ADVERTISEMENT

ಕೊಳ್ಳೇಗಾಲ | ಬಾರದ ಬಸ್: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಸತ್ತೇಗಾಲ ಗ್ರಾಮದ ಒಳಗೆ ಬಾರದ ಕೆಎಸ್‌ಆರ್‌ಟಿಸಿ ಬಸ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:03 IST
Last Updated 16 ಜೂನ್ 2025, 14:03 IST
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಒಳಗಡೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬರುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಬಸ್ ತಡೆದು ಸೋಮವಾರ ಪ್ರತಿಭಟನೆ ಮಾಡಿದರು
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಒಳಗಡೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬರುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಬಸ್ ತಡೆದು ಸೋಮವಾರ ಪ್ರತಿಭಟನೆ ಮಾಡಿದರು   

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಒಳಗಡೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬರುತ್ತಿಲ್ಲ ಎಂದು ಆರೋಪಿಸಿಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಬಸ್‌ಗಳನ್ನು ತಡೆದು ಸೋಮವಾರ 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮಾಡಿದರು.

ಬೆಳಿಗ್ಗೆ 8 ಗಂಟೆಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ಮಾಡಿ ಸುಮಾರು 30ಕ್ಕೂ ಹೆಚ್ಚು ಬಸ್‌ಗಳನ್ನು ತಡೆದು ಪ್ರತಿಭಟನೆ ಮಾಡಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಗ್ರಾಮದ ಯುವ ಮುಖಂಡ ದಿವ್ಯರಾಜ್ ಮಾತನಾಡಿ, ನಮ್ಮ ಗ್ರಾಮದ ಸಮೀಪದಲ್ಲಿ ಬೈಪಾಸ್ ರಸ್ತೆ ಆಗಿರುವುದು ಬಹಳ ಸಂತೋಷದ ವಿಷಯ. ಆದರೆ ಗ್ರಾಮದ ಒಳಗಡೆ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗ್ರಾಮದಿಂದ ಕೊಳ್ಳೇಗಾಲಕ್ಕೆ ಹೋಗಬೇಕಾದರೆ 3 ಕಿ.ಮೀ ದೂರ ಬೈಪಾಸ್‌ನಲ್ಲಿ ನಡೆದುಕೊಂಡು ಹೋಗಬೇಕು. ಅಲ್ಲಿಗೆ ಹೋದರೂ ಕೆಲವು ಬಸ್‌ಗಳು ನಿಲುಗಡೆ ನೀಡುವುದಿಲ್ಲ. ಕೊಳ್ಳೇಗಾಲದಿಂದ ನಮ್ಮ ಗ್ರಾಮಕ್ಕೆ ಬರಬೇಕಾದರೆ 3 ಕಿ.ಮೀ ಹಿಂದೆಯೇ ನಿಲ್ಲಿಸುತ್ತಾರೆ, ಹೀಗಾಗಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಪ್ರತಿನಿತ್ಯ ತೊಂದರೆ ಉಂಟಾಗುತ್ತಿದೆ ಎಂದರು.

ಸ್ಥಳಕ್ಕೆ ಬಂದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಇಂದಿನಿಂದ ಕಡ್ಡಾಯವಾಗಿ ಗ್ರಾಮದ ಒಳಗೆ ಬಸ್ ಬಂದು ಹೋಗಬೇಕು ಬಸ್‌ಗಳು ಗ್ರಾಮದ ಒಳಗೆ ಬಾರದೆ ಬೈಪಾಸ್ ರಸ್ತೆಯಲ್ಲಿ ಹೋದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಿಂದ ಸುಮಾರು ಐದು ಕಿಲೋ ಮೀಟರ್ ವರೆಗೆ ರಾಫಿಕ್ ಜಾಮ್ ಉಂಟಾಯಿತು. ವಾಹನ ಸವಾರರು ಸೇರಿದಂತೆ ಅನೇಕರು ಪರದಾಡುವಂತಾಯಿತು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಯಶ್ವಂತ್ ಗೌಡ, ವರ್ಷಿತ್, ರಘು, ಮನೋಜ್, ಚಂದನ್, ಸಂಜಯ್, ಸಿದ್ದೇಶ್, ಕಿಶೋರ್ ಗೌಡ, ಲೋಕೇಶ್ ಗೌಡ, ನಿಶಾಂತ್ ಗೌಡ, ನವೀನ್, ಸುದರ್ಶನ್, ಕರವೇ (ನಾರಾಯಣ ಗೌಡ ಬಣ) ಸತ್ತೇಗಾಲ ಗ್ರಾಮಘಟಕ ಅಧ್ಯಕ್ಷ ಶಬೀರ್ ಪಾಷ, ಗೌರವಧ್ಯಕ್ಷ ಮಹಮ್ಮದ್ ಇರ್ಫಾನ್ ವರಸಿ, ಸಿದ್ದೀಖ್ ಪಾಷ, ಅಮೀರ್ ಜಾನ್, ಸುಲ್ತಾನ್, ಆರೀಫ್, ಯೂಸಫ್, ಪ್ರದೀಪ್ ಕುಮಾರ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಶಿವಕುಮಾರ್, ಶಿವಲಿಂಗಯ್ಯ, ಮುಜ್ಜು, ಶಿವಬಸವಯ್ಯ, ಡಿ.ಶಿವಶಂಕರ್, ಸಿದ್ದರಾಜು ಇದ್ದರು.

ಸಮಸ್ಯೆ ಬಗೆಹರಿಸುವವರಿಲ್ಲ: ಆಕ್ರೋಶ

ADVERTISEMENT

ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜಿಗೂ ಹೋಗಲು ತುಂಬಾ ತಡವಾಗುತ್ತಿದೆ. ರಾತ್ರಿ ವೇಳೆ ಮಹಿಳೆಯರು ಬೈಪಾಸ್ ರಸ್ತೆಯಿಂದ ಗ್ರಾಮಕ್ಕೆ ಒಂಟಿಯಾಗಿ ಬರಬೇಕಾಗುತ್ತದೆ. ನಾವು ಅನೇಕ ಬಾರಿ ಸಂಬಧಪಟ್ಟ ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್ ಚಾಲಕರಿಗೆ ಹೇಳಿದರೆ ನಾವು ಹೋಗುವುದಿಲ್ಲ ಎಂದು ಉಡಾಫೆ ಉತ್ತರಗಳನ್ನು ಕೊಡುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮದ ಯುವ ಮುಖಂಡ ದಿವ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಚುನಾವಣೆ ಬಂದಾಗ ಮಾತ್ರ ಶಾಸಕರು ಸಂಸದರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಬಂದು ಮತಭಿಕ್ಷೆ ಬೇಡುತ್ತಾರೆ. ಆದರೆ ನಮ್ಮ ಕಷ್ಟ ಸುಖಗಳನ್ನು ಕೇಳುವುದೇ ಇಲ್ಲ. ಆ ಕಾರಣದಿಂದ ಇಂದು ನಾವು ದಿಢೀರ್ ಪ್ರತಿಭಟನೆ ಮಾಡಬೇಕಾಯಿತು. ಪ್ರತಿನಿತ್ಯ ಬಸ್ ಗ್ರಾಮಕ್ಕೆ ಬಂದು ಹೋಗಲೇಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.