, ಮಹೇಂದ್ರ ಹಾಜರಿದ್ದರು.
ವೈಜ್ಞಾನಿಕ ಬೆಲೆ ನಿಗದಿಯಾಗಲಿ ರೈತರ ಸಾಲ ಮನ್ನಾ ಮಾಡಲಿ ಬಲವಂತದ ಭೂಸ್ವಾಧೀನ ಬೇಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.