ADVERTISEMENT

100 ನೋಟಿಸ್‌ ಕೊಟ್ಟರೂ ಸಾಲ ಕಟ್ಟಲ್ಲ

ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಿಡಿಕಾರಿದ ಸಹಕಾರ ಸಚಿವ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:50 IST
Last Updated 4 ಜೂನ್ 2020, 16:50 IST
ಎಸ್‌.ಟಿ.ಸೋಮಶೇಖರ್
ಎಸ್‌.ಟಿ.ಸೋಮಶೇಖರ್   

ಚಾಮರಾಜನಗರ: ‘ಕೆಲವು ಜಿಲ್ಲಾ ಸಹಕಾರಿ ಬ್ಯಾಂಕುಗಳು (ಡಿಸಿಸಿ) ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಡುತ್ತವೆ. ಆದರೆ, ಕಾರ್ಖಾನೆಗಳಿಂದ ಐದು ರೂಪಾಯಿಯನ್ನೂ ವಸೂಲು ಮಾಡುವುದಕ್ಕೆ ಆಗುವುದಿಲ್ಲ. 100 ನೋಟಿಸ್‌ ಕೊಟ್ಟರೂ ಒಂದು ರೂಪಾಯಿಯೂ ಬರುವುದಿಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಹೇಳಿದರು.

ಸಹಕಾರ ಸಂಘಗಳಲ್ಲಿ ಹೊಸಬರಿಗೆ ಸಾಲ ಸಿಗುತ್ತಿಲ್ಲ ಎಂಬ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು,‘ನಬಾರ್ಡ್‌ ರಾಜ್ಯಕ್ಕೆ ₹1,500 ಕೋಟಿ ಕೊಟ್ಟಿದೆ. ಹೊಸಬರಿಗೆ ಸಾಲ ಕೊಡುವಂತೆ ಸೂಚಿಸಿದ್ದೇನೆ’ ಎಂದರು.

‘ಸಕ್ಕರೆ ಕಾರ್ಖಾನೆಗಳಿಗೆ ಕೊಟ್ಟ ಸಾಲವನ್ನು ವಸೂಲು ಮಾಡುವುದಕ್ಕೆ ಆಗುವುದಿಲ್ಲ. ಅದೇ ರೈತರಿಗೆ ಸಾಲ ಕೊಟ್ಟರೆ ಶೇ 99ರಷ್ಟು ವಸೂಲಾತಿ ಆಗುತ್ತದೆ. ರೈತ ಸ್ವಾಭಿಮಾನಿ. ಸಾಲವನ್ನು ತೀರಿಸುತ್ತಾನೆ. ಕಟ್ಟದವರಿಗೆ ಎರಡು ನೋಟಿಸ್‌ ಕೊಟ್ಟರೆ ಶೇ 100ರಷ್ಟು ವಸೂಲಾತಿ ಆಗುತ್ತದೆ’ ಎಂದು ಹೇಳಿದರು.

ADVERTISEMENT

‘ನಾನು ಸಕ್ಕರೆ ಕಾರ್ಖಾನೆಗಳ ವಿರುದ್ಧವಾಗಿಲ್ಲ. ಆದರೆ, ಅವುಗಳಿಗೆ ಕೊಟ್ಟ ಸಾಲ ಮರುಪಾವತಿಯಾಗುತ್ತಿಲ್ಲ’ ಎಂದರು.

‘ಸ್ವಸಹಾಯ ಸಂಘಗಳಿಗೆ ₹5 ಲಕ್ಷದವರೆಗೆ ಸಾಲ ಕೊಟ್ಟರೆ ಶೇ 100ರಷ್ಟು ವಸೂಲಾತಿ ಆಗುತ್ತದೆ. ಬಡವರ ಬಂಧು ಯೋಜನೆ ಅಡಿಯಲ್ಲಿ ಪಾದಚಾರಿ ವ್ಯಾಪಾರಿಗಳಿಗೆ ₹10 ಸಾ‌ವಿರ ಸಾಲ ಕೊಡಿ. ಖಂಡಿತವಾಗಿಯೂ ಅವರು ಮರುಪಾವತಿಸುತ್ತಾರೆ’ ಎಂದರು.

ನಾಲ್ವರ ಪರ: ಎಂಟಿಬಿ ನಾಗರಾಜ್‌, ಅಡಗೂರು ಎಚ್‌. ವಿಶ್ವನಾಥ್‌, ರೋಶನ್‌ ಬೇಗ್‌ ಹಾಗೂ ಶಂಕರ್‌ ಅವರಿಗೆ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈಡೇರಿಸಲಿದ್ದಾರೆ. ಇದೆಲ್ಲವೂ ಯಡಿಯೂರಪ್ಪ ಅವರ ಒಬ್ಬರ ಕೈಯಲ್ಲಿ ಇಲ್ಲ. ಪಕ್ಷದ ಕೋರ್‌ ಕಮಿಟಿಯಲ್ಲಿ ಚರ್ಚೆಯಾಗಿ, ನಂತರ ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚೆಯಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನಾವು ನಾಲ್ಕೂ ಜನರ ಪರವಾಗಿದ್ದೇವೆ’ ಎಂದು ಸೋಮಶೇಖರ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ ನನ್ನ ಗಮನಕ್ಕೆ ಬಂದಿಲ್ಲ. ಬಂದರೆ, ಕ್ರಮಕೈಗೊಳ್ಳುವುದು ನಿಶ್ಚಿತ. ಯಾರನ್ನೂ ರಕ್ಷಣೆ ಮಾಡುವ ಅವಶ್ಯಕತೆ ನನಗಿಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.