ADVERTISEMENT

ಚಾಮರಾಜನಗರ | ಬದುಕುವ ಹಕ್ಕಿದೆ: ಅಂತ್ಯಗೊಳಿಸುವ ಹಕ್ಕಿಲ್ಲ: ಈಶ್ವರ್

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:16 IST
Last Updated 11 ಸೆಪ್ಟೆಂಬರ್ 2025, 5:16 IST
ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಹಾಗೂ ಗಣ್ಯರು ಉದ್ಘಾಟಿಸಿದರು
ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಹಾಗೂ ಗಣ್ಯರು ಉದ್ಘಾಟಿಸಿದರು   

ಚಾಮರಾಜನಗರ: ಪ್ರತಿಯೊಬ್ಬ ಪ್ರಜೆಗೂ ಜೀವಿಸುವ ಹಕ್ಕು ಹೊಂದಿದ್ದು ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಸುಳಿಯದಂತೆ, ಆತ್ಮಹತ್ಯೆಯ ಭಾವ ಮೂಡದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಕಾನೂನು ಮತ್ತು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾ‌ಧೀಶ ಈಶ್ವರ್ ತಿಳಿಸಿದರು.

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜೆಎಸ್‌ಎಸ್‌ ನರ್ಸಿಂಗ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಆತ್ಮಹತ್ಯೆ ಜೀವನವನ್ನೇ ಕೊನೆಗಾಣಿಸುತ್ತದೆ. ನಮ್ಮನ್ನು ನಾವೇ ಕೊಂದುಕೊಂಡಂತಾಗುತ್ತದೆ. ಪ್ರತಿಯೊಬ್ಬರೂ ಆಯಸ್ಸು ಇರುವವರೆಗೂ ಬದುಕಬೇಕು. ಆತ್ಯಹತ್ಯೆಯಂತಹ ದುಡುಕಿನ ನಿರ್ಧಾರ ಮಾಡಬಾರದು. ಮಾನಸಿಕ ಖಿನ್ನತೆಯಲ್ಲಿ ಸಿಲುಕಿ ಬಳಲುತ್ತಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಸಕಾರಾತ್ಮಕವಾಗಿ ಚಿಂತಿಸಿ ಜೀವನವನ್ನು ಪ್ರೀತಿಸಿ ಉತ್ಸಾಹದಿಂದ ಇರುವಂತೆ ಉತ್ತೇಜಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಜೀವನ‌ ರೂಪಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಹರೆಯದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಯಶಸ್ಸು ದೊರೆಯುತ್ತದೆ. ಗುರಿಯನ್ನೂ ಸಾಧಿಸಬಹುದು. ಪ್ರಲೋಭನೆಗಳಿಗೆ ಸಿಲುಕಿ ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಗೆ ಬಲಿಯಾಗಬಾರದು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ, ‘ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆಲ್ಲ ಆತ್ಮಹತ್ಯೆ ಪರಿಹಾರವಲ್ಲ. ಭೂಮಿ ಮೇಲೆ ಇರುವ ಪತ್ರಿ ಜೀವಿಗೂ  ಬದುಕುವ ಹಕ್ಕಿದೆ. ಹಾಗೆಯೇ ಹುಟ್ಟಿದ ಮೇಲೆ ಮರಣ ಹೊಂದಲೇಬೇಕು. ಸವಾಲು, ಅಡೆತಡೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಬದುಕಿನಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಎದುರಿಸಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಪಿ.ಚಂದ್ರಶೇಖರ್ ‘ಆತ್ಮಹತ್ಯೆ ತಡೆಗೆ ಸಾರ್ವಜನಿಕರಿಗೆ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ. ಅಗತ್ಯವಿದ್ದವರು ಕಾರ್ಯಕ್ರಮದ ಪ್ರಯೋಜನಪಡೆದುಕೊಳ್ಳಬಹುದು ಎಂದರು.

ಸಿಮ್ಸ್ ಆಸ್ಪತ್ರೆಯ ಮನೋರೋಗ ತಜ್ಞ ಡಾ.ರಘು, ಡಾ.ಕೆ.ವಿ.ಮೇರಿ ಅಂಜಲಾ ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜೆಎಸ್‌ಎಸ್‌ ನರ್ಸಿಂಗ್ ಕಾಲೇಜಿನ ಬೋಧಕಿ ಸಂಧ್ಯಾಶ್ರೀ ಇದ್ದರು.

ಖಿನ್ನತೆಯಲ್ಲಿ ಸಿಲುಕಿದವರಿಗೆ ಮನೋಸ್ಥೈರ್ಯ ತುಂಬಿ ಬದುಕಿನಲ್ಲಿ ಜೀವನೋತ್ಸಾಹ ಇರಲಿ  ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಮುನ್ನಡೆಯಿರಿ 

ಕಷ್ಟಗಳನ್ನು ಎದುರಿಸಲಾಗದೆ ಆಘಾತಕ್ಕೆ ಒಳಗಾಗಿ ಖಿನ್ನತೆಗೆ ಸಿಲುಕಿದವರನ್ನು ಗುರುತಿಸಿ ಜೀವನದ ಬಗ್ಗೆ ಧೈರ್ಯ ತುಂಬಬೇಕು. ಸಂತೋಷದ ಜೀವನಕ್ಕೆ ಪೂರಕವಾಗಿ ಸಲಹೆ ಮಾರ್ಗದರ್ಶನ ಕೈಲಾದ ಸಹಾಯ ನೀಡಬೇಕು
ಡಾ.ಎಸ್.ಚಿದಂಬರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.