ADVERTISEMENT

ಚಾಮರಾಜನಗರ: ಕೋವಿಡ್‌ ಸೋಂಕಿತರಲ್ಲಿ ಮಡುಗಟ್ಟಿದ ಆತಂಕ

ಯಾವಾಗ ನಿಲ್ಲುತ್ತೋ ಉಸಿರೋ...? ರೋಗಿಗಳ ಸಂಬಂಧಿಕರಲ್ಲಿ ದುಗುಡ

ಕೆ.ಎಸ್.ಗಿರೀಶ್
Published 5 ಮೇ 2021, 6:32 IST
Last Updated 5 ಮೇ 2021, 6:32 IST
ವಿಚಾರಣಾಧಿಕಾರಿ ಶಿವಯೋಗಿ ಕಳಸದ ಅವರು ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವಿಚಾರಣಾಧಿಕಾರಿ ಶಿವಯೋಗಿ ಕಳಸದ ಅವರು ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ: ಯಾವಾಗ ಜೀವವಾಯು ಆಮ್ಲಜನಕ ನಿಲ್ಲುತ್ತದೋ, ಸಿಲಿಂಡರ್ ಬರುವುದು ತಡವಾಗುತ್ತದೋ... ಎಂಬ ಆತಂಕ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ಕಾಡುತ್ತಿದೆ. ನಮ್ಮವರು ಬದುಕಿ ಮರಳಿ ಬರುತ್ತಾರೋ ಎಂಬ ದುಗುಡಕ್ಕೆ ರೋಗಿಗಳ ಸಂಬಂಧಿಕರು ಒಳಗಾಗಿದ್ದಾರೆ.

ಹಳ್ಳಿಹಳ್ಳಿಗಳಿಂದ ತಮ್ಮವರ ಯೋಗಕ್ಷೇಮ ತಿಳಿದುಕೊಳ್ಳಲು ಮಂಗಳವಾರ ಸಾಕಷ್ಟು ಮಂದಿ ಇಲ್ಲಿನ ಜಿಲ್ಲಾಸ್ಪತ್ರೆಯ ಮುಂದೆ ಸೇರಿದ್ದರು. ಪ್ರತಿಯೊಬ್ಬರಿಗೂ ಹೇಳಿ ಕಳುಹಿಸುವಷ್ಟರಲ್ಲಿ ವೈದ್ಯಕೀಯ ಸಿಬ್ಬಂದಿ ಹೈರಾಣಾದರು.

ಆಸ್ಪತ್ರೆಯೊಳಗೆ ದಾಖಲಾಗಿರುವ ರೋಗಿಗಳೂ ಜೀವಭಯದಲ್ಲಿ ಒದ್ದಾಡುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶುಶ್ರೂಷಕರೊಬ್ಬರು ತಿಳಿಸಿದರು. ‘ಮೇಡಂ ಆಕ್ಸಿಜನ್ ಬಂದಿದೆ ತಾನೆ. ನಾವು ಉಳಿಯುತ್ತೇವೆ ಅಲ್ಲವೇ’ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳುವಷ್ಟರಲ್ಲಿ ಅವರ ಕಣ್ಣೆವೆಗಳು ತೇವಗೊಂಡವು.

ADVERTISEMENT

ಸಾವು ಎಷ್ಟಾದರೂ ಆಗಲಿ, ಆಮ್ಲಜನಕ ಸಿಗುತ್ತಿಲ್ಲ ಎಂಬುದು ನಿಜ ತಾನೇ. ಡಿಸ್‌ ಚಾರ್ಜ್ ಮಾಡಿಸಿಕೊಂಡು ಮೈಸೂರಿಗೆ ಹೋಗಲು ನಮ್ಮಲ್ಲಿ ಹಣ ಇಲ್ಲ ಎಂದು ವೃದ್ದರೊಬ್ಬರು ಅಳುತ್ತಾ ಹೇಳುತ್ತಿದ್ದರೆ, ನಮಗೆ ಏನು ಹೇಳಬೇಕು ಎಂದೇ ಗೊತ್ತಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಡೀ ಆಸ್ಪತ್ರೆಯಲ್ಲಿ ಆವರಿಸಿದ್ದ ಸ್ಮಶಾನ ಮೌನದಲ್ಲಿ ಆಗೊಮ್ಮೆ ಈಗೊಮ್ಮ ನಡೆಯುತ್ತಿದ್ದ ಪ್ರತಿಭಟನೆಗಳ ದನಿ ಮಾತ್ರ ಕೇಳಿ ಬರುತ್ತಿದ್ದವು. ಉಳಿದಂತೆ, ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದವರ ಮೌನ ವದನವೇ ಕಾಣುತ್ತಿತ್ತು.

ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳು ಮತ್ತು ಸಂಬಂಧಿಕರಿಗೆ ಧೈರ್ಯ ತುಂಬಿದರು. ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂಬ ಭರವಸೆ ನೀಡಿದರು.

ಆಸ್ಪತ್ರೆಗೆ ದಾಖಲಾಗಬೇಕೇ ಬೇಡವೇ?

ಹೊಸದಾಗಿ ಸೋಂಕಿತರಾಗುವವರು ಆಸ್ಪತ್ರೆಗೆ ದಾಖಲಾಗಬೇಕೆ ಬೇಡವೇ ಎಂಬ ಗೊಂದಲದಲ್ಲಿ ಮುಳುಗುತ್ತಿದ್ದಾರೆ. ಬಹಳಷ್ಟು ಮಂದಿ ಮೈಸೂರಿನ ಆಸ್ಪತ್ರೆಗೆ ದಾಖಲಾಗುವುದೇ ಉತ್ತಮ ಎಂದು ಅದಕ್ಕಾಗಿ ಹಣವನ್ನು ಒಟ್ಟುಗೂಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮೈಸೂರಿನಲ್ಲಿರುವ ತಮ್ಮ ಸಂಬಂಧಿಕರ ಬಳಿ ಎಲ್ಲಿಯಾದರೂ ಒಂದು ಬೆಡ್‌ ಸಿಗುವಂತೆ ಮಾಡಿ ಎಂದು ಅಂಗಲಾಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.