ADVERTISEMENT

ನಾಡಿಗೆ ಜ್ಞಾನ ದಾಸೋಹ ಹಂಚಿದ ಸುತ್ತೂರು ಮಠ

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸದ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 3:10 IST
Last Updated 29 ಅಕ್ಟೋಬರ್ 2025, 3:10 IST
ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜು ಆವರಣದಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮವನ್ನು ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿರು
ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜು ಆವರಣದಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮವನ್ನು ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿರು   

ಚಾಮರಾಜನಗರ: ಸಾವಿರಾರು ವರ್ಷಗಳ ಇತಿಹಾಸ ಪರಂಪರೆ ಹೊಂದಿರುವ ಸುತ್ತೂರು ಶ್ರೀಮಠ ನಾಡಿನ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನನ್ಯ ಎಂದು ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ ಕಾಲೇಜು ಆವರಣದಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಠಗಳು ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನಾರ್ಹ. ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ವರ್ಗದವರಿಗೂ ಶಿಕ್ಷಣ ಕೈಗೆಟುಕುವಂತೆ ಮಾಡಿರುವ ಸುತ್ತೂರು ಶ್ರೀಗಳ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದರು.

ಜೆಎಸ್‌ಎಸ್‌ ಹೆಸರಿನಲ್ಲಿ ದೇಶ ವಿದೇಶಗಳಲ್ಲಿ 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದಿರುವ ಸುತ್ತೂರು ಮಠ ಜಗತ್ತಿಗೆ ಜ್ಞಾನ ದಾಸೋಹ ನೀಡುತ್ತಿದೆ. ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶಿಕ್ಷಣದ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯವನ್ನು ಮೂಡಿಸುವ ಕೆಲಸವನ್ನೂ ಶ್ರೀಮಠ ಮಾಡುತ್ತಿದೆ ಎಂದು ಸ್ಮರಿಸಿದರು.

ADVERTISEMENT

ಜಾಗತಿಕ ಮಟ್ಟದಲ್ಲಿ ಯುದ್ಧ, ಸಂಘರ್ಷಗಳು ಹೆಚ್ಚಾಗಿ ಅಶಾಂತಿ ಮೂಡಿರುವ ಹೊತ್ತಿನಲ್ಲಿ ಯುವಜನತೆ ದೇಶಾಭಿಮಾನ, ಸಂಸ್ಕೃತಿ, ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಮಠಮಾನ್ಯಗಳು ಶೈಕ್ಷಣಿಕ ಚಳವಳಿಯನ್ನೇ ಹುಟ್ಟುಹಾಕಿವೆ. ಸಿದ್ದಗಂಗಾ, ಸುತ್ತೂರು, ಆದಿ ಚುಂಚನಗಿರಿ, ಮುರುಘಾ ಮಠ ಹಾಗೂ ನಾಗನೂರು ಮಠಗಳು ಶಿಕ್ಷಣ ಕ್ರಾಂತಿ ಮಾಡಿವೆ. ಅಪೇಕ್ಷೆ ಉಳ್ಳವರಿಗೆಲ್ಲ ಶಿಕ್ಷಣ ಸಿಗಬೇಕು ಎಂಬ ಮಠಗಳ ಉದ್ದೇಶವೇ ನಾಡಿನಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಲು ಸಾಧ್ಯವಾಯಿತು. ರಾಜ್ಯದಲ್ಲಿ ಸಾಕ್ಷರರ ಸಂಖ್ಯೆ ಹೆಚ್ಚಾಗಲೂ ಮಠ ಮಾನ್ಯಗಳ ಕೊಡುಗೆ ಮಹತ್ವದ್ದು ಎಂದರು.

ಹಿರಿಯ ಶ್ರೀಗಳಿಗೆ ಚಾಮರಾಜನಗರ ಅತ್ಯಂತ ಪ್ರಿಯವಾದ ಊರಾಗಿದ್ದರಿಂದ ಜಿಲ್ಲೆಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನಿಲುಕುವಂತೆ ಮಾಡಿದರು ಎಂದರು.

ಸಂಸದ ಸುನೀಲ್ ಬೋಸ್ ಮಾತನಾಡಿ, ‘ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದ್ದ ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವುದು ಅಭಿನಂದನೀಯ, ಸುತ್ತೂರು ಮಠದ ಶಿಕ್ಷಣ ಕ್ರಾಂತಿ ಸಮಾಜಕ್ಕೆ ಮಾದರಿ’ ಎಂದರು.

ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಮಹಾತ್ಮರನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ಸುತ್ತೂರು ರಾಜೇಂದ್ರ ಶ್ರೀಗಳು ಮಹಾತ್ಮರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು ಲೋಕ ಕಾರುಣ್ಯ ಹೊಂದಿರುವ ಮಹನೀಯರು ಎಂದರು.  

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿದರು. ಶಾಸಕ ಗಣೇಶ್ ಪ್ರಸಾದ್‌, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ  ಮಹಮ್ಮದ್ ಅಸ್ಗರ್ ಮುನ್ನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಎಚ್‌.ವಿ.ಚಂದ್ರು, ನಗರಸಭೆ ಅಧ್ಯಕ್ಷ ಕೆ.ಸುರೇಶ್‌, ಪ್ರಾಂಶುಪಾಲ ಮಹದೇವಸ್ವಾಮಿ ಇದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

‘ಮೂರು ಬಾರಿ ಚಾ.ನಗರಕ್ಕೆ ಭೇಟಿ’

‘ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡದಂತೆ ಹಲವರು ಸಲಹೆ ನೀಡಿದರು. ಆದರೆ ಬಸವತತ್ವಗಳ ಮೇಲೆ ನಂಬಿಕೆ ಇದ್ದಿದ್ದರಿಂದ ಮೌಢ್ಯ ಕಂದಾಚಾರಗಳನ್ನು ಧಿಕ್ಕರಿಸಿ ಚಾಮರಾಜನಗಕ್ಕೆ ಬಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದೆ ಮುಖ್ಯಮಂತ್ರಿಯಾಗಿದ್ದಾಗ ಮೂರು ಬಾರಿ ಜಿಲ್ಲೆಗೆ ಬಂದಿದ್ದು 10 ತಿಂಗಳ ಸಂಪೂರ್ಣ ಅಧಿಕಾರ ಅನುಭವಿಸಿದ್ದೇನೆ ಎಂದು ಜಗದೀಶ ಶೆಟ್ಟರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.