ADVERTISEMENT

ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಿರಿ

ಕೇಂದ್ರ ಸರ್ಕಾರ ಹಾಗೂ ಕೃಷಿ ಸಚಿವರು ವಿಳಂಬ ಧೋರಣೆ ಆರೋಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 3:06 IST
Last Updated 18 ಸೆಪ್ಟೆಂಬರ್ 2025, 3:06 IST

ಗುಂಡ್ಲುಪೇಟೆ: ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಹಾಗೂ ಕೃಷಿ ಸಚಿವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೈತ ಮುಖಂಡರು ಹಾಗೂ ಸೂರ್ಯಕಾಂತಿ ಬೆಳೆಗಾರರು ಕಿಡಿಕಾರಿದರು.

ಪಟ್ಟಣದ ಎಪಿಎಂಸಿ ಕಚೇರಿ ಆವರಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ನಾಗಾರ್ಜುನ್ ಕುಮಾರ್, ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ತೆರಯುವಂತೆ ರಾಜ್ಯ ಸರ್ಕಾರ ಜು.17ರಂದು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿ, ಎರಡು ತಿಂಗಳು ಕಳೆದಿದೆ. ಎಪಿಎಂಸಿ ಆಡಳಿತ ಮಂಡಳಿ, ಸಂಸದ ಸುನಿಲ್ ಬೋಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತುರ್ತು ಕ್ರಮ ವಹಿಸುವಂತೆ ಸೆ.9ರಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದರು.

ಜೊತೆಗೆ ಎಣ್ಣೆ ಕಾಳು ಮಹಾ ಮಂಡಳಿ ಅಧ್ಯಕ್ಷರು ಕೂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಸ್ವತಹ ಕೇಂದ್ರ ಕೃಷಿ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸೆ.16ರಂದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ರಾಜ್ಯ ಎಪಿಎಂಸಿ ಕಾರ್ಯದರ್ಶಿ ಶಿವನಂದಾ ಕಪಾಸಿ ಅವರು ಖುದ್ದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಹೀಗಿದ್ದರೂ ಕೂಡ ಕೇಂದ್ರ ಸರ್ಕಾರ ಖರೀದಿ ಕೇಂದ್ರ ತೆರೆಯಲು ಹಿಂದೇಟು ಹಾಕುತಿದ್ದಾರೆ ಎಂದು ದೂರಿದರು.

ADVERTISEMENT

ಸೂರ್ಯಕಾಂತಿ ಉದ್ದು, ಹೆಸರಕಾಳು, ಶೇಂಗಾ, ಸೋಯಾಬಿನ್ ಕಾಳುಗಳಿಗೆ ಖರೀದಿ ಕೇಂದ್ರ ತೆರೆಯುವಂತೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ಹೀಗಿದ್ದರು ಕೂಡ ಸಹ ಕೇಂದ್ರ ಸರ್ಕಾರ ಖರೀದಿ ಕೇಂದ್ರ ತೆರೆಯದೆ ಸುಮಾರು ಎರಡು ಲಕ್ಷ ರೈತ ಕುಟುಂಬಗಳಿಗೆ ಅನ್ಯಾಯ ಮಾಡಿ ಕಾರ್ಪೊರೆಟ್‌ ಸ್ನೇಹಿಯಾಗಿ ರೈತ ವಿರೋಧಿ ನೀತಿ ಅನುಸರಿಸುತಿದ್ದಾರೆ ಎಂದು ಆರೋಪಿಸಿದರು.

ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಎಂಪಿಗಳು ಮತ್ತು ಸಚಿವರ ವಿವೇಚನರಹಿತ ಕ್ರಮದಿಂದ ರಾಜ್ಯದ ಎರಡು ಲಕ್ಷ ರೈತ ಕುಟುಂಬಗಳು ಕಷ್ಟ ಅನುಭವಿಸುತ್ತಿವೆ. ರಾಜ್ಯ ಬಿಜೆಪಿ ನಾಯಕರು ಬೇರೆ ಪ್ರಕರಣಗಳಿಗೆ ತೋರಿಸುವ ಆಸಕ್ತಿಯನ್ನು ರೈತರು ಆರ್ಥಿಕವಾಗಿ ಸಬಲರಾಗುವ ಯೋಜನೆ ಕಡೆ ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯುಂತೆ ಒತ್ತಾಯಿಸಿ ರೈತರು ಆರಂಭಿಸಿರುವ ಅನಿರ್ಧಿಷ್ಠಾವಧಿ ಮುಷ್ಕರ 7ನೇ ದಿನಕ್ಕೆ ಕಾಲಿಟ್ಟಿದ್ದರೂ ಕೇಂದ್ರ ಸರ್ಕಾರ ಕ್ರಮ ವಹಿಸಿಲ್ಲ. ಆದ್ದರಿಂದ ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆಯುಲು ಮುಂದಾಗಬೇಕು. ಇಲ್ಲದಿದ್ದರೆ ಚಳವಳಿಗಳು ಉಗ್ರ ರೂಪ ತಾಳಲಿದ್ದು, ಮುಂದೆ ಆಗುವ ನಷ್ಟಕ್ಕೆ ಕೇಂದ್ರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರಾದ ನಾಗರಾಜು ಚೌಡಹಳ್ಳಿ, ದಡದಹಳ್ಳಿ ಕುಮಾರ್, ಮಂಜುನಾಥ್, ಅಂಕಹಳ್ಳಿ ಮಹೇಂದ್ರ, ಬಾಚಹಳ್ಳಿ ಮಂಜುನಾಥ್, ವಡೆರಪ್ಪ ವೀರನಪುರ, ಜಗದೀಶ್, ದೊರೆ ಸೇರಿದಂತೆ ಹಲವು ಮಂದಿ ರೈತರು ಹಾಗೂ ಸೂರ್ಯಕಾಂತಿ ಬೆಳೆಗಾರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.