
ಚಾಮರಾಜನಗರ/ಯಳಂದೂರು: ಜಿಲ್ಲೆಯಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸಮೀಕ್ಷಾದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಇದುವರೆಗೂ ಗೌರವಧನ ಸಂದಾಯವಾಗಿಲ್ಲ.
ರಾಜ್ಯದಲ್ಲಿ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಗೊಳಿಸಲು ಪೂರಕವಾಗಿ ನಡೆದಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ 150 ಮನೆಗಳಿಗೆ ಒಬ್ಬರಂತೆ 2,456 ಗಣತಿದಾರರು (ಶಿಕ್ಷಕರು), 50 ಗಣತಿದಾರರಿಗೆ ಒಬ್ಬರಂತೆ 45 ಮಾಸ್ಟರ್ ಟ್ರೈನರ್ಸ್‌ಗಳು ಹಾಗೂ 20 ಗಣತಿದಾರರಿಗೆ ಒಬ್ಬರಂತೆ 110 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು.
ಸೆ.22ರಿಂದ ಆರಂಭವಾಗಿದ್ದ ಸಮೀಕ್ಷೆ ತಾಂತ್ರಿಕ ತೊಡಕುಗಳ ಕಾರಣದಿಂದ ಅಕ್ಟೋಬರ್ ಅಂತ್ಯದವರೆಗೂ ನಡೆಯಿತು. ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಸಮೀಕ್ಷಾದಾರರಾಗಿದ್ದ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದರು. ರಜಾ ದಿನಗಳಲ್ಲೂ ಭಾಗವಹಿಸುವ ಮೂಲಕ ಸಮೀಕ್ಷೆಯ ಯಶಸ್ಸಿಗೆ ಕಾರಣಕರ್ತರಾಗಿದ್ದ ಶಿಕ್ಷಕರು ಮತ್ತು ಮೇಲ್ವಿಚಾರಕರಿಗೆ ಹಣ ಸಂದಾಯವಾಗಿಲ್ಲ.
ಹಣ ಬಿಡುಗಡೆ ಕೋರಿ ಸಮೀಕ್ಷಾದಾರರು ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಪ್ರಯೋಜನಾಗಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಸಮೀಕ್ಷಾದಾರರೊಬ್ಬರು ಅಸಮಾಧಾನ ತೋಡಿಕೊಂಡರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ₹ 5 ಸಾವಿರ ಗೌರವಧನ ಹಾಗೂ ಪ್ರತಿ ಕಟುಂಬರ ಸಮೀಕ್ಷೆಗೆ ₹100 ಸಂದಾಯ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಸರ್ಕಾರಿ ಶಾಲೆಯ ಶಿಕ್ಷಕರು ಆಯಾ ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಒಳಪಟ್ಟ ಗ್ರಾಮಗಳಿಗೆ ತೆರಳಿ ಸಮೀಕ್ಷೆ ಪೂರೈಸಿದ್ಧಾರೆ. ಸುಸೂತ್ರವಾಗಿ ಸಮೀಕ್ಷೆಯನ್ನೂ ಮುಗಿಸಿದ್ದಾರೆ.
ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಭೇಟಿಯಾಗಿ ಆಧಾರ್, ಮೊಬೈಲ್ ಸಂಖ್ಯೆ ಸಹಿತ ಪ್ರತಿ ಮಾಹಿತಿ ಪಡೆದು ಬೆಳಿಗ್ಗಿಯಿಂದ ಸಂಜೆಯವರೆಗೂ ಕೆಲಸ ಮಾಡಿದ್ದೇವೆ. ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ 60 ಪ್ರಶ್ನೆಗಳನ್ನು ವ್ಯವಧಾನದಿಂದ ಕೇಳಿ ಅವರಿಂದ ಸೂಕ್ತ ಮಾಹಿತಿ ಪಡೆದು ಮೊಬೈಲ್ ಆ್ಯಪ್‌ಗೆ ನಮೂದಿಸಿದ್ದೇವೆ.
