ADVERTISEMENT

ಚಾಮರಾಜನಗರ: ಗಡಿ ಜಿಲ್ಲೆಗೆ ಮೂರು ‘ನಮ್ಮ ಕ್ಲಿನಿಕ್‌’

ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಯಲ್ಲಿ ತಲಾ ಒಂದೊಂದು ಕ್ಲಿನಿಕ್‌

ಸೂರ್ಯನಾರಾಯಣ ವಿ
Published 6 ಅಕ್ಟೋಬರ್ 2022, 19:30 IST
Last Updated 6 ಅಕ್ಟೋಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ನಗರ, ಪಟ್ಟಣ ಪ್ರದೇಶಗಳ ಬಡಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶ ಹೊಂದಿರುವ, ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ‘ನಮ್ಮ ಕ್ಲಿನಿಕ್‌’ ಯೋಜನೆ ಜಿಲ್ಲೆಯಲ್ಲೂ ಅನುಷ್ಠಾನಗೊಳ್ಳುತ್ತಿದ್ದು, ಮೂರು ಕ್ಲಿನಿಕ್‌ಗಳು ಶೀಘ್ರದಲ್ಲಿ ಆರಂಭವಾಗಲಿವೆ.

ದೆಹಲಿಯಲ್ಲಿ ಎಎಪಿ ಸರ್ಕಾರ ಆರಂಭಿಸಿರುವ ಮೊಹಲ್ಲಾ ಕ್ಲಿನಿಕ್‌ ಮಾದರಿಯಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲಾಗುವುದು ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.ಆರ್ಥಿಕವಾಗಿ ದುರ್ಬಲರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಕ್ಲಿನಿಕ್‌ ಆರಂಭವಾಗಿದೆ. ಈ ವರ್ಷಾಂತ್ಯದ ವೇಳೆಗೆ ರಾಜ್ಯದಾದ್ಯಂತ ನಮ್ಮ ಕ್ಲಿನಿಕ್‌ಗಳು ಆರಂಭವಾಗುವ ನಿರೀಕ್ಷೆ ಇದೆ.

ADVERTISEMENT

ಗಡಿ ಜಿಲ್ಲೆಗೆ ಮೂರು ನಮ್ಮ ಕ್ಲಿನಿಕ್‌ಗಳು ಮಂಜೂರಾಗಿದೆ. ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಗಳಲ್ಲಿ ತಲಾ ಒಂದೊಂದು ಕ್ಲಿನಿಕ್‌ ಆರಂಭವಾಗಲಿದೆ.

ಚಾಮರಾಜನಗರದಲ್ಲಿ ರಾಮಸಮುದ್ರ, ಕೊಳ್ಳೇಗಾಲದಲ್ಲಿ ಮಠದಬೀದಿ (9ನೇ ವಾರ್ಡ್‌) ಹಾಗೂ ಗುಂಡ್ಲುಪೇಟೆಯಲ್ಲಿ ಅಂಬೇಡ್ಕರ್‌ ವೃತ್ತದ ಬಳಿ ಹೊಸ ಕ್ಲಿನಿಕ್‌ಗಳು ಆರಂಭವಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಮೂರು ಕ್ಲಿನಿಕ್‌ಗಳು ಸ್ಥಾಪನೆಯಾಗಲಿವೆ. ಈಗಾಗಲೇ ಸ್ಥಳಗುರುತಿಸಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿಗಾಗಿ ಸಂದರ್ಶನವನ್ನೂ ನಡೆಸಲಾಗಿದೆ. ಪ್ರಕ್ರಿಯೆ ಅಂತಿಮ ಹಂತದಲ್ಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕನಿಷ್ಠ 30 ಸಾವಿರ ಜನಸಂಖ್ಯೆ ಬೇಕು: ನಮ್ಮ ಕ್ಲಿನಿಕ್‌ ಆರಂಭಕ್ಕೆ ಆರೋಗ್ಯ ಇಲಾಖೆ ಕೆಲವು ಮಾನದಂಡಗಳನ್ನು ನಿಗದಿ ಪಡಿಸಿದೆ.

