ಹನೂರು: ಬೆಳಕಾಗುವ ಮುನ್ನವೇ ಡೇರೆಗಳಿಂದ ಹೊರಬಂದು ಬಯಲಲ್ಲಿ ಕಣ್ಮುಚ್ಚಿ ನಿಂತು ಹಕ್ಕಿಗಳ ವೈವಿಧ್ಯಮಯ ಸದ್ದಿಗೆ ಕಿವಿಗೊಡುವ ಅಪರೂಪದ ಅವಕಾಶ, ಬೈನಾಕ್ಯುಲರ್‌ನಲ್ಲಿ ಚೆಂದದ ಹಕ್ಕಿಗಳನ್ನು ವೀಕ್ಷಿಸುವ ಮತ್ತೊಂದು ಬಗೆ, ಹಕ್ಕಿಗಳ ಜೀವ ವೈವಿಧ್ಯಕ್ಕೆ ಮನಸೋಲುವುದು, ಹಕ್ಕಿಗಳಿಗೆ ಗೂಡು ಕಟ್ಟುವುದು...
ಇಂಥ ವಿಶೇಷ ಅನುಭವಗಳಿಗೆ ತೆರೆದುಕೊಂಡ ಮಕ್ಕಳಲ್ಲಿ ಅದೇನೋ ಪುಳಕ. ಪ್ರತಿದಿನ ತರಗತಿ ಪಾಠ, ಹೋಂವರ್ಕ್ ಒತ್ತಡದಲ್ಲಿ ಕಳೆದುಹೋಗಿದ್ದ ವಿದ್ಯಾರ್ಥಿಗಳು ಹೀಗೆ ಪರಿಸರದೊಟ್ಟಿಗೆ ಕಾಲ ಕಳೆಯುವ, ಪಕ್ಷಿಗಳ ಚಲನ ವಲನ ವೀಕ್ಷಿಸುವ, ಚಿಲಿಪಿಲಿ ನಿನಾದವನ್ನು ಆಲಿಸುವ ಅವಕಾಶವನ್ನು ಇಲ್ಲಿನ ಅನಿಶಾ ಸಂಸ್ಥೆ ರೂಪಿಸಿತ್ತು.
ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಮಾರ್ಟಳ್ಳಿ ಸಮೀಪದ ಕಡಬೂರು ಗ್ರಾಮದ ಅನಿಷಾ ಸಾವಯವ ಕೃಷಿ ಸಂಸ್ಥೆ ಆವರಣದಲ್ಲಿ ನಡೆಯುತ್ತಿರುವ ಈ ವಿಶೇಷ ಬೇಸಿಗೆ ಶಿಬಿರ ಮಕ್ಕಳಿಗೆ ಮುದ ನೀಡಿತು. ಮೈಸೂರು, ಬೆಂಗಳೂರು, ಗುಂಡ್ಲುಪೇಟೆ ಭಾಗದ 30 ವಿದ್ಯಾರ್ಥಿಗಳು ಭಾಗವಹಿಸಿ ಬಗೆಬಗೆಯ ಪಕ್ಷಿಗಳ ವೀಕ್ಷಣೆ ಮಾಡಿ ಸಂಭ್ರಮಿಸಿದರು. ಮೈಸೂರಿನ ಮೈಸೂರು ಅಮೆಚ್ಯೂರ್ ನ್ಯಾಚುರಲಿಸ್ಟ್ಸ್‌ನ ಪಕ್ಷಿ ತಜ್ಞ ಕೆ.ಮನು ಶಿಬಿರದ ನೇತೃತ್ವ ವಹಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ದುರ್ಬೀನು ಹಿಡಿದು ತದೇಕಚಿತ್ತದಿಂದ ಪಕ್ಷಿಗಳನ್ನು ವೀಕ್ಷಿಸುತ್ತಿದ್ದ ಚಿಣ್ಣರು, ಚಿಲಿಪಿಲಿ ಕೇಳಿದ ಕಡೆಗೆ ದುರ್ಬೀನು ವಾಲಿಸಿ ಕೂತೂಹಲದಿಂದ ಗಮನಿಸುತ್ತಿದ್ದರು. ನಾಲ್ಕು ದಿನಗಳ ಶಿಬಿರವು ಮಕ್ಕಳಿಗೆ ಮನೋರಂಜನೆಯ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತ್ತು. ಬದುಕಿಗೆ ಉಪಯೋಗವಾಗುವಂತಹ ಮೌಲ್ಯಗಳನ್ನು ಕಲಿತರು.
‘ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಿದ್ದ ಕಿವಿಗಳು ನಾಲ್ಕು ದಿನ ಸ್ವಚ್ಛಂದವಾಗಿ ಕಾಲಕಳೆಯುತ್ತ ಪರಿಸರದಲ್ಲಿ ನಡೆಯುವ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಪಕ್ಷಿಗಳ ಉಗಮ ಮತ್ತು ವಿಕಾಸದ ಬಗ್ಗೆ ತಿಳಿದುಕೊಂಡರು. ಪಕ್ಷಿ ವೀಕ್ಷಣೆಯ ಕುರಿತಾದ ಪರಿಭಾಷೆ, ಮನುಕುಲಕ್ಕೆ ಪಕ್ಷಿಗಳಿಂದಾಗುವ ಉಪಯೋಗ, ಪಕ್ಷಿಗಳ ಸಂರಕ್ಷಣೆಯ ಮಹತ್ವವೂ ಗೊತ್ತಾಯಿತು’ ಎಂದು ಅನಿಶಾ ಸಂಸ್ಥೆಯ ರಾಜನ್ ತಿಳಿಸಿದರು.
‘ಪಕ್ಷಿ ವೀಕ್ಷಣೆಯ ಪ್ರಯೋಜನ, ಪಕ್ಷಿ ವೀಕ್ಷಣೆ ಮತ್ತು ಪಕ್ಷಿ ಶಾಸ್ತ್ರದ ನಡುವಿನ ವ್ಯತ್ಯಾಸ, ಪಕ್ಷಿಗಳ ಸಂರಕ್ಷಣೆಯಲ್ಲಿ ಮನುಷ್ಯನ ಪಾತ್ರ, ವಿನಾಶದ ಅಂಚಿನಲ್ಲಿರುವ ಪಕ್ಷಿಗಳು, ಅನೀಷಾ ಸಾವಯವ ಕೃಷಿ ಮತ್ತು ವ್ಯವಸಾಯದ ಬಗ್ಗೆಯೂ ಮಾಹಿತಿ ನೀಡಲಾಯಿತು’ ಎಂದರು.
‘ದೇಸಿ ಬೀಜಗಳ ಸಂರಕ್ಷಣೆ, ಆಧುನಿಕತೆಯ ಭರಾಟೆಯಿಂದ ನೆಲೆ ಕಳೆದುಕೊಂಡ ಗುಬ್ಬಚ್ಚಿಗಳ ಬಗ್ಗೆ ತಿಳಿದುಕೊಂಡೆ. ಪಕ್ಷಿಗಳು ವಾಸಿಸಲು ಯೋಗ್ಯವಾಗುವಂತೆ ಪ್ಲೇವುಡ್‌ನಲ್ಲಿ ಗೂಡುಗಳನ್ನು ನಿರ್ಮಿಸಿದ್ದು ಖುಷಿ ಕೊಟ್ಟಿತು’ ಎಂದು ಮೈಸೂರಿನ ವಿದ್ಯಾರ್ಥಿನಿ ಹಿತ ತಿಳಿಸಿದಳು.