‘ಪ್ರತಿಯೊಬ್ಬರೂ 100 ರಿಂದ 150 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದೇವೆ. ಸಾರಿಗೆ ಸೌಲಭ್ಯಗಳ ಕೊರತೆ, ನೆಟ್‌ವರ್ಕ್ ಅಲಭ್ಯತೆ, ತಾಂತ್ರಿಕ ಸಮಸ್ಯೆ, ಸವಾಲುಗಳ ನಡುವೆ ನಿಗದಿತ ಸಮಯದಲ್ಲಿ ಸಮೀಕ್ಷೆ ಮಾಡಿದ್ದೇವೆ. ಸೆಸ್ಕಾಂನ ಆರ್‌ಆರ್ ನಂಬರ್ ಪರೀಕ್ಷಿಸುವುದು, ಮನೆ ಮಾಲೀಕರನ್ನು ಗುರುತಿಸುವುದು, ಮೊಬೈಲ್ ನಂಬರ್ ನಮೂದಿಸುವುದು, ಒಟಿಪಿ ಕಲೆಹಾಕಿ ನಮೂದಿಸುವುದು ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿದ್ದೇವೆ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಲವು ಪಂಚಾಯಿತಿಗಳಲ್ಲಿ ಮನೆಗಳ ಸಮೀಕ್ಷೆ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳು, ಆಶಾ ಕಾರ್ಯಕರ್ತೆಯರು, ಸಮೀಕ್ಷೆದಾರರು, ತರಬೇತಿದಾರರು ದುಡಿದಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡಿದರೂ ಅಧಿಕಾರಿಗಳು ಹಣ ಸಂದಾಯ ಮಾಡಲು ಸತಾಯಿಸುತ್ತಿದ್ದಾರೆ ಎನ್ನುತ್ತಾರೆ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮೇಲ್ವಿಚಾರಕರು.
₹4 ಕೋಟಿ ಶೀಘ್ರ ಖಾತೆಗೆ ಜಮೆ’
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸಮೀಕ್ಷಾದಾರರಿಗೆ ಗೌರವಧನ ಹಂಚಿಕೆಗೆ ಸರ್ಕಾರದಿಂದ ₹ 4 ಕೋಟಿ ಬಿಡುಗಡೆ ಮಾಡಿದೆ. ಈಗಾಗಲೇ 45 ಮಾಸ್ಟರ್ ಟ್ರೈನರ್ಸ್ 131 ಸೂಪರ್ ವೈಸರ್ಸ್ ಹಾಗೂ ಐವರು ರಾಜ್ಯಮಟ್ಟದ ಮಾಸ್ಟರ್ ಟ್ರೈನರ್‌ಗಳ ಖಾತೆಗೆ ಹಣ ಸಂದಾಯ ಮಾಡುವ ಪ್ರಕ್ರಿಯೆ ನಡೆದಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ 2456 ಶಿಕ್ಷಕರ ಬ್ಯಾಂಕ್ ಖಾತೆಗಳ ಮಾಹಿತಿ ಕೋರಿ ಎಲ್ಲ ತಾಲ್ಲೂಕುಗಳಿಗೆ ಸೂಚನೆ ನೀಡಲಾಗಿದ್ದು ಇದುವರೆಗೂ ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನಿಂದ ಮಾತ್ರ ವಿವರ ಬಂದಿದೆ. ಚಾಮರಾಜನಗರ ಗುಂಡ್ಲುಪೇಟೆ ಯಳಂದೂರು ತಾಲ್ಲೂಕುಗಳಿಂದ ಬರುವುದು ಬಾಕಿ ಇದೆ. ಮೊದಲ ಹಂತದಲ್ಲಿ ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿಗೆ ಹಾಗೂ 15 ದಿನಗಳಲ್ಲಿ ಎಲ್ಲ ತಾಲ್ಲೂಕುಗಳ ಸಮೀಕ್ಷಾದಾರರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿಶ್ವನಾಥ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.