ಚಾಮರಾಜನಗರ: ಸುಳ್ವಾಡಿ ವಿಷಪ್ರಾಷನ ಘಟನೆ ನಡೆದು 6 ವರ್ಷಗಳು ಕಳೆದರೂ ದಲಿತ ಸಂತ್ರಸ್ತರಿಗೆ ಭೂಮಿ, ನಿವೇಶನ ಸಹಿತ ಯಾವುದೇ ಪರಿಹಾರ ನೀಡಿಲ್ಲ ಎಂದು ದೊಡ್ಡಿಂದುವಾಡಿ ಸಿದ್ದರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಎಸ್‌ಸಿ, ಎಸ್‌ಟಿ ಮುಖಂಡರ ಕುಂದು–ಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಸುಳ್ವಾಡಿ ಪ್ರಕರಣದ ಸಂತ್ರಸ್ತರಲ್ಲಿ ಹಲವರು ಮೃತಪಟ್ಟಿದ್ದು, ವಿಳಂಬ ಮಾಡದೆ ಪರಿಹಾರ ನೀಡಬೇಕು. ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.
ಎಂ.ಜಿ. ದೊಡ್ಡಿ ಪ್ರಕರಣದಲ್ಲೂ ಪರಿಹಾರ ಕೊಟ್ಟಿಲ್ಲ. ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೀಡಿರುವ ಪರಿಹಾರ ವಾಪಸ್ ಪಡೆಯಬಾರದು ಎಂದು ಒತ್ತಾಯಿಸಿದರು.
‘ದಲಿತರಿಗೆ ನ್ಯಾಯ ಕೊಡಿ’
ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಪೈಕಿ 14 ಮಂದಿ ದಲಿತರಿದ್ದು, ಇದುವರೆಗೂ ಮೃತರ ಕುಟುಂಬಗಳಿಗೆ ಸರ್ಕಾರಿ ನೌಕರಿಯಾಗಲಿ, ಸೂಕ್ತ ಪರಿಹಾರವಾಗಲಿ ಸರ್ಕಾರ ನೀಡಿಲ್ಲ. ದಲಿತರ ಜೀವಗಳಿಗೆ ಬೆಲೆ ಇಲ್ಲವೇ ಎಂದು ದಲಿತ ಮುಖಂಡ ನರಸಿಂಹಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
‘ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ₹ 10 ಲಕ್ಷ ಪರಿಹಾರ ಘೋಷಿಸಿರುವಾಗ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮೃತಪಟ್ಟ ದಲಿತರ ಕುಟುಂಬಗಳಿಗೆ ಪುಡಿಗಾಸು ಪರಿಹಾರ ನೀಡುವುದು ನ್ಯಾಯವೇ’ ಎಂದು ಪ್ರಶ್ನಿಸಿದರು.
‘ದುರಂತ ನಡೆದಾಗ ಕಾಂಗ್ರೆಸ್ ನಾಯಕರು ಸರ್ಕಾರಿ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೇಲೆ ನುಣುಚಿಕೊಳ್ಳುತ್ತಿರುವುದು ಖಂಡನೀಯ. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ನ್ಯಾಯ ಕೊಡದಿದ್ದರೆ ಚಾಮರಾಜನಗರ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಎಸ್‌ಪಿ ಬಿ.ಟಿ. ಕವಿತಾ ಮಾತನಾಡಿ, ‘ಆಕ್ಸಿಜನ್ ದುರಂತದ ಬಗ್ಗೆ ತನಿಖೆಗೆ, ವರದಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಆದೇಶ ಬಂದಿಲ್ಲ. ಆದರೆ, ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಜೋಡಿ ಕೊಲೆ ಪ್ರಕರಣ:
‘ಕಾವುದವಾಡಿ ಜೋಡಿ ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಪೈಕಿ ಒಬ್ಬರಿಗಷ್ಟೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಲಾಗಿದೆ. ಸರ್ಕಾರದಿಂದ ನೀಡಿರುವ ಎರಡು ಎಕರೆ ಭೂಮಿಗೆ, ಕೊಳವೆಬಾವಿ, ಬಂಡಿದಾರಿ ಸಹಿತ ಯಾವುದೇ ಸೌಲಭ್ಯಗಳಿಲ್ಲ’ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಡಿವೈಎಸ್‌ಪಿ ಲಕ್ಷ್ಮಯ್ಯ ಪ್ರತಿಕ್ರಿಯಿಸಿ ಸಂತ್ರಸ್ತೆಯೊಬ್ಬರಿಗೆ ನೌಕರಿ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಹಾಗೂ ಜಮೀನಿಗೆ ಕಾಲುದಾರಿ ಮಾಡಿಕೊಡುವಂತೆ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಪ್ರಕರಣ ಸಂಬಂಧ ಹೈಕೋರ್ಟ್ ಮೆಟ್ಟಿಲೇರಲು ಕೂಡ ಡಿಎಸ್‌ಡಬ್ಲ್ಯೂಗೆ ಸೂಚನೆ ನೀಡಿದ್ದಾರೆ ಎಂದರು.
ದಲಿತರ ಜೋಡಿ ಕೊಲೆ ಪ್ರಕರಣದ ಆರೋಪಿಗಳು ನಿರ್ದೋಷಿಗಳಾದರೆ ದಲಿತರ ಕೊಲೆ ಪ್ರಕರಣಗಳಿಗೆ ನ್ಯಾಯ ಸಿಗುವುದಿಲ್ಲ ಎಂಬ ತಪ್ಪು ಸಂದೇಶ ಸಮಾಜಕ್ಕೆ ರವಾನೆಯಾಗುತ್ತದೆ. ಅಧಿಕಾರಿಗಳು ಜವಾಬ್ದಾರಿಯಿಂದ ಪ್ರಕರಣವನ್ನು ನಿಭಾಯಿಸಬೇಕು ಎಂದು ದಲಿತ ಮುಖಂಡ ಸಿ.ಕೆ.ಮಂಜುನಾಥ್ ಒತ್ತಾಯಿಸಿದರು.
ಹರಿಜನ ಪದ ತೆಗಿಸಿ:
‘ಹರಿಜನ ಪದ ಬಳಕೆಗೆ ನಿರ್ಬಂಧವಿದ್ದರೂ ನಗರ ಠಾಣೆಯ ಫಲಕಗಳಲ್ಲಿ ಬಳಕೆಯಲ್ಲಿರುವುದು ಸಮುದಾಯಕ್ಕೆ ತೀವ್ರ ನೋವುಂಟಾಗುತ್ತಿದೆ. ಕೂಡಲೇ ಹರಿಜನ ಪದ ತೆರವುಗೊಳಿಸಬೇಕು’ ಎಂದು ಕಾಡೂರಿನ ವಕೀಲ ಮಹೇಂದ್ರ ಸಭೆಯಲ್ಲಿ ಪ್ರಸ್ತಾಪಿಸಿದರು.
ಪ್ರತಿಕ್ರಿಯಿಸಿದ ಎಸ್‌ಪಿ ‘ನಿರ್ಬಂಧಿತ ಪದ ತೆಗೆದುಹಾಕುವಂತೆ ಇನ್‌ಸ್ಪೆಕ್ಟರ್ ರಾಜೇಶ್‌ಗೆ ಸೂಚನೆ ನೀಡಿದರು.
ಈ ವೇಳೆ ಸಭೆಯಲ್ಲಿದ್ದವರೊಬ್ಬರು ಹಗುರುವಾಗಿ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದ ಎಸ್‌ಪಿ ಪೊಲೀಸರ ಬಗ್ಗೆ ಅಗೌರವವಾಗಿ ಮಾತನಾಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶ ಹಾಕಿದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಶಿವು ವಿರಾಟ್ ಮಾತನಾಡಿ, ‘ಚಾಮರಾಜನಗರದಲ್ಲಿ ನಾಯಕ ಹಾಗೂ ಉಪ್ಪಾರ ಸಮುದಾಯದ ಯುವಕರು ಗಾಂಜಾ ವ್ಯಸನಗಳಾಗುತ್ತಿದ್ದು, ಗಾಂಜಾ ಮಾರಾಟ ಜಾಲವನ್ನು ಮಟ್ಟಹಾಕಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.