ಶಿಬಿರವು ಮಂಗಳವಾರ ಕೊನೆಗೊಳ್ಳಲಿದ್ದು, ಕೊಕ್ಕರೆ ಬೆಳ್ಳೂರು ಪಕ್ಷಿಧಾಮ, ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿಯನ್ನು ಆಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಪ್ರತಿನಿತ್ಯ ವಾಹನ ಕಾರ್ಖಾನೆಗಳ ಶಬ್ದ ಕೇಳಿ ಸಾಕಾಗಿತ್ತು. ಶಿಬಿರದಲ್ಲಿ ಪಕ್ಷಿಗಳ ಬಗ್ಗೆ ಬಹಳಷ್ಟು ಕಲಿತೆ. ನಮ್ಮೂರಲ್ಲಿ ಕಾಣದ ಪಕ್ಷಿಗಳನ್ನು ವೀಕ್ಷಿಸಿದೆ.–ಸಮರ್ಥ್ ಶಿಬಿರಾರ್ಥಿ ಬೆಂಗಳೂರು.
ಅರಿವು ವಿಸ್ತರಿಸುವ ಪಕ್ಷಿ ವೀಕ್ಷಣೆ:ಮನು ‘ಪಕ್ಷಿವೀಕ್ಷಣೆಯು ಮಕ್ಕಳಲ್ಲಿ ಪರಿಸರದ ಕುರಿತ ಅರಿವನ್ನು ವಿಸ್ತರಿಸುತ್ತದೆ’ ಎನ್ನುತ್ತಾರೆ ‘ಮ್ಯಾನ್’ ಸಂಸ್ಥೆಯ ಕೆ.ಮನು. ‘ಮಕ್ಕಳಿಗೆ ಪರಿಸರದ ಪ್ರಾಯೋಗಿಕ ಪರಿಚಯ ಹಾಗೂ ಒಡನಾಟ ಸಿಗಬೇಕಾದರೆ ಪಕ್ಷಿ ವೀಕ್ಷಣೆಯಂತಹ ಕಾರ್ಯಕ್ರಮಗಳು ಅಗತ್ಯ’ ಆ ಬಗ್ಗೆ ಶಿಬಿರದಲ್ಲಿ ಅರಿವು ಮೂಡಿಸಲಾಗಿದೆ’ ಎಂದರು. ‘ಪಕ್ಷಿಗಳ ಪರಿಚಯದ ಜೊತೆಗೇ ಪರಿಸರದ ಒಡನಾಟ ಮಾಡಿಸಲಾಗಿದೆ. ಮುಂಜಾನೆಯ ನಸುಕಿನಲ್ಲಿ ನಿಶಾಚಾರಿ ಜೀವಿಗಳ ಸದ್ದನ್ನು ಮಕ್ಕಳು ಆಲಿಸಿದ್ದಾರೆ ಸೂರ್ಯೋದಯವಾಗುವವರೆಗೂ ವಿವಿಧ ಜಾತಿಯ ಪಕ್ಷಿಗಳ ಕೂಗನ್ನು ಗುರುತಿಸಿದ್ದಾರೆ’ ಎಂದರು. ‘ಕತ್ತಲ ಕುರಿತು ಮಕ್ಕಳಲ್ಲಿರುವ ಭಯ ಹೋಗಲಾಡಿಸುವುದರ ಜೊತೆಗೆ ಏಕಾಂತದ ಏಕತಾನತೆಯನ್ನು ಅನುಭವಿಸುವ ಬಗೆಯನ್ನೂ ಹೇಳಿಕೊಡಲಾಗಿದೆ. ಪರಿಸರದ ವಿವಿಧ ಸಂಕೇತಗಳನ್ನು ಅರ್ಥೈಸುವ ಕಲೆಯನ್ನು ತಿಳಿಸಲಾಗಿದೆ. ಮಕ್ಕಳು ಸ್ವತಃ ಅನುಭವಿಸಿ ಕಲಿಯುವುದರಿಂದ ಅವರೊಳಗೆ ಪರಿಸರ ವಿಜ್ಞಾನಿ ಹುಟ್ಟುಕೊಳ್ಳುತ್ತಾನೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.