ಕ್ಲಿನಿಕ್‌ ಆರಂಭಿಸಬೇಕಾದರೆ ನಿರ್ದಿಷ್ಟ ಪ್ರದೇಶದಲ್ಲಿ ಕನಿಷ್ಠ 30 ಸಾವಿರ ಜನಸಂಖ್ಯೆ ಇರಬೇಕು. ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ಈಗಾಗಲೇ ನಗರ ಆರೋಗ್ಯ ಕೇಂದ್ರ ಇದೆ. ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯ ಜನಸಂಖ್ಯೆ 29 ಸಾವಿರದ ಒಳಗಡೆಯೇ ಇದೆ.

‘ಜಿಲ್ಲೆಗೆ ಆರಂಭದಲ್ಲಿ ಚಾಮರಾಜನಗರಕ್ಕೆ ಮಾತ್ರ ಒಂದು ‘ನಮ್ಮ ಕ್ಲಿನಿಕ್‌’ ಮಂಜೂರಾಗಿತ್ತು. ಕೊಳ್ಳೇಗಾಲದಲ್ಲಿ ಈಗಾಗಲೇ ನಗರ ಆರೋಗ್ಯ ಕೇಂದ್ರ ಇದೆ. ಇನ್ನೊಂದು ಕ್ಲಿನಿಕ್‌ ಆರಂಭಿಸಲು ಬೇಕಾದಷ್ಟು ಜನಸಂಖ್ಯೆ ಇಲ್ಲ. ಅದೇ ರೀತಿ ಗುಂಡ್ಲುಪೇಟೆಯಲ್ಲಿ ನಿಗದಿತ ಮಾನದಂಡಕ್ಕಿಂತ ಒಂದೆರಡು ಸಾವಿರ ಕಡಿಮೆ ಜನಸಂಖ್ಯೆ ಇದೆ. ಹೀಗಾಗಿ ನಮಗೆ ಒಂದೇ ಕ್ಲಿನಿಕ್‌ ಮಂಜೂರಾಗಿತ್ತು. ಆದರೆ, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರೋಗ್ಯ ಸೇವೆಯ ಅಗತ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿದ ನಂತರ ಇನ್ನೆರಡು ಕ್ಲಿನಿಕ್‌ ಸ್ಥಾಪನೆಗೆ ಒಪ್ಪಿಗೆ ನೀಡಿದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವೈದ್ಯರು ಸೇರಿ ನಾಲ್ಕು ಸಿಬ್ಬಂದಿ

ಮೂರರಿಂದ ನಾಲ್ಕು ಕೋಣೆಗಳು ಇರುವ ಕಟ್ಟಡ ಇಲ್ಲವೇ ಮನೆಯಲ್ಲಿ ನಮ್ಮ ಕ್ಲಿನಿಕ್‌ ಆರಂಭವಾಗಲಿದೆ.

‘ವೈದ್ಯ, ಸ್ಟಾಫ್‌ ನರ್ಸ್‌, ಲ್ಯಾಬ್‌ ಟೆಕ್ನೀಶಿಯನ್‌, ಡಿ.ಗ್ರೂಪ್‌ ನೌಕರ ಸೇರಿ ಒಂದು ಕ್ಲಿನಿಕ್‌ನಲ್ಲಿ ನಾಲ್ಕು ಸಿಬ್ಬಂದಿ ಇರಲಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಈ ಕ್ಲಿನಿಕ್‌ಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತ, ಮೂತ್ರ ಸೇರಿದಂತೆ ಸಾಮಾನ್ಯ ಪರೀಕ್ಷೆಗಳನ್ನು ಕ್ಲಿನಿಕ್‌ಗಳಲ್ಲೇ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಗುವ ಆರೋಗ್ಯ ಸೇವೆ ಈ ಕ್ಲಿನಿಕ್‌ಗಳಲ್ಲೂ ಸಿಗಲಿದೆ’ ಎಂದು ಡಾ.ವಿಶ್ವೇಶ್ವರಯ್ಯ ವಿವರಿಸಿದರು.

ಸ್ಥಳ ಗುರುತಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ವೈದ್ಯರು ಸೇರಿದಂತೆ ಇತರ ಸಿಬ್ಬಂದಿಯನ್ನು ನೇಮಕಾತಿ ಮಾಡಲಾಗುತ್ತಿದೆ. ಕ್ಲಿನಿಕ್‌ ಶೀಘ್ರ ಆರಂಭವಾಗಲಿದೆ
- ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.