ಗುಂಡ್ಲುಪೇಟೆ: ಹುಲಿ ದಾಳಿಗೆ ಸಿಲುಕಿ ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕುಂದಕೆರೆ ಗ್ರಾಮದ ಶುಕ್ರವಾರ ನಡೆದಿದೆ.
ಕುಂದಕೆರೆ ಗ್ರಾಮದ ಪಿ.ನಾಗಮಲ್ಲಪ್ಪ ಹಸು ಕಳೆದುಕೊಂಡ ರೈತ. ಇವರು ಜಮೀನಿನಲ್ಲಿ ನಾಲ್ಕು ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಗುಡಿಕೆರೆ ಕಡೆಯಿಂದ ಬಂದ ಹುಲಿ ಹಸುಗಳ ಮೇಲೆ ದಾಳಿ ನಡೆಸಿದೆ. ಎರಡು ಹಸಗಳು ತಮ್ಮ ಬಳಿಗೆ ಓಡಿಕೊಂಡು ಬಂದ ಕಾರಣ ಏನಾಯಿತೆಂದು ನೋಡಲು ಹೋದಾಗ ಹುಲಿ ಒಂದು ಹಸುವಿನ ಕತ್ತಿನ ಭಾಗ ಕಚ್ಚುತ್ತಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಇದರಿಂದ ಹುಲಿ ಅಲ್ಲಿಂದ ಕಾಲ್ಕಿತ್ತಿದೆ. ಸುತ್ತಲಿನ ರೈತರು ರಕ್ಷಣೆಗೆ ಬಂದರೂ ಪ್ರಯೋಜನವಾಗಿಲ್ಲ. ಮೃತಪಟ್ಟ ಎರಡು ಹಸುಗಳು ಗರ್ಭ ಧರಿಸಿದ್ದವು. ವಾರದಲ್ಲಿ ಕರು ಹಾಕುವ ಹಂತದಲ್ಲಿದ್ದವು.
ಹುಲಿ ದಾಳಿಯ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಕುಂದಕೆರೆ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ರೈತ ನಾಗಮಲ್ಲಪ್ಪ ಅವರಿಗೆ ನಷ್ಟವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ನಷ್ಟ ತುಂಬಿಕೊಡುವ ಮೂಲಕ ಹೈನುಗಾರಿಕೆ ಮುಂದುವರಿಸಲು ಅವಕಾಶ